ತುಮಕೂರಿನ ಶೆಟ್ಟಿಹಳ್ಳಿ ಪಾದಚಾರಿ ಸಬ್ವೇ ಅನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಲೋಕಾರ್ಪಣೆಗೊಳಿಸಿದರು. ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶಗೌಡ, ಎಚ್.ಎಸ್.ರವಿಶಂಕರ್ ಮತ್ತಿತರರು ಇದ್ದರು.
- ರೈಲ್ವೆ ಯೋಜನೆ ಕಾಮಗಾರಿಗಳಿಗೆ ವೇಗ
- ಭೂಸ್ವಾಧಿನ ಪ್ರಕ್ರಿಯೆ ತೊಡಕು ನಿವಾರಣೆ
- ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ
ತುಮಕೂರು: ತುಮಕೂರು-ದಾವಣಗೆರೆ ಮತ್ತು ತುಮಕೂರು -ರಾಯದುರ್ಗ ರೈಲ್ವೆ ಯೋಜನೆಗಳಿಗಿದ್ದ ಭೂಸ್ವಾಧಿನ ಪ್ರಕ್ರಿಯೆ ತೊಡಕು ಬಹುತೇಕ ನಿವಾರಣೆಯಾಗಿದೆ. ಶೀಘ್ರದಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ನಡುವಿನ ರೈಲು ಸಂಚಾರವನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಶುಕ್ರವಾರ ಶೆಟ್ಟಿಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಪಾದಚಾರಿ ಸಬ್ವೇ ಲೋಕಾರ್ಪಣೆ ಹಾಗೂ ಕ್ಯಾತಸಂದ್ರ ರೈಲು ನಿಲ್ದಾಣದಲ್ಲಿ ಹೊಸ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ದೀರ್ಕಾಲದಿಂದ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳಿಗೆ ವೇಗ ನೀಡಲಾಗಿದ್ದು ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಅಶ್ವಿನಿ ವೈಷ್ಣವ್ ರೈಲ್ವೆ ಸಚಿವರಾದ ಬಳಿಕ ಕರ್ನಾಟಕ ರಾಜ್ಯಕ್ಕೆ 52 ಸಾವಿರ ಕೋಟಿ ರೂ., ಅನುದಾನ ಹರಿದುಬಂದಿದೆ. ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ ವರ್ಷಕ್ಕೆ ಕೇವಲ 380-400 ಕೋ.ರೂ., ಅನುದಾನ ರಾಜ್ಯಕ್ಕೆ ಸಿಗುತ್ತಿತ್ತು. ಈಗ ಹತ್ತುಪಟ್ಟು ಅನುದಾನ ಹೆಚ್ಚು ರೈಲ್ವೆ ಯೋಜನೆಗಳಿಗೆ ಸಿಗುತ್ತಿದೆ. ರಸ್ತೆ ಮೇಲ್ಸೇತುವೆಗಳು ಮತ್ತು ರಸ್ತೆ ಕೆಳಸೇತುವೆಗಳು ನಿರ್ಮಾಣಕ್ಕೆ ವಿಶೇಷ ಗಮನ ಹರಿಸಲಾಗಿದೆ. ಇದರ ಮೂಲಕ ಸುರಕ್ಷತೆ ಹೆಚ್ಚಿಸಿ, ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಸಬ್ ವೇ ಸದ್ಭಳಕೆ: ಹೊಸ ಪಾದಚಾರಿ ಸಬ್ವೇ ಮೂಲಕ ಸ್ಥಳಿಯ ನಿವಾಸಿಗಳು ರೈಲು ಹಳಿಗಳನ್ನು ಸುರಕ್ಷಿತವಾಗಿ ಮತ್ತು ಸುಲಭವಾಗಿ ದಾಟಬಹುದಾಗಿದೆ. ತುಮಕೂರು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ರೈಲ್ವೆ ಸೌಲಭ್ಯಗಳನ್ನು ಮೇಲದರ್ಜೆಗೆ ಏರಿಸಬೇಕಾಗಿದೆ. ರಾಜ್ಯ ಸರ್ಕಾರ ಕೈ ಜೋಡಿಸಿದ್ದರೆ ನನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳಿಗೆ ಇನ್ನೂ ಹೆಚ್ಚಿನ ವೇಗ ಸಿಗುತ್ತಿತ್ತು ಎಂದು ಸೋಮಣ್ಣ ಹೇಳಿದರು.
ತುಮಕೂರು-ದಾವಣಗೆರೆ ಮತ್ತು ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳ ಕಾಮಗಾರಿಗೆ ವೇಗದೊರೆತಿದೆ. ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ವಿಶ್ವಾಸ ವ್ಯಕ್ತಪಡಿಸಿದರು.
ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಸೋಮಣ್ಣ ಅವರು ಸಚಿವರಾದ ಬಳಿಕ ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿದ್ದ ರೈಲ್ವೆ ಕಾಮಗಾರಿಗಳಿಗೆ ವೇಗ ಸಿಕ್ಕಿದೆ. ಪ್ರಾದೇಶಿಕ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪ್ರವಿಣ್ ಕಟಾರಕಿ, ಎಸ್.ಶಿವಪ್ರಸಾದ್, ಎಸ್.ಪಿ.ಚಿದಾನಂದ್ ಮತ್ತಿತರರು ಉಪಸ್ಥಿತರಿದ್ದರು.
ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ
ಮಲ್ಲಸಂದ್ರ ಗೇಟ್ ಮತ್ತು ಹೆಗ್ಗೆರೆ ಗೇಟ್ನ (21.32 ಕೋಟಿ) ಕಾಮಾಗಾರಿಗಳನ್ನು ಪರಿಶೀಲಿಸಿದ ಕೇಂದ್ರ ಸಚಿವ ವಿ.ಸೋಮಣ್ಣ, ಭೀಮಸಂದ್ರದಲ್ಲಿನ 1.87 ಕೋಟಿ ರೂ., ರಸ್ತೆ ಕೆಳಸೇತುವೆ ಕಾಮಗಾರಿಯನ್ನು ವೀಸಿದರು. ನಂತರ ಬಡ್ಡಿಹಳ್ಳಿ ಗೇಟ್ (17.38 ಕೋಟಿ), ಬಟವಾಡಿ ಗೇಟ್ (43.37 ಕೋ.ರೂ., ), ಮೈದಾಳ ಗೇಟ್ (40.60 ಕೋ. ರೂ., ) ಹಾಗೂ ಪಂಡಿತನಹಳ್ಳಿ ಗೇಟ್ನ ರಸ್ತೆ ಮೇಲ್ಸೇತುವೆಗಳ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ, ಕಾಮಗಾರಿ ವಿಳಂಬ ಮಾಡದಂತೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಬೆಂಗಳೂರು ನಗರ-ಸಂಪಿಗೆ ರೋಡ್ (ತುಮಕೂರು ಜಿಲ್ಲೆ)ವರೆಗೆ 25 ಲೆವೆಲ್ ಕ್ರಾಸಿಂಗ್ಗಳಿದ್ದು ಹೆಚ್ಚಿನ ಕಡೆ ರಸ್ತೆ ಮೇಲ್ಸೇತುವೆ ಹಾಗೂ ಕೆಲವು ಕಡೆ ರಸ್ತೆ ಕೆಳಸೇತುವೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೆ 5 ರಸ್ತೆ ಕೆಳಸೇತುವೆಗಳು ಪೂರ್ಣಗೊಂಡಿದ್ದು, 2 ಪ್ರಗತಿಯಲ್ಲಿವೆ. 11 ರಸ್ತೆ ಮೇಲ್ಸೇತುವೆಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ವಿಭಾಗದಲ್ಲಿ 1,500 ಕೋ.ರೂ., ರೈಲ್ವೆ ಕಾಮಗಾರಿಗಳು ಜಾರಿಯಲ್ಲಿವೆ.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ