- ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಎಚ್ಚರಿಕೆ
- ಡಿಸಿಎಂ ಮಣಿದರೆ ಹೋರಾಟ ಅನಿವಾರ್ಯ
- ಜನರನ್ನು ಎತ್ತಿಕಟ್ಟುವ ಶಾಸಕ ರಂಗನಾಥ್
ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಮತ್ತೆ ಹೊಗೆಯಾಡಲಾರಂಭಿಸಿದೆ. ರೈತರು, ಸಾರ್ವಜನಿಕರ ಹೋರಾಟ ತೀವ್ರಗೊಂಡ ಹಿನ್ನೆಲೆ ಲಿಂಕ್ ಕೆನಾಲ್ ಕಾಮಗಾರಿಯಿಂದ ಹಿಂದೆ ಸರಿದಿದ್ದ ರಾಜ್ಯ ಸರ್ಕಾರ, ಈಗ ಮತ್ತೊಮ್ಮೆ ಲಿಂಕ್ ಕೆನಾಲ್ ಕಾಮಗಾರಿಗೆ ಮುಂದಾಗಿರುವುದು ಹೋರಾಟದ ಕಾವನ್ನು ಹೆಚ್ಚಿಸಿದೆ.
ಕುಣಿಗಲ್, ಮಾಗಡಿ, ರಾಮನಗರಕ್ಕೆ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಮೂಲ ನಾಲೆಯ ನಿಯಮಗಳನ್ನೇ ಉಲ್ಲಂಘಿಸಿ, ಜಿಲ್ಲೆಯ 7 ತಾಲೂಕುಗಳಿಗೆ ನೀರಿಲ್ಲದಂತೆ ಮಾಡುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ಗೆ ಜನರ ಸಂಪೂರ್ಣ ವಿರೋಧವಿದೆ. ಈ ಮಧ್ಯೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ರನ್ನು ಮುಂದಿಟ್ಟುಕೊಂಡು ಕಾಮಗಾರಿ ಆರಂಭಿಸುವ ಮಾತನಾಡುತ್ತಿರುವುದು ತರವಲ್ಲ. ಇದನ್ನು ವಿರೋಧಿಸಿ ಮತ್ತೊಮ್ಮೆ ನಾವು ಬೀದಿಗೆ ಇಳಿಯುವುದು ಅನಿವಾರ್ಯ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಹೇಳಿದ್ದಾರೆ.
ಕಳೆದ ಎರಡು ಮೂರು ವರ್ಷಗಳ ಅಂಕಿ ಅಂಶಗಳನ್ನು ಪರಿಶೀಲಿಸಿದರೆ, ಹೇಮಾವತಿ ನಾಲೆಯಿಂದ ಕುಣಿಗಲ್ ತಾಲೂಕಿಗೆ ಹರಿಯಬೇಕಾಗಿದ್ದ 3.05 ಟಿ.ಎಂ.ಸಿ ನೀರಿಗಿಂತಲು ಹೆಚ್ಚು ನೀರು ಹರಿದಿದೆ. ಒಂದು ವೇಳೆ ನಿಗದಿತ ನೀರು ಬಂದಿಲ್ಲವೆಂದಾದರೆ, ಈಗಾಗಲೇ ಆಗಲೀಕರಣಗೊಂಡಿರುವ ನಾಲೆಯನ್ನು ಮತ್ತಷ್ಟು ಆಗಲ ಮಾಡಿ ತೆಗೆದುಕೊಂಡು ಹೋಗಲು ಯಾರ ಅಭ್ಯಂತರವು ಇಲ್ಲ. ಆದರೆ, ಕುಣಿಗಲ್ ಹೆಸರಿನಲ್ಲಿ ರಾಮನಗರ, ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿದೆ. ಎಕ್ಸ್ಪ್ರೆಸ್ ಯೋಜನೆಯಿಂದ ಕುಣಿಗಲ್ ತಾಲೂಕಿನ ಜನರಿಗೂ ಯಾವುದೇ ಪ್ರಯೋಜನವಾಗದು.ಇದನ್ನು ಕುಣಿಗಲ್ ತಾಲೂಕಿನ ಜನರು ಅರ್ಥ ಮಾಡಿಕೊಳ್ಳಬೇಕು. ಶಾಸಕ ಎಚ್.ಡಿ.ರಂಗನಾಥ್ ಜನರನ್ನು ಎತ್ತಿಕಟ್ಟುವ ಹುನ್ನಾರಕ್ಕೆ ಯಾರು ಬಲಿಯಾಗಬಾರದು ಎಂದಿದ್ದಾರೆ.
ರಾಜ್ಯದ ಡಿಸಿಎಂ ಆಗಿರುವ ಕೊರಟಗೆರೆ ಶಾಸಕರು, ತಾವು ಉಪಮುಖ್ಯಮಂತ್ರಿಯಾಗಲು ಮತ ನೀಡಿ, ಗೆಲುವು ತಂದಕೊಟ್ಟ ಜನರನ್ನು ತಿರಸ್ಕಾರ ಮಾಡಿ, ಸರ್ಕಾರದ ಭಾಗ ಎಂಬ ಮುಲಾಜಿಗೆ ಒಳಗಾಗಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ಬೆಂಬಲ ವ್ಯಕ್ತಪಡಿಸಿರುವುದು ಸರಿಯಲ್ಲ. ಈ ಕಾಮಗಾರಿಯಿಂದ ಜಿಲ್ಲೆಯ ಗುಬ್ಬಿ, ಮಧುಗಿರಿ, ಕೊರಟಗೆರೆ, ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳ ಜನರಿಗೆ ತೀವ್ರ ತೊಂದರೆಯಾಗಲಿದೆ. ಇದರ ಅರಿವಿದ್ದು, ತಾವು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಮಗಾರಿಗಾಗಿ ಜನರ ಮನವೊಲಿಸುವ ಮಾತನಾಡುತ್ತಿರುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ಜಿ.ಪರಮೇಶ್ವರ್ ಈ ಹೇಳಿಕೆ,ಇಡೀ ಜಿಲ್ಲೆಯ ಜನತೆಯ ನಂಬಿಕೆಗೆ ಧಕ್ಕೆ ತರುವಂತಿದೆ. ತಾವು ಮತ್ತೊಮ್ಮೆ ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ದವೂ ಜಿಲ್ಲೆಯ ಜನ ಬೀದಿಗೆ ಇಳಿಯಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಡಿಸಿಎಂ ಪರಮೇಶ್ವರ್ ಅವರ ಈ ಹೇಳಿಕೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ ಜನರಲ್ಲಿ ಆತಂಕ ಉಂಟಾಗಿದೆ. ಮುಂದಿನ ಹೋರಾಟದ ರೂಪುರೇಷನ್ಗಳ ಕುರಿತು ಚರ್ಚಿಸಲು ಜೂ.11ರಂದು ಗುಬ್ಬಿಯಲ್ಲಿ ರೈತ ಸಂಘ, ಸಂಯುಕ್ತ ಕಿಸಾನ್ ಹೋರಾಟ ಸೇರಿದಂತೆ ಎಲ್ಲಾ ಸಂಘ,ಸಂಸ್ಥೆಗಳ ಸಭೆಯನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ನೀವು ಕಾಮಗಾರಿ ನಡೆಸಲು ಮುಂದಾದರೆ ಜಿಲ್ಲೆಯ ಜನರು ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. ಮತ್ತೊಮ್ಮೆ ಈ ವಿಚಾರದಲ್ಲಿ ಆಲೋಚಿಸುವಂತೆ ಗೋವಿಂದರಾಜು ಒತ್ತಾಯಿಸಿದ್ದಾರೆ.