ಶಿರಾ ತಾಲೂಕು ಜ್ಯುಯೆಲರಿ ಶಾಪ್ ದರೋಡೆ ಪ್ರಕರಣ ಭೇಧಿಸಿದ ಪೊಲೀಸರು ವಶಪಡಿಸಿಕೊಂಡ ಚಿನ್ನ, ಬೆಳ್ಳಿ ಆಭರಣ ವೀಸಿದ ಎಸ್ಪಿ ಕೆ.ವಿ.ಅಶೋಕ್.
- ಹಾಡುಹಗಲೇ ಜ್ಯುಯೆಲರ್ಸ್ ಶಾಪ್ ದರೋಡೆ
- 12 ಗಂಟೆಯೊಳಗೆ ದರೋಡೆಕೋರರ ಬಂಧನ
- ಸಮಯಪ್ರಜ್ಞೆ, ವೃತ್ತಿಪರತೆ ಮೆರೆದ ಪೊಲೀಸರು
ತುಮಕೂರು: ಜ್ಯುಯೆಲರ್ಸ್ ಶಾಪ್ ದರೋಡೆಕೋರರನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ ಜಿಲ್ಲೆಯ ಪೊಲೀಸರು 12 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಪೊಲೀಸರ ಸಮಯಪ್ರಜ್ಞೆ, ವೃತ್ತಿಪರತೆ ಹಿಡಿದ ಕೈಗನ್ನಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವನ್ನು ಬೆನ್ನುತಟ್ಟಿದರು.
ಶಿರಾ ತಾಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಚೆ ಗೇಟ್ನಲ್ಲಿರುವ ಶ್ರೀ ಜಗತಾಂಬ ಜ್ಯೂಯಲರ್ಸ್ ಶಾಪ್ಗೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ನುಗ್ಗಿದ ನಾಲ್ವರು ದರೋಡೆಕೋರರು ಅಂಗಡಿಯಲ್ಲಿದ್ದ ದಿನೇಶ್ ಹಾಗೂ ಅವರ ಅಜ್ಜಿ ನಾತಿದೇವಿ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಬುಲೇರೊ ವಾಹನದಲ್ಲಿ ಪರಾರಿಯಾಗಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಕ್ಷಣಾರ್ಧದಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಹೆದ್ದಾರಿಗಳಲ್ಲಿ ನಾಕಾಬಂದಿ ನಿರ್ಮಿಸಲು ಸಂದೇಶ ನೀಡುತ್ತಿದ್ದಂತೆ ದರೋಡೆಕೋರರ ಯುರ್ಟನ್ ಹೊಡೆದು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಟನೆ ನಡೆದ ಕ್ಷಣದಿಂದ ಕಾರ್ಯಾಚರಣೆಗೆ ಇಳಿದ ಪೊಲೀಸರು 12 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜಸ್ತಾನ ಮೂಲದ ಅರವಿಂದ್ ಕುಮಾರ್ (28), ಡುಂಗರ್ ಸಿಂಗ್ (24). ಮಹೇಂದರ್ ಸಿಂಗ್ (32) ಹಾಗೂ ಮೂಲತ ರಾಜಸ್ತಾನ ಸದ್ಯ ಕೋಲಾರ ಜಿಲ್ಲೆಯ ಮಾಲೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಧುಸಿಂಗ್ (28) ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಬುಲೆರೋ ವಾಹನ, ಸುಲಿಗೆ ಮಾಡಿದ್ದ ಚಿನ್ನ ಬೆಳ್ಳಿ ಆಭರಣಗಳು ಹಾಗೂ ಚಿನ್ನ ಲೇಪಿತ ಆಭರಣಗಳನ್ನು (ರೋಲ್ಡ್ ಗೋಲ್ಡ್ ) ವಶಪಡಿಸಿಕೊಂಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳ್ಳಂಬೆಳ್ಳ ಠಾಣೆಯಲ್ಲಿ ಬಿಎನ್ಎಸ್ ರೀತ್ಯಾ ಕಲಂ 309 (6) ಪ್ರಕರಣ ದಾಖಲಾಗಿದೆ.
ಟನೆ ನಡೆದ ಸುದ್ದಿತಿಳಿದ ಕ್ಷಣಾರ್ಧದಲ್ಲಿ ಅರ್ಲಟ್ ಆದ ಶಿರಾ ಉಪವಿಭಾಗ ಪೊಲೀಸರು, ಬುಲೆರೋ ವಾಹನದ ಚಲನವಲದ ಮೇಲೆ ನಿಗಾ ಇಟ್ಟರು. ಹೆದ್ದಾರಿಗಳಲ್ಲಿ ಸಂದೇಶ ನೀಡಿ ನಾಕಾಬಂಧಿ ನಿರ್ಮಾಣಕ್ಕೆ ಮುಂದಾದರು. ಬೆಂಚ್ಗೇಟ್ನಲ್ಲಿ ಡಕಾಯಿತಿ ಮಾಡಿ ಬುಲೆರೋ ವಾಹನ ಹತ್ತಿದ ದರೋಡೆಕೋರರು ಇನ್ನೂ ತಾವರೆಕೆರೆ ತಲುಪಿರಲಿಲ್ಲ. ರಸ್ತೆಯಲ್ಲಿ ನಾಕಾಬಂಧಿ ಹಾಕಿದ್ದ ಪೊಲೀಸರನ್ನು ಕಂಡೊಂಡನೆ ಯುರ್ಟನ್ ಹೊಡೆದರು. ಬುಲೆರೋ ಬೆನ್ನಟ್ಟಿದ್ದ ಎಎಸ್ಪಿ ಸಿ.ಗೋಪಾಲ್, ಶಿರಾ ಡಿವೈಎಸ್ಪಿ ಬಿ.ಕೆ.ಶೇಖರ್, ಪೊಲೀಸ್ ಇನ್ಸೆಪೆಕ್ಟರ್ ಪ್ರವಿಣ್ ಕುಮಾರ್ ವಾಹನಗಳನ್ನು ಕಂಡೊಂಡನೆ ದರೋಡೆಕೋರರು ಮತ್ತಷ್ಟು ಗಲಿಬಿಲಿಗೊಂಡಿದ್ದಾರೆ. ಈ ವೇಳೆ ಪೊಲೀಸರಿಗೆ ವಾಹನಕ್ಕೆ ಗುದ್ದೇ ಬಿಟ್ಟಿದ್ದರು.
ದರೋಡೆಕೋರರ ಹಿಡಿಯಲು ಗ್ರಾಮಸ್ಥರು ಪೊಲೀಸರ ನೆರವಿಗೆ ನಿಂತರು. ಭುವನಹಳ್ಳಿ, ಸೋರೆಕುಂಟೆ, ಮೇಕೆರಹಳ್ಳಿ, ಕೆಂಚಪ್ಪನಹಳ್ಳಿ, ತಿತ್ತಾಗಾನಹಳ್ಳಿ, ನಿಂಬೆಮರದಹಳ್ಳಿ ಗ್ರಾಮಸ್ಥರ ನೆರವಿನಿಂದ ರಸ್ತೆಗಳನ್ನು ಬ್ಲಾಕ್ ಮಾಡಿದ್ದರಿಂದ ಹಳ್ಳಿ ರಸ್ತೆ ಕಡೆಗೆ ದರೋಡೆಕೋರರು ಬುಲೆರೋ ವಾಹನ ತಿರುಗಿಸಿದರು. ಮುದಿಗೆರೆ ಕಾವಲ್, ಮೇಕೆರಹಳ್ಳಿ ಅರಣ್ಯ ಪ್ರದೇಶಕ್ಕೆ ನುಗ್ಗಿದ ಪರಿಣಾಮ ಪತ್ತೆತಂಡದಲ್ಲಿದ್ದ ಪೊಲೀಸರು ಇಡೀ ರಾತ್ರಿ ಕೂಂಬಿಂಗ್ ಕೈಗೊಂಡರು. ಕಾಡಿನಲ್ಲಿ ಮರೆಯಾಗಲು ಯತ್ನಿಸಿದ ಆರೋಪಿಗಳು ಒಬ್ಬೊಬ್ಬರೆ ಪೊಲೀಸರ ಬಲೆಗೆ ಬಿದ್ದರು. ಬೆಳಗಾಗುವ ಹೊತ್ತಿಗೆ ನಾಲ್ವರು ಪೊಲೀಸರ ವಶದಲ್ಲಿದ್ದರು.