ವಿಧಾನ ಪರಿಷತ್​ ಪ್ರವಿಲೇಜಸ್​ ಕಮಿಟಿಯ ಆದೇಶ 
ತುಮಕೂರು

ಜಿಲ್ಲಾಧಿಕಾರಿ ಶುಭಕಲ್ಯಾಣ್​ ವಿರುದ್ಧ ಹಕ್ಕುಚ್ಯುತಿ ಪ್ರಕರಣ!?

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್​ ಹಕ್ಕುಬಾಧ್ಯತಾ ಸಮಿತಿ ಸೂಚನೆ
  • ಖುದ್ದು ಹಾಜರಾಗಿ ಸ್ಪಷ್ಟನೆ ನೀಡಲು ಸಿಎಸ್​ ಆದೇಶ
  • ಜಿಲ್ಲೆಯ ಕೆಲವು ಶಾಸಕರಿಂದ ಡಿಸಿ ವಿರುದ್ಧ ದೂರು
ತುಮಕೂರು: ಜಿಲ್ಲಾಧಿಕಾರಿ ಶುಭಕಲ್ಯಾಣ್​ ವಿಧಾನ ಪರಿಷತ್​ ಹಕ್ಕುಬಾಧ್ಯತಾ ಸಮಿತಿಗೆ ಅಗೌರವ ತೋರಿರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು ಶಿಸ್ತು ಕ್ರಮಜರುಗಿಸಿ ವರದಿ ನೀಡುವಂತೆ ಸಮಿತಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್​ಗೆ ಜೂ.24ರಂದು ಪತ್ರದಲ್ಲಿ ಸೂಚಿಸಿದೆ.
ವಿಧಾನ ಪರಿಷತ್​ ಕಾರ್ಯದರ್ಶಿ ಜ್ಯೋತಿ ಜೂ.23ರಂದು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಕರ್ನಾಟಕ ವಿಧಾನ ಪರಿಷತ್​ ಹಕ್ಕುಬಾಧ್ಯತಾ ಸಮಿತಿ ಆದೇಶವನ್ನು ಲಿಖಿತವಾಗಿಯೇ ತಿಳಿಸಿರುವುದು ಕುತೂಹಲ ಮೂಡಿಸಿದೆ.
ಜಿಲ್ಲೆಯ ಶಾಸಕರಾದ ರಮೇಶ್​ಬಾಬು, ಚಿದಾನಂದ ಎಂ.ಗೌಡ ಹಾಗೂ ಇತರರು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ವಿವಿಧ ಸಭೆ, ಸಮಾರಂಭಗಳಿಗೆ ಅಲ್ಲಿನ ಸ್ಥಳಿಯ ವಿಧಾನ ಪರಿಷತ್​ ಶಾಸಕರುಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯವರು ಹೊರಡಿಸಿರುವ ಶಿಫಿ್ಟಾಚಾರ ನಿಯಮಗಳನ್ವಯ ಆಹ್ವಾನಿಸುತ್ತಿಲ್ಲ, ಈ ಬಗ್ಗೆ ದೂರು ನೀಡಿದರೂ ಸೂಕ್ತವಾಗಿ ಸ್ಪಂದಿಸುವುದಿಲ್ಲ ಎಂದು ಅನೇಕ ಹಕ್ಕುಚ್ಯುತಿ ಪ್ರಕರಣಗಳನ್ನು ದಾಖಲಿಸಿದ್ದರು.
ಈ ದೂರುಗಳ ಸಂಬಂಧವಾಗಿ ಸಮಿತಿ ಹಕ್ಕುಚ್ಯುತಿ ಪ್ರಕರಣಗಳನ್ನು ಪರಿಶೀಲಿಸಲು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಖುದ್ದು ಹಾಜರಾಗಿ ಮಾಹಿತಿ ಒದಗಿಸುವಂತೆ ಏ.9ರಂದು, ಮೇ.29ರಂದು, ಜೂ.5ರಂದು, 12ರಂದು ಹಾಗೂ 19ರಂದು ಅವಕಾಶ ನೀಡಿದ್ದರೂ ಗೈರಾಗಿದ್ದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್​ ಪ್ರಥಮ ಮೂರು ಸಭೆಗಳಿಗೆ ಯಾವುದೇ ಮಾಹಿತಿ ಕೂಡ ನೀಡದೇ ಗೈರು ಹಾಜರಾಗಿ ಸಮಿತಿ ಸಮಯ ಅಪಮೌಲ್ಯಗೊಳಿಸಿರುತ್ತಾರೆ ಮತ್ತು ಸಾಂವಿಧಾನಿಕವಾಗಿ ರಚಿಸಲಾಗಿರುವ ಸಮಿತಿಗೆ ಸಂಪೂರ್ಣ ಅಗೌರವ ಸಹ ತೋರಿಸಿರುತ್ತಾರೆ. ಆದಾಗ್ಯೂ, ಸಮಿತಿಯು ಹಾಜರಾಗಲು ಜೂ.12 ಮತ್ತು 19ರಂದು ಕಾಲಾವಕಾಶ ನೀಡಿದ್ದರೂ ಪತ್ರದ ಮೂಲಕ ಹಾಜರಾತಿಗೆ ವಿನಾಯಿತಿ ಕೋರಿ ಮಹತ್ವವಲ್ಲದ ಸಕಾರಣವನ್ನು ನಮೂದಿಸಿರುವುದನ್ನು ಸಮಿತಿ ಗಮನಿಸಿ ತೀವ್ರ ಅಸಮಧಾನ ಮತ್ತು ಆಕ್ಷೇಪಣೆ ಸರ್ವಾನುಮತದಿಂದ ವ್ಯಕ್ತಪಡಿಸಿದೆ.
ಜಿಲ್ಲಾಧಿಕಾರಿ ಪದೇಪದೇ ಉದ್ದೇಶಪೂರ್ವಕವಾಗಿ ಹಕ್ಕುಬಾಧ್ಯತಾ ಸಮಿತಿ ಸಮಿತಿಯ ಸೂಚನೆಗಳನ್ನು ಕಡೆಗಣಿಸುತ್ತಿದ್ದು, ಅನಿವಾರ್ಯವಾಗಿ ಸದನದಲ್ಲಿ ಇವರ ಉದ್ದಟತನ ವರ್ತನೆಯನ್ನು ಹಕ್ಕುಚ್ಯುತಿ ಎಂದು ಪರಿಗಣಿಸಿ ಹಕ್ಕುಚ್ಯುತಿ ಸದನದಲ್ಲಿ ಮಂಡಿಸಲು ಆಸ್ಪದ ನೀಡದಂತೆ ಮುಂದಿನ ಸಭೆಗೆ
ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಗಮನಕ್ಕೆ ತರಲಾಗಿದೆ.
ಪ್ರಸ್ತುತ ವಿಧಾನ ಪರಿಷತ್​ ಹಕ್ಕುಬಾಧ್ಯತಾ ಸಮಿತಿಗೆ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್​ ತೋರಿರುವ ಅಗೌರವವನ್ನು ಆದ್ಯತೆ ಮೇರೆಗೆ ಪರಿಗಣಿಸಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಮಿತಿಯ ಎಲ್ಲಾ ಸದಸ್ಯರು ಸರ್ವಾನುಮತದಿಂದ ಸೂಚಿಸಿದ್ದು, ಈ ಮಾಹಿತಿಯನ್ನು ಸಹ ಕೈಗೊಂಡ ಕ್ರಮದ ಬಗ್ಗೆ ಸಮಿತಿಗೆ ಮಾಹಿತಿ ಒದಗಿಸುವಂತೆ ವಿಧಾನ ಪರಿಷತ್​ ಕಾರ್ಯದರ್ಶಿ ಜ್ಯೋತಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್​ಗೆ ಕೋರಿ ಪತ್ರ ಬರೆದಿದ್ದಾರೆ.
ವಿಧಾನ ಪರಿಷತ್​ ಕಾರ್ಯದರ್ಶಿ ಪತ್ರ ಸ್ವೀಕರಿಸಿರುವ ಸರ್ಕಾರದ ಮುಖ್ಯಕಾರ್ಯದರ್ಶಿ ಅದೇ ಪತ್ರದ ಮೇಲೆ ತುಮಕೂರು ಜಿಲ್ಲಾಧಿಕಾರಿ ಮುಂದಿನ ಸಭೆಗೆ(ಜೂ.30ರಂದು) ತಪ್ಪದೇ ಹಾಜರಾಗಬೇಕು ಎಂದು ಲಿಖಿತವಾಗಿ ಸೂಚಿಸಿದ್ದಾರೆ ಹಾಗಾಗಿ, ಸಮಿತಿ ಅಧ್ಯಕ್ಷ ಮಂಜುನಾಥ ಬಂಡಾರಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಶಾಸಕರ ಭವನ ಸಭಾಂಗಣದಲ್ಲಿ ಜರುಗುವ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಖುದ್ದು ಹಾಜರಾಗಿ ಮಾಹಿತಿ ಒದಗಿಸಲೇಬೇಕಿದೆ.
ಡಿಸಿ ಫ್ಯಾನ್​ ಗ್ರೂಪ್​ಗೂ ಕೆಲವು ಶಾಸಕರು ಆಕ್ಷೇಪ!?
ಜನಸ್ಪಂದನಾ ಸಭೆ, ಸಾಧನಾ ಸಮಾವೇಶ ಸೇರಿದಂತೆ ಜಿಲ್ಲೆಯಲ್ಲಿ ನಡೆಯುವ ಸರ್ಕಾರದ ವಿವಿಧ ಕಾರ್ಯಕ್ರಮಗಳ ಪೋಟೋ, ವೀಡಿಯೋಗಳಲ್ಲಿ ಸ್ಥಳಿಯ ಜನಪ್ರತಿನಿಧಿಗಳಿಗೆ ಆದ್ಯತೆ ನೀಡದೆ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಸ್ವಂತ ಸಾಧನೆ ಎಂಬಂತೆ ಬಿಂಬಿಸಿಕೊಂಡು ಸಾಧನೆಯ ವೈಭವೀಕರಣ ಮಾಡಿಕೊಳ್ಳುತ್ತಿರುವ ಬಗ್ಗೆ ಜಿಲ್ಲೆಯ ಕೆಲವು ಶಾಸಕರು ದೂರಿದ್ದಾರೆ ಎನ್ನಲಾಗಿದೆ.
ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶ ನಡೆದು ಒಂದು ತಿಂಗಳಾದರೂ ಜಿಲ್ಲಾಧಿಕಾರಿ ಸಾಧನೆ ಎಂಬಂತೆ ಪ್ರತ್ಯೇಕವಾಗಿ ವೃತ್ತಿಪರವಾಗಿ ಪೋಟೋ, ವೀಡಿಯೋ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಪೋಸ್ಟ್​ ಹಾಕುತ್ತಿರುವುದು ಶಾಸಕರ ಕೆಂಗಣ್ಣಿಗೆ ಗುರಿಯಾಗಿದ್ದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಹೆಸರಿನಲ್ಲಿ ಫ್ಯಾನ್​ ಗ್ರೂಪ್​​ ಕೂಡ ಸೃಜಿಸಲಾಗಿದೆ ಎಂದು ಸಿಎಂಗೂ ದೂರು ನೀಡಲಾಗಿದೆ ಎಂಬ ಗುಸುಗುಸು ಜಿಲ್ಲಾ ರಾಜಕಾರಣದಲ್ಲಿದೆ.
ಸದನದಲ್ಲಿ ಮಂಡನೆಯಾದರೆ ಏನಾಗಬಹುದು?
1.ಜಿಲ್ಲಾಧಿಕಾರಿ ವೇತನ, ಬಡ್ತಿ ತಡೆಯಬಹುದು
2.ಶಾಸನಸಭೆಗೆ ಕರೆದು ಛೀಮಾರಿ ಹಾಕಬಹುದು
3.ಪೋಸ್ಟಿಂಗ್​ ಕೊಡದೇ ಕೆಲಕಾಲ ಸುಮ್ಮನೆ ಕೂರಿಸಬಹುದು
4.ಕ್ಷಮಾಪಣೆ ಪತ್ರ ಬರೆಸಿಕೊಂಡು ಎಚ್ಚರಿಕೆ ನೀಡಬಹುದು
5.ಅಥವಾ ಇನ್ಯಾವುದೇ ಶಿಸ್ತುಕ್ರಮ ಜರುಗಿಸಬಹುದು.