I will not allow the benefits meant for the poor to fall into the hands of the powerful. 
ತುಮಕೂರು

ಬಡವರ ಸವಲತ್ತು ಬಲಾಢ್ಯರ ಪಾಲಾಗಲು ಬಿಡಲ್ಲ

ತಿಪಟೂರು: ಸರ್ಕಾರದಿಂದ ಬಡವರಿಗೆ ನೀಡುವ ಸವಲತ್ತು ಶ್ರೀಮಂತರಿಗೆ ಸೇರಲು ಬಿಡುವುದಿಲ್ಲ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.
ನಗರದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಶನಿವಾರ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್​ ಬಿಮಾ (ವಿಮಾ) ಯೋಜನೆ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಈ ವರ್ಷ ಬರಗಾಲ ಗ್ಯಾರಂಟಿ ಎನ್ನಲಾಗಿದೆ. ರೈತ ಬೇಡುವ ಸ್ಥಿತಿಗೆ ಬರಬಾರದು ಎಂಬ ಕಾರಣಕ್ಕೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್​ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರೈತರೂ ವಿಮಾ ಕಂತು ಪಾವತಿಸಿ ಯೋಜನೆಯ ಪ್ರಯೋಜನ ಪಡೆಯಬಹುದು ಎಂದರು.
ಕೃಷಿ ಇಲಾಖೆ ಉಪನಿರ್ದೇಶಕ ಹುಲಿರಾಜ್​ ಮಾತನಾಡಿ, ತಾಲೂಕಿನ ರೈತರಿಗೆ 2023&-24 ನೇ ಸಾಲಿನಲ್ಲಿ ಒಟ್ಟು 60 ಕೋಟಿ ರೂ. ಬೆಳೆ ವಿಮೆ ಮಂಜೂರಾಗಿತ್ತು. ಅದಾದ ನಂತರ ಎರಡು ವರ್ಷಗಳವರೆಗೆ ಉತ್ತಮ ಮಳೆ ಸುರಿದ ಕಾರಣ ವಿಮೆ ಹಣ ಬಂದಿರಲಿಲ್ಲ. ತಾಲೂಕಿನ ಪ್ರತಿ ರೈತರು ಸ್ವಯಂ ಪ್ರೇರಿತರಾಗಿ ತಾವು ಬಿತ್ತಿರುವ ಬೆಳೆಗೆ ಅನುಗುಣವಾಗಿ ವಿಮೆ ಮಾಡಿಸುವ ಮೂಲಕ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ತಾಲೂಕಿನ ಹೊನ್ನವಳ್ಳಿ ಹೋಬಳಿ, ಕಿಬ್ಬನಹಳ್ಳಿ, ನೊಣವಿನಕೆರೆ ಮತ್ತು ಕಸಬಾ ಹೋಬಳಿಗಳಲ್ಲಿ ಬೆಳೆಯುವ ಅಧಿಸೂಚಿತ ಬೆಳೆಗಳಾದ ರಾಗಿ, ಹುರಳಿ, ಹೆಸರು, ತೊಗರಿ, ಎಳ್ಳು, ಬೆಳೆಗಳು ಮಳೆ ಆಶ್ರಿತ ಬೆಳೆಗಳಾಗಿದ್ದು, ಫಸಲ್​ ಬಿಮಾ ಯೋಜನೆಯಡಿ ರಾಗಿ ಬೆಳೆಗೆ ಪ್ರತಿ ಹೆಕ್ಟೇರಿಗೆ 49,900 ವಿಮೆ ಮೊತ್ತ ನಿಗದಿಯಾಗಿದ್ದು, ರೈತರು ಪ್ರತಿ ಎಕರೆಗೆ 403.89 ರೂ. ಪಾವತಿಸಬೇಕು. ಎಳ್ಳು ಬೆಳೆಗೆ ಹೆಕ್ಟೇರಿಗೆ 31,900 ನಿಗದಿಯಾಗಿದ್ದು, ಎಕರೆಗೆ 258.20, ಹೆಸರು ಬೆಳೆಗೆ ಹೆಕ್ಟೇರಿಗೆ 39,700 ನೀಡುತ್ತಿದ್ದು, ಎಕರೆಗೆ 321.33 ರೂ. ತೊಗರಿ ಹೆಕ್ಟೇರಿಗೆ 57,600 ರೂ. ನಿಗದಿಯಾಗಿದ್ದು. ಎಕೆರೆಗೆ 466.21 ರೂ., ಹುರಳಿ ಹೆಕ್ಟೇರಿಗೆ 23.500 ನಿಗದಿಯಾಗಿದ್ದು, ಎಕರೆಗೆ 190.21 ರೂ. ಪಾವತಿಸಬೇಕಿದೆ.