- ಕಚೇರಿಯಲ್ಲಿ ಸಿಬಿಐ, ಸಿಐಡಿ, ಪೊಲೀಸರ ಶೋಧ
- ವಿವಿ ಸಿಂಡಿಕೇಟ್ಗೆ ರಾಜ್ಯಪಾಲರ ನಾಮಿನಿ
- ಮಾಹಿತಿ ನೀಡಲು ಹಿಂದೇಟು ಹಾಕಿದ "ಪ್ರಭಾರಿ'ಗಳು
- ಕೆಪಿಎಸ್ಸಿ ಹಗರಣದ ಆರೋಪಿ ಮಾಹಿತಿ ಸಂಗ್ರಹ
ತುಮಕೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ತುಮಕೂರು ವಿಶ್ವವಿದ್ಯಾಲಯ ರಾಜ್ಯಪಾಲರ ನಾಮನಿದೇಶಿತ ಸಿಂಡಿಕೇಟ್ ಸದಸ್ಯ ಬಸವರಾಜ ಕನ್ನಾಳೆ ದೆಹಲಿಯಲ್ಲಿ ಬಂಧನವಾಗಿ ಮೂರು ದಿನ ಕಳೆದರೂ ರಾಜ್ಯಪಾಲರ ಕಚೇರಿಯಿಂದ ಸದಸ್ಯ ಸ್ಥಾನದಿಂದ ವಜಾ ಆದೇಶವಾಗದಿರುವುದು ಅಚ್ಚರಿ ಮೂಡಿಸಿದೆ.
ಬೀದರ್ ಮೂಲದ ಬಸವರಾಜ ಕನ್ನಾಳೆ 2025 ಆಗಸ್ಟ್ನಲ್ಲಿ ತುಮಕೂರು ವಿವಿ ಸಿಂಡಿಕೇಟ್ ಸದಸ್ಯನಾಗಿ ನೇಮಕವಾಗಿದ್ದು ಸಾಕಷ್ಟು ಹಣಕಾಸು ವ್ಯವಹಾರಗಳಲ್ಲಿ, ವಿವಿ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಸಿಐಡಿ, ಸಿಬಿಐ ಹಾಗೂ ಸ್ಥಳಿಯ ಪೊಲೀಸರು ವಿಶ್ವವಿದ್ಯಾಲಯದಲ್ಲಿ ದಾಖಲಾತಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಬಸವರಾಜ ಕನ್ನಾಳೆ ಸಿಂಡಿಕೇಟ್ ಸದಸ್ಯನಾಗಿ ನಾಮನಿರ್ದೇಶನಗೊಂಡ ನಂತರ ವಿವಿಯಲ್ಲಿ ಹಣಕಾಸು ವಹಿವಾಟು ನಡೆಯುವ ಆಯಕಟ್ಟಿನ ಖರೀದಿ ಮತ್ತು ಕಾಮಗಾರಿ ನಿರ್ಧಾರಣ ಉಪಸಮಿತಿಯಲ್ಲಿ ಸದಸ್ಯನಾಗಿ ನೇಮಕವಾಗಿದ್ದಾನೆ ಜತೆಗೆ ವಾರ್ಷಿಕ ಬಜೆಟ್ ಜಾರಿಯಲ್ಲಿಯೂ ಪ್ರಭಾವ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡಿರುವ ಶಂಕೆಯಿದ್ದು ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗಿದೆ.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶಗೊಳ್ಳುವವರು ಯಾವುದೇ ರಾಜಕೀಯ ಪಕ್ಷದ ಸದಸ್ಯನಾಗಿರಬಾರದು, ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿರಬಾರದು ಎಂಬ ನಿಯಮವಿದೆ. ಬಸವರಾಜ ಕನ್ನಾಳೆ 2025 ಆಗಸ್ಟ್ನಲ್ಲಿ ಸಿಂಡಿಕೇಟ್ ಸದಸ್ಯನಾಗಿ ನೇಮಕವಾದ ಬಳಿಕವೂ ಬೀದರ್ನಲ್ಲಿ ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಪೋಟೋ ಆತನ ೇಸ್ಬುಕ್ನಲ್ಲಿಯೇ ಹಾಕಿಕೊಳ್ಳಲಾಗಿದೆ. ಇನ್ನೂ ಕೆಪಿಎಸ್ಸಿ ನೇಮಕಾತಿ ಹಗರಣದಲ್ಲಿ ಬಂಧನವಾಗಿ ಮೂರು ದಿನವಾದರೂ ಆತನ ಸದಸ್ಯ ಸ್ಥಾನ ರಾಜಭವನದಿಂದ ವಜಾಗೊಳ್ಳದಿರುವುದು ತುಮಕೂರು ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಆತಂಕ ಮೂಡಿಸಿದೆ.
ರಾಜಕೀಯ ಮುಖಂಡರೊಂದಿಗೆ ಇರುವ ಪೊಟೋಗಳೇ ಬಸವರಾಜ ಕನ್ನಾಳೆ ಬಂಡವಾಳವಾಗಿದ್ದು ಇಂತಹ ಪ್ರಭಾವಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ನಂಬಿಸಿ ಕೆಪಿಎಸ್ಸಿ, ರಾಜಭವನ, ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿಕೊಡುವುದಾಗಿ ಹಣವಿರುವವನ್ನು ನಂಬಿಸುತ್ತಿದ್ದ ಎನ್ನಲಾಗಿದೆ. ಇತ್ತೀಚಿಗೆ ತುಮಕೂರು ವಿವಿಯಲ್ಲಿ ಜರುಗಿದ ಕಾರ್ಯಕ್ರಮಗಳಲ್ಲಿಯೂ ಮುಂಚೂಣಿಯಲ್ಲಿದ್ದ ಎಲ್ಲಾ ಟೆಂಡರ್ಗಳನ್ನು ತನಿಗೆ ಬೇಕಾದವರಿಗೆ ಕೊಡಿಸಿದ್ದ ಎಂಬ ಅನುಮಾನವಿದೆ.
ತುಮಕೂರು ವಿವಿ ಸೇರಿದಂತೆ ರಾಜ್ಯದ ಸಾಕಷ್ಟು ವಿಶ್ವವಿದ್ಯಾಲಯ ಕುಲಪತಿಗಳೊಂದಿಗೆ ಸಂಪರ್ಕ ಸಾಧಿಸಿದ್ದ ಬಸವರಾಜ ಕನ್ನಾಳೆ ವಿವಿಗಳಲ್ಲಿ ನಡೆಯುವ ಕಾಮಗಾರಿಗಳನ್ನು ತುಂಡುಗುತ್ತಿಗೆ ಕೊಡಿಸುವ ದಂಧೆ ಕೂಡ ಮಾಡಿರುವ ದೂರುಗಳಿವೆ. ತುಮಕೂರು ವಿವಿಯಲ್ಲಿ ಪ್ರಭಾವ ಬಳಸಿಕೊಂಡು ತನಗೆ ಬೇಕಾದವರಿಗೆ ಗುತ್ತಿಗೆ ಕೊಡಿಸಿರುವ ಅನುಮಾನಗಳಿದ್ದು ಈ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
"ವಿಸಿ' ಹುದ್ದೆ ಆಕಾಂಕ್ಷಿ ಪ್ರಾಧ್ಯಾಪಕರ ಜತೆ ಸಂಪರ್ಕ:
ತುಮಕೂರು ವಿವಿ ಸಿಂಡಿಕೇಟ್ ಸದಸ್ಯನಾಗಿ ನೇಮಕವಾದ ಒಂದು ವರ್ಷದಲ್ಲಿಯೇ ಬಸವರಾಜ ಕನ್ನಾಳೆ ವ್ಯವಹಾರ ಚತುರು ಎನ್ನಿಸಿಕೊಂಡಿದ್ದಾರೆ.
ತುಮಕೂರು ವಿವಿಯಲ್ಲಿ ಖಾಲಿಯಾಗಿರುವ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ಸಾಕಷ್ಟು ಹಿರಿಯ ಪ್ರಾಧ್ಯಾಪಕರ ಸಂಪರ್ಕ ಸಾಧಿಸಿದ್ದ ಬಸವರಾಜ ಕನ್ನಾಳೆ ಕುಲಪತಿ ಹುದ್ದೆ ಕೊಡಿಸುತ್ತೇನೆ ಎಂದು ಅವರೆಲ್ಲರೊಂದಿಗೆ ವ್ಯವಹಾರ ಕೂಡ ಆರಂಭಿಸಿದ್ದ ಎಂಬ ಮಾತು ವಿವಿ ಆವರಣದಲ್ಲಿದೆ.
ಅನಂತಪುರಂ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಖಾಲಿರುವ ಕುಲಪತಿ ಹುದ್ದೆಗೆ ನೇಮಕ ಮಾಡಿಸುತ್ತೇನೆ ಎಂದು ತುಮಕೂರು ವಿವಿ ವಿಶ್ರಾಂತ ಕುಲಪತಿಯೊಬ್ಬರಿಂದ ಬಂಡವಾಳ ಕೂಡ ಹೂಡಿಸಿರುವ ವದಂತಿಯಿದ್ದು ಈ ಬಗ್ಗೆಯೂ ಸಿಐಡಿ, ಸಿಬಿಐ ತನಿಖೆ ನಡೆಸುತ್ತಿದೆ ಎನ್ನಲಾಗಿದೆ. ಬಸವರಾಜ ಕನ್ನಾಳೆ ಇತ್ತೀಚಿಗಿನ ದೂರವಾಣಿ ಕರೆಗಳ ಮಾಹಿತಿ ಸಂಗ್ರಹಿಸಿರುವ ತನಿಖಾಧಿಕಾರಿಗಳು ಎಲ್ಲಾ ಆಯಾಮಗಳಿಂದಲೂ ಆತನ ಅಕ್ರಮದ ಜಾಡು ಜಾಲಾಡಲಾರಂಭಿಸಿದ್ದಾರೆ.
ತುಮಕೂರು ವಿವಿ ಕುಲಪತಿ ಹುದ್ದೆಗೂ ಅರ್ಜಿ ಸಲ್ಲಿಸಿರುವ ಸಾಕಷ್ಟು ಹಿರಿಯ ಪ್ರಾಧ್ಯಾಪಕರು ಬಸವರಾಜ ಕನ್ನಾಳೆ ಸಂಪರ್ಕದಲ್ಲಿದ್ದು ನೇಮಕಾತಿಗೆ ಲಾಬಿ ನಡೆಸಲು ವ್ಯವಹಾರದ ಮಾತನಾಡಿದ್ದಾರೆ ಎನ್ನಲಾಗಿದೆ. ಅನಿರೀತ ಬೆಳವಣಿಗೆಯಲ್ಲಿ ಆತನ ಮೊಬೈಲ್ ಕರೆಗಳ ಮಾಹಿತಿ ಪೊಲೀಸರ ಕೈಸೇರಿರುವ ಹಿನ್ನೆಲೆಯಲ್ಲಿ ಆತತನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ಪ್ರಾಧ್ಯಾಪಕರ ಎದೆಬಡಿತ ಜೋರಾಗಿದೆ.
ತನಿಖೆಯಿಂದ ತಪ್ಪಿಸಿಕೊಳ್ಳಲು "ಪ್ರಭಾರ'ದ ನೆಪ:
ಕೆಪಿಎಸ್ಸಿ ಹಗರಣಕ್ಕೆ ಪೂರಕವಾಗಿ ಸಿಐಡಿ, ಸಿಬಿಐ ಹಾಗೂ ಜಿಲ್ಲಾ ಪೊಲೀಸ್ ಪ್ರತ್ಯೇಕವಾಗಿ ತುಮಕೂರು ವಿವಿಯಲ್ಲಿ ಬಸವರಾಜ ಕನ್ನಾಳೆಗೆ ಸಂಬಂಧಪಟ್ಟ ವ್ಯವಹಾರಗಳ ಬಗ್ಗೆ ತನಿಖೆ ಆರಂಭಿಸಿದ್ದು ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ನೀಡಲು ತುಮಕೂರು ವಿವಿ ಆಡಳಿತ ಮೀನಾಮೇಷ ಎಣಿಸಿರುವುದು ತನಿಖಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿಸಿದೆ.
ತುಮಕೂರು ವಿವಿಯಲ್ಲಿ ಕುಲಪತಿ(ಪ್ರೊ.ನಾಗಭೂಷಣ), ಕುಲಸಚಿವೆ (ನಹಿದಾ ಜಮ್ಜಮ್), ಹಣಕಾಸು ಅಧಿಕಾರಿ(ನರಸಿಂಹಮೂರ್ತಿ)ಪ್ರಮುಖ ಮೂರು ಹುದ್ದೆಗಳಲ್ಲಿಯೂ ಖಾಯಂ ಅಧಿಕಾರಿಗಳಲ್ಲದೆ ಪ್ರಭಾರಿಗಳೇ ಇದ್ದುಸೋಮವಾರ ಸಿಐಡಿ ಹಾಗೂ ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಲು ಸತಾಯಿಸಿದ್ದಾರೆ ಎನ್ನಲಾಗಿದೆ.
ತುಮಕೂರು ವಿವಿಯಲ್ಲಿ ನಾವು ಪ್ರಭಾರ ಅಧಿಕಾರದಲ್ಲಿ ಮಾತ್ರವಿದ್ದು ಮಾಹಿತಿ ನೀಡಲು ಸಮಯಾವಕಾಶ ಬೇಕು ಎಂದು ಕುಲಸಚಿವೆ ನಹಿದಾ ಜಮ್ಜಮ್, ಹಣಕಾಸು ಅಧಿಕಾರಿ ನರಸಿಂಹಮೂರ್ತಿ ಅಧಿಕಾರಿಗಳಿಗೆ ತಿಳಿಸಿ ಪ್ರಕರಣದಿಂದ ದೂರವಿರುವ ಪ್ರಯತ್ನ ನಡೆಸಿದ್ದಾರೆ ಆದರೆ, ಪಟ್ಟು ಬಿಡದ ಅಧಿಕಾರಿಗಳು ಕುಲಪತಿ ಪ್ರೊ.ನಾಗಭೂಷಣ ಅವರಿಂದ ಸಂಪೂರ್ಣ ಮಾಹಿತಿಯನ್ನು ಪಡೆದು ತೆರಳಿದ್ದಾರೆ.
ಪ್ರಭಾರದ ನೆಪ ಮಾಡಿಕೊಂಡು ಪ್ರಭಾರ ಹುದ್ದೆಯಲ್ಲಿರುವ ಅಧಿಕಾರಿಗಳು ಸಿಐಡಿ, ಸಿಬಿಐ ತನಿಖೆಗೆ ಸಹಕಾರ ನೀಡದಿದ್ದರೆ ನೋಟಿಸ್ ನೀಡುವ ಸಾಧ್ಯತೆಯೂ ಇದೆ ಎಂಬ ಗುಸುಗುಸು ಕೇಳಿಬಂದಿದೆ.