Improving the level of education through bicycle distribution 
ತುಮಕೂರು

ಸೈಕಲ್​ ವಿತರಣೆಯಿಂದ ಶಿಕ್ಷಣದಮಟ್ಟ ಸುಧಾರಣೆ

ಗುಬ್ಬಿ: ದೂರದ ಊರುಗಳಿಂದ ಶಾಲೆಗಳಿಗೆ ಬರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಸೈಕಲ್​ ವಿತರಣೆ ಮಾಡಲಾಗುತ್ತಿದೆ ಎಂದು ಎನ್​ಟಿಟಿ ಡೆಟಾ ಕಂಪನಿಯ ಉಪ ವ್ಯವಸ್ಥಾಪಕ ಕೋಟೇಶ್ವರ್​ ತಿಳಿಸಿದರು.
ತಾಲೂಕಿನ ಕಡಬ ಕರ್ನಾಟಕ ಪಬ್ಲಿಕ್​ ಶಾಲೆಯಲ್ಲಿ ಎನ್​ಟಿಟಿ ಡೆಟಾ ಕಂಪನಿ ಹಾಗೂ ಡೊನೆಟ್​ ಕಾರ್ಟ್​ ಸಂಸ್ಥೆಯ ಸಹಯೋಗದೊಂದಿಗೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್​ ವಿತರಣೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳ ಮನೆ ಹಾಗೂ ಶಾಲೆಯ ಅಂತರ ಹೆಚ್ಚಿದ್ದಾಗ ವಿದ್ಯಾರ್ಥಿಗಳು ಶಾಲೆ ಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಿ ಬರಲು ಸೈಕಲ್​ ನೀಡಿದಾಗ ಅವರ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗುತ್ತದೆ. ಶಿಕ್ಷಣದ ಮಟ್ಟವು ಸುಧಾರಿಸುತ್ತದೆ. ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಜೀವನಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
ಮುಖ್ಯಶಿಕ್ಷಕಿ ಇಂದಿರಾ ಮಾತನಾಡಿ, ಮಕ್ಕಳು ಶಾಲೆಗೆ ಬರಲು ಕೆಲವು ಊರುಗಳಿಂದ ಸಾರಿಗೆ ವ್ಯವಸ್ಥೆಯ ಸಮಸ್ಯೆ ಇರುವುದರಿಂದ ಎನ್​ಟಿಟಿ ಡೇಟಾ ಕಂಪನಿಯವರು ಸೈಕಲ್​ ಗಳನ್ನು ವಿತರಣೆ ಮಾಡಿರುವುದು ಅನುಕೂಲಕರವಾಗಿದೆ. ಇದರಿಂದ ಶಾಲೆಯಲ್ಲಿ ಮಕ್ಕಳ ದಾಖಲಾತಿಯೂ ಹೆಚ್ಚುತ್ತದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೂ ಅನುಕೂಲವಾಗುತ್ತದೆ ಎಂದರು.
ಶಾಲೆಯ 25 ವಿದ್ಯಾರ್ಥಿಗಳಿಗೆ ಸೈಕಲ್​ ವಿತರಣೆ ಮಾಡಲಾಯಿತು.