- ಐಟಿಎಫ್ ಡಬ್ಲೂ 35 ಮಹಿಳಾ ಚಾಂಪಿಯನ್ ಶಿಪ್
- ಸಿಂಗಲ್ಸ್ನಲ್ಲಿ ಭಾರತೀಯರ ಪಾರಮ್ಯ
- ನಿರಾಸೆ ಮೂಡಿಸಿದ ಸ್ನಿಗ್ಧಾ ಕಾಂತಾ
ತುಮಕೂರು: ಭಾರತದ ಮಧುರಿಮಾ ಸಾವಂತ್ ಐಟಿಎಫ್ ವಿಶ್ವ ಮಹಿಳಾ ಟೆನಿಸ್ ಚಾಂಪಿಯನ್ಶಿಪ್ (ಡಬ್ಲೂ35 ಟೂರ್ನಿ) ಸಿಂಗಲ್ಸ್ನಲ್ಲಿ ಶುಭಾರಂಭ ಮಾಡಿದರು.
ನಗರದ ವಿವಿ ಆವರಣದ ಜಿಲ್ಲಾ ಟೆನಿಸ್ ಕ್ರೀಡಾಂಗಣದಲ್ಲಿ ಮಂಗಳವಾರ ಪ್ರಧಾನ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಮಧುರಿಮಾ ಸಾವಂತ್ 6-2, 3-6, 6-1 ಸೆಟ್ಗಳಿಂದ ರಷ್ಯಾದ ಮಾರಿಯಾ ಮಿಕೈಲೋವಾ ಅವರನ್ನು ಸೋಲಿಸಿ ಪ್ರೀ-ಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿದರು. ಮೊದಲ ಸೆಟ್ ಅನ್ನು ನಿರಾಯಾಸವಾಗಿ 6-2 ರಿಂದ ಗೆದ್ದ ಮಧುರಿಮಾ 2ನೇ ಸೆಟ್ನಲ್ಲಿ ಮಿಕೈಲೋವಾ ಹೋರಾಟದ ಮುಂದೆ ಶರಣಾದರು. 3ನೇ ಹಾಗೂ ನಿರ್ಣಾಯಕ ಸೆಟ್ನಲ್ಲಿ ಮಧುರಿಮಾ ಆರಂಭದಿಂದಲೇ ಮೇಲುಗೈ ಸಾಧಿಸಿ 6-1 ರಿಂದ ಸುಲಭವಾಗಿ ಗೆದ್ದುಬಿಗಿದರು.
ಮತ್ತೊಂದು ಪಂದ್ಯದಲ್ಲಿ ಸಂದೀಪ್ತಿ ಸಿಂಗ್ ರಾವ್ 6-3, 6-4 ನೇರ ಸೆಟ್ಗಳಿಂದ ಯಶಸ್ವಿನಿ ಪನ್ವಾರ್ರನ್ನು ಮಣಿಸಿದರು. ಪೂಜಾ ಇಂಗಳೆ 7-5, 1-6, 6-4 ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಡ್ಯಾನಿಕಾ ಫರ್ನಾಂಡೊರನ್ನು ಸೋಲಿಸಿದರು.
ಕ್ವಾಲಿಫೈಯಿಂಗ್ ಸುತ್ತಿನಲ್ಲಿ ಭರವಸೆ ಮೂಡಿಸಿದ್ದ ಆತಿಥೇಯ ಕರ್ನಾಟಕದ ಸ್ನಿಗ್ಧಾ ಕಾಂತಾ ಪ್ರಧಾನ ಸುತ್ತಿನ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಸ್ನಿಗ್ಧಾ 0-6, 3-6 ರಿಂದ ಸೋನಾಲ್ ಪಾಟೀಲ್ ಎದುರು ಸುಲಭ ತುತ್ತಾದರು.
ಒಜೆಕಿಗೆ ಸೋಲು: ರಷ್ಯಾದ ಕ್ಸೆನಿಯಾ ಲುಸ್ಕಟೋವಾ 6-3, 7-6 ನೇರ ಸೆಟ್ ಗಳಿಂದ ಜಪಾನ್ನ 7ನೇ ಶ್ರೇಯಾಂಕಿತ ಮಿಚಿಕಾ ಒಜೆಕಿ ವಿರುದ್ಧ ಅರ್ಹ ಗೆಲುವು ದಾಖಲಿಸಿದರೆ, ರಷ್ಯಾದ ಐದನೇ ಶ್ರೇಯಾಂಕಿತ ಎಲಿನಾ ನೆಪ್ಲಿ 6-4, 6-1 ಸೆಟ್ಗಳಿಂದ ಭಾರತದ ಹರ್ಷಿಣಿ ಎನ್.ನಾಗರಾಜ್ರನ್ನು ಮಣಿಸಿ ಪ್ರೀ-ಕ್ವಾರ್ಟರ್ಗೆ ಲಗ್ಗೆಯಿಟ್ಟರು.
ರಷ್ಯಾಜೋಡಿಗೆ ಆಘಾತ: ಮಹಿಳಾ ಡಬಲ್ಸ್ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ವೈದೇಹಿ ಚೌಧರಿ ಮತ್ತು ಪೋಲೆಂಡ್ನ ಜುಝುನ್ನಾ ಪಾವ್ಲಿಕೋವ್ಸಾ 6-1, 6-2 ನೇರ ಸೆಟ್ಗಳಿಂದ ರಷ್ಯಾದ ಮಾರಿಯಾ ಮಿಕೈಲೋವಾ ಮತ್ತು ಭಾರತದ ಸಂದೀಪ್ತಿ ಸಿಂಗ್ ರಾವ್ ಜೋಡಿಯನ್ನು ಸೋಲಿಸಿತು.
4ನೇ ಶ್ರೇಯಾಂಕದ ಭಾರತದ ಶ್ರವ್ಯಾ ಶಿವಾನಿ ಚಿಲಕಲಪುಡಿ ಮತ್ತು ಝೀಲ್ ದೇಸಾಯಿ 6-0, 6-2 ಸೆಟ್ಗಳಿಂದ ಭಾರತದ ಯಶಸ್ವಿನಿ ಪನ್ವಾರ್ ಮತ್ತು ಬೇಲಾ ತಮ್ಮಾಂಕರ್ರನ್ನು ಸುಲಭವಾಗಿ ಮಣಿಸಿದರು.
ಭಾರತದ ಐಶ್ವರ್ಯ ಜಾಧವ್ ಮತ್ತು ಆಕೃತಿ ನಾರಾಯಣ್ ಸೋಂಕುಸಾರೆ 6-4, 7-5 ನೇರ ಸೆಟ್ಗಳಿಂದ ರಷ್ಯಾದ 2ನೇ ಶ್ರೇಯಾಂಕದ ಅರಿನಾ ಅರಿಫುಲ್ಲಿನಾ ಮತ್ತು ಎಕಟೆರಿನಾ ಯಾಶಿನಾರನ್ನು ಮಣಿಸಿ ಆಘಾತ ನೀಡಿದರು.
ಶ್ರೀಣಿತಿ ಚೌಧರಿ ಮತ್ತು ಜಿ.ಡಿ.ಮೇಘನಾ 0-6, 2-6 ರಿಂದ ರಷ್ಯಾದ ಕ್ಸೆನಿಯಾ ಲಾಸ್ಕುಟೋವಾ ಮತ್ತು ಎಲಿನಾ ನೆಪ್ಲಿ ಜೋಡಿಗೆ ಸುಲಭ ತುತ್ತಾದರು. ತುಮಕೂರು ತಾಲೂಕು ಸೀತಕಲ್ನ ಗಿಡ್ಡನಹಳ್ಳಿಯ ಮೇಘನಾರಿಂದ ಉತ್ತಮ ಪ್ರದರ್ಶನ ನಿರೀಕ್ಷೆಯಲ್ಲಿ ತವರು ಪ್ರೇಕ್ಷಕರಿಗೆ ನಿರಾಸೆಯಾಯಿತು.