ಬುಧವಾರ ನಾಯಿ ದಾಳಿಗೆ ತುತ್ತಾಗಿರುವ ಕುರಿಗಳು.
- ಬೀದಿ ನಾಯಿಗೆ ಬೆಚ್ಚಿರುವ ಹುಳಿಯಾರು, ತೊರೆಸೂರಗನಹಳ್ಳಿ
ಬೀದಿ ನಾಯಿಗೆ ಬೆಚ್ಚಿರುವ ಹುಳಿಯಾರು, ತೊರೆಸೂರಗನಹಳ್ಳಿ
ಹುಳಿಯಾರು: ಕೆಲವು ದಿನಗಳಿಂದಲೂ ಹುಳಿಯಾರು ಸಮೀಪದ ತೊರೆ ಸೂರಗೊಂಡನಹಳ್ಳಿಯಲ್ಲಿ ಬೀದಿ ನಾಯಿಗಳ ಉಪಟಳ ಮಿತಿಮೀರಿದೆ, ಕೋಳಿ ಅಂಗಡಿಗಳ ತ್ಯಾಜ್ಯದಿಂದ ರಕ್ತದ ರುಚಿ ಹತ್ತಿಸಿಕೊಂಡಿರುವ ಹಸಿದ ನಾಯಿಗಳು ರೈತರು ಹಾಗೂ ಅವರು ಸಾಕು ಪ್ರಾಣಿಗಳ ಮೈಮೇಲೆ ಎರಗಲಾರಂಭಿಸಿವೆ. ನೂರಾರು ಕುರಿ, ಮೇಕೆಗಳನ್ನು ಕೊಂದು ನಷ್ಟಗಳನ್ನುಂಟು ಮಾಡುತ್ತಿವೆ.
ನಂದಿಹಳ್ಳಿ ರಸ್ತೆ ಬದಿಯಲ್ಲಿ ತ್ಯಾಜ್ಯ ಮಾಂಸ ತಿಂದು ಅದರ ರುಚಿಗೆ ಬಿದ್ದಿರುವ ಸಾಕು ಮತ್ತು ಬೀಡಾಡಿ ನಾಯಿಗಳು ಈಗ ನೇರವಾಗಿ ರೈತರ ಕುರಿ-, ಮೇಕೆಗಳನ್ನೇ ಬೇಟೆಯಾಡಲು ಶುರುಮಾಡಿವೆ. ಮೇಯಲು ಹೋಗುವ ಕುರಿಗಳ ಹಿಂಡಿಗೆ ನಾಯಿಗಳು ಒಮ್ಮೆಲೇ ಮುತ್ತಿಗೆ ಹಾಕಿ, ಅವುಗಳ ಕುತ್ತಿಗೆಗೆ ಬಾಯಿಹಾಕಿ ರಕ್ತ ಹೀರಿ ಕೊಲ್ಲುತ್ತಿರುವುದು ಕುರಿಗಾಹಿಗಳನ್ನು ಕಂಗಾಲಾಗಿಸಿದೆ.
ಕುರಿ ತಿನ್ನಲು ನಾಯಿಗಳು ದಾಳಿ ಮಾಡಿದಾಗ ರೈತ ಮೈಲಾರಣ್ಣ ದಂಪತಿ ಜೀವದ ಹಂಗು ತೊರೆದು ಹೋರಾಡಿ ಕುರಿಗಳನ್ನು ಬಿಡಿಸಿಕೊಂಡು ಬಂದಿದ್ದಾರೆ. ಹೀಗೆ ನಿತ್ಯವೂ ನಾಯಿಗಳ ಉಪಟಳ ಹೆಚ್ಚಾಗಿದ್ದು, ಬುಧವಾರ ಶಂಕರಯ್ಯ ಅವರ ಪತ್ನಿ 25 ಕುರಿಗಳನ್ನು ಮೇಯಿಸಲು ಚಾನಲ್ ಬಳಿಯ ಗದ್ದೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಐದಾರು ನಾಯಿಗಳು ದಾಳಿ ಮಾಡಿ 4 ಕುರಿಗಳನ್ನು ಸಾಯಿಸಿವೆ. ದಾಳಿಯ ಭಯಕ್ಕೆ ಬೆದರಿ ಓಡಿರುವ 5 ಕುರಿ ಇನ್ನೂ ಪತ್ತೆಯಾಗಿಲ್ಲ.
ಗ್ರಾಮದ ಸುತ್ತಮುತ್ತ ಮಾಂಸದ ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುತ್ತಿರುವುದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಈ ಬಗ್ಗೆ ನಿಗಾ ವಹಿಸಬೇಕಿರುವ ಪಶುಪಾಲನಾ ಇಲಾಖೆ, ಸ್ಥಳಿಯ ಗ್ರಾಪಂ ಕೂಡ ಜಾಣಮೌನ ವಹಿಸಿದೆ. ಅಧಿಕಾರಿಗಳು ಬೀದಿನಾಯಿ ನಿಯಂತ್ರಿಸಿ, ತ್ಯಾಜ್ಯವಿಲೇವಾರಿಗೆ ಕಡಿವಾಣ ಹಾಕದಿದ್ದರೆ ಜನರ ಮೇಲೂ ನಾಯಿಗಳು ಎರಗುವ ಅಪಾಯವಿದೆ.
ದಾಳಿಯ ಲೆಕ್ಕ: ಕಳೆದೊಂದು ವಾರದಲ್ಲಿ ರೈತ ಶಂಕರಯ್ಯಗೆ ಸೇರಿದ ಒಂದು ಕುರಿ, ರೈತ ನಾಗಣ್ಣ, ಒಂದು ಮೇಕೆ, ಬೈರಣ್ಣಗೆ ಸೇರಿದ ಒಂದು ಕುರಿ, ಸಿದ್ದಯ್ಯ ಅವರ ಒಂದು ಕುರಿ, ರಾಮಚಂದ್ರ ಹಾಗೂ ಉಮೇಶ್ ಅವರ 5 ಕುರಿಗಳನ್ನು ಈ ರಕ್ತದಾಹಿ ನಾಯಿಗಳು ಕೊಂದು ಹಾಕಿವೆ. ನಾಯಿಗಳಿಗೆ ಹೆದರಿ ರೈತರು ಕುರಿ, ಮೇಕೆಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುವಂತಾಗಿದೆ.