ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹೇಮೆ ನೀರು ಹರಿಯುತ್ತಿದೆ.
- 650 ಕ್ಯುಸೆಕ್ ಪ್ರಮಾಣದಲ್ಲಿ ಹರಿಯುತ್ತಿರುವ ನೀರು
- 7 ದಿನದೊಳಗೆ ತುಂಬಲಿದೆ ಜಲಸಂಗ್ರಹಗಾರ
- 5 ತಿಂಗಳು ನೀರಿನ ಸಮಸ್ಯೆ ಇರೋಲ್ಲ
ತುಮಕೂರು: ಸ್ಮಾರ್ಟ್ಸಿಟಿ ತುಮಕೂರಿನ ಕುಡಿಯುವ ನೀರಿನ ದಾಹ ನೀಗಿಸುವ ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹೇಮೆ ನೀರು ತಲುಪಿದೆ. ಬೇಸಿಗೆ ಹಿನ್ನೆಲೆ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಜಿಲ್ಲಾಕೇಂದ್ರಕ್ಕೆ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ ಬುಧವಾರ ಬೆಳಗ್ಗೆ 9 ಗಂಟೆಯೊತ್ತಿಗೆ ಹೇಮೆ ನೀರು ಹರಿದುಬಂದಿದ್ದು 7 ದಿನದೊಳಗೆ ತುಂಬಲಿದೆ.
ಹಾಸನ ಜಿಲ್ಲೆ ಗೊರೂರು ಹೇಮಾವತಿ ಜಲಾಶಯದಿಂದ ತುಮಕೂರಿಗೆ ಮೇ 10 ರಂದು ನೀರು ಬಿಡಲಾಗಿದ್ದು ಬುಧವಾರ ಬೆಳಗ್ಗೆ ತುಮಕೂರು ತಲುಪಿದೆ. ಮೇ 20ರವರೆಗೆ ಹೇಮೆ ನೀರು ಹರಿಸಲಾಗುವುದು. ತುಮಕೂರು ಶಾಖಾ ನಾಲೆಯಲ್ಲಿ 1200 ಕ್ಯುಸೆಕ್ನಷ್ಟು ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಬುಗಡನಹಳ್ಳಿ ಜಲಸಂಗ್ರಹಾಗಾರದವರೆಗೆ 124 ಕಿ.ಮೀ., ನಾಲೆ ಉದ್ದವಿದ್ದು ತುಮಕೂರಿಗೆ ನೀರು ತಲುಪಲು 3 ದಿನ ಬೇಕಾಯಿತು.
ಬುಗಡನಹಳ್ಳಿ ಭರ್ತಿಗೆ 7 ದಿನ: ಹೇಮಾವತಿ ಶಾಖಾ ನಾಲೆಯಲ್ಲಿ 1200 ಕ್ಯುಸೆಕ್ನಷ್ಟು ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆಯಾದರೂ ಬುಗಡನಹಳ್ಳಿ ಜಲಸಂಗ್ರಹಾಗಾರಕ್ಕೆ 650 ಕ್ಯುಸೆಕ್ ಪ್ರಮಾಣದ ನೀರು ಹರಿಯುತ್ತಿದೆ. ಹಾಗಾಗಿ, ಜಲಸಂಗ್ರಹಾಗಾರ ತುಂಬಲು 6-7 ದಿನಗಳು ಬೇಕಿದೆ. ಸದ್ಯ ಜಲಸಂಗ್ರಹಾಗಾರದಲ್ಲಿ ಇರುವ ನೀರನ್ನು ಇನ್ನೂ 15 ದಿನಗಳವರೆಗೆ ಪೂರೈಸಬಹುದಾಗಿದೆ.
366 ಎಂಸಿಎಫ್ ಟಿ ಸಾಮರ್ಥ್ಯದ ಬುಗಡನಹಳ್ಳಿ ಜಲಸಂಗ್ರಹಗಾರವನ್ನು ಒಮ್ಮೆ ತುಂಬಿಸಿಕೊಂಡರೆ ಇನ್ನೂ 5 ತಿಂಗಳವರೆಗೆ ತುಮಕೂರು ನಗರವು ನೀರಿನ ಸಮಸ್ಯೆಯಿಂದ ಮುಕ್ತಿ ಹೊಂದಲಿದೆ. ಹೆಚ್ಚುವರಿಯಾಗಿ 192 ಎಂಸಿಎಫ್ ಟಿ ಸಾಮರ್ಥ್ಯದ ಹೆಬ್ಬಾಕ ಕೆರೆಯನ್ನು ತುಂಬಿಸಿಕೊಳ್ಳಬಹುದು. ಪ್ರತಿನಿತ್ಯ 66-70 ಎಂಎಲ್ಡಿ ನೀರಿನ ಅವಶ್ಯಕತೆ ಇದ್ದು ಜತೆಗೆ ಕೊಳವೆಬಾವಿಗಳಿಂದ ಪ್ರತಿನಿತ್ಯ 16 ಎಂಎಲ್ಡಿ ನೀರು ಲಭ್ಯವಿರಲಿದೆ.
ನಗರದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ತಲೆದೋರಿತ್ತು. ಹಾಸನ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿಕೊಂಡ ಹಿನ್ನೆಲೆ ಹೇಮಾವತಿ ಜಲಾಶಯದಿಂದ ಭಾನುವಾರದಿಂದ ತುಮಕೂರು ಬ್ರಾಂಚ್ ಕ್ಯಾನೆಲ್ಗೆ ನೀರು ಬಿಡಲಾಗಿದ್ದು ಬುಧವಾರ ಬುಗಡನಹಳ್ಳಿಗೆ ನೀರು ತಲುಪಿದೆ. 5 ತಿಂಗಳು ಇನ್ನು ನೀರಿನ ಸಮಸ್ಯೆ ಇರುವುದಿಲ್ಲ.
ಫೋಟೋ: ತುಮಕೂರು ನಗರಕ್ಕ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಾರಕ್ಕೆ ಹರಿದುಬರುತ್ತಿರುವ ಹೇಮಾವತಿ ನೀರು.