ತುಮಕೂರಿನಲ್ಲಿ ಜೆಡಿಎಸ್​ ಜಿಲ್ಲಾಧ್ಯಕ್ಷ ಆರ್​.ಸಿ.ಆಂಜನಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಟಿ.ಆರ್​.ನಾಗರಾಜು, ಕೆ.ಎಂ.ತಿಮ್ಮರಾಯಪ್ಪ, ಆರ್​.ಉಗ್ರೇಶ್​, ಮುದ್ದಿಮಡು ರಂಗಶಾಮಯ್ಯ, ನಾಗರಾಜು ಮತ್ತಿತರರು ಇದ್ದರು.  
ತುಮಕೂರು

ಜೆಡಿಎಸ್​ ಬೆಳ್ಳಿಹಬ್ಬ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ನ.21, 22 ರಂದು ಬೆಂಗಳೂರಿನಲ್ಲಿ
  • 25ನೇ ವರ್ಷಾಚರಣೆ
  • ಜೆಡಿಎಸ್​ ಜಿಲ್ಲಾಧ್ಯಕ್ಷ ಆರ್​.ಸಿ.ಆಂಜನಪ್ಪ
ತುಮಕೂರು: ಜಾತ್ಯಾತಿತ ಜನತಾದಳ ಸ್ಥಾಪನೆಯಾಗಿ 25 ವರ್ಷ ತುಂಬಿದ ಸಂದರ್ಭದಲ್ಲಿ ಪಕ್ಷದ ಕಚೇರಿ ಬೆಂಗಳೂರಿನ ಜೆ.ಪಿ. ಭವನದಲ್ಲಿ ನ. 21 ಮತ್ತು 22ರಂದು ಬೆಳ್ಳಿಹಬ್ಬ ಆಚರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ಬೆಳ್ಳಿಹಬ್ಬ ಆಚರಿಸುತ್ತಿರುವುದು ಇದೇ ಮೊದಲು. ಈ ಸಂದರ್ಭದಲ್ಲಿ ನಮ್ಮ ಜೆಡಿಎಸ್​ ಪಕ್ಷವನ್ನು ಮತ್ತಷ್ಟು ಬಲಾಢ್ಯವಾಗಿ ಸಂಘಟಿಸಲು ಕಾರ್ಯಕರ್ತರು ಸಂಕಲ್ಪ ಮಾಡುವಂತೆ ಜೆಡಿಎಸ್​ ಜಿಲ್ಲಾಧ್ಯಕ್ಷ ಆರ್​.ಸಿ.ಆಂಜನಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಕ್ಷದ ಸಂಸ್ಥಾಪಕರು, ಮಾಜಿ ಪ್ರಧಾನಿಗಳೂ ಆದ ಎಚ್​.ಡಿ.ದೇವೇಗೌಡರ ಅವಿರತ ಪರಿಶ್ರಮ ಮತ್ತು ದಣಿವರಿಯದ ನಾಯಕತ್ವವು ಜೆಡಿಎಸ್​ 25 ವರ್ಷ ಪೂರೈಸಲು ಕಾರಣವಾಗಿದೆ. ಬೆಳ್ಳಿಹಬ್ಬ ಆಚರಣೆ ಅಂಗವಾಗಿ ನ.21 ರಂದು ಸಂಜೆ ಜೆ.ಪಿ. ಭವನದಲ್ಲಿ ಸೇವಾದಳ ಘಟಕದಿಂದ ಧ್ವಜಾರೋಹಣ ನಡೆಯಲಿದೆ. ಸಂಜೆ 6.-30ಕ್ಕೆ ವಿವಿಧ ರಾಜ್ಯಗಳಿಂದ ಬಂದಿರುವ ಪಕ್ಷದ ರಾಜ್ಯ ಪರಿಷತ್​, ರಾಷ್ಟ್ರೀಯ ಪರಿಷತ್​ಗಳ ಪ್ರತಿನಿಧಿಗಳ ಸಭೆ ನಡೆಯಲಿದೆ. 22ರಂದು ಪಕ್ಷದ ರಜತಮಹೋತ್ಸವ ಮತ್ತು ರಾಷ್ಟ್ರೀಯ ಮಹಾ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಬೆಳ್ಳಿಹಬ್ಬದ ಲಾಂಚನ ಬಿಡುಗಡೆ, ಕಿರುಚಿತ್ರ ಹಾಗೂ ಪಕ್ಷ ಬೆಳೆದುಬಂದ ಹಾದಿಯ ಪ್ರದರ್ಶಿನಿಯ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.
ಜೆಡಿಎಸ್​ನ ಬೆಳ್ಳಿಹಬ್ಬ ಆಚರಣೆ ಅಂಗವಾಗಿ ಡಿಸೆಂಬರ್​ 1ರಿಂದ 15ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಬೃಹತ್​ ಕಾರ್ಯಕರ್ತರ ಬೃಹತ್​ ಸಮಾವೇಶ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.
ಗುಬ್ಬಿ ಜೆಡಿಎಸ್​ ಮುಖಂಡ ನಾಗರಾಜು ಮಾತನಾಡಿ, ಪಕ್ಷದ ರಜತಮಹೋತ್ಸವವು 25 ವರ್ಷಗಳ ನಮ್ಮ ನಿರಂತರ ಹೋರಾಟ ಮತ್ತು ಆಡಳಿತ ಸಾಧನೆ ಸಂಭ್ರಮಿಸುವ ಸಮಯ. ಈ ಸಂಭ್ರಮದಲ್ಲಿ ನಾವೆಲ್ಲರೂ ಭಾಗವಹಿಸುವುದು ಹೆಮ್ಮೆಯ ವಿಷಯ. ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಬೆಳ್ಳಿಹಬ್ಬ ಆಚರಣೆ ಸಮಾರಂಭದಲ್ಲಿ ಭಾಗವಹಿಸುವರು ಎಂದು ಹೇಳಿದರು.
ಜಿಲ್ಲಾ ಜೆಡಿಎಸ್​ ಕಾರ್ಯಾಧ್ಯಕ್ಷ ಟಿ.ಆರ್​.ನಾಗರಾಜು, ಮುಖಂಡರಾದ ಸೋಲಾರ್​ ಕೃಷ್ಣಮೂರ್ತಿ, ಆರ್​.ಉಗ್ರೇಶ್​, ಮುದಿಮಡು ರಂಗಶಾಮಯ್ಯ, ಹೆಬ್ಬೂರು ರಾಮಣ್ಣ, ಯೋಗಾನಂದಕುಮಾರ್​, ಗಂಗಣ್ಣ, ಭೈರೇಶ್​, ಎಸ್​.ಡಿ.ಕೃಷ್ಣಪ್ಪ, ರಂಗನಾಥ್​, ಸೊಗಡು ವೆಂಕಟೇಶ್​, ಕೆಂಪರಾಜು, ಲಕ್ಷ್ಮಮ್ಮ, ಮಧುಗೌಡ, ಆಂಜನಪ್ಪ, ರಾಧಾ, ಯಶೋಧ ಮತ್ತಿತರರು ಹಾಜರಿದ್ದರು.