ತುಮಕೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಇ-&ಖಾತಾ ಆಂದೋಲನ , ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರಗಳನ್ನು ಸಚಿವ ಜಿ.ಪರಮೇಶ್ವರ್​ ವಿತರಿಸಿದರು. ಜಿ.ಬಿ.ಜ್ಯೋತಿಗಣೇಶ್​, ನಿಕೇತ್​ ರಾಜ್​ ಮೌರ್ಯ, ಶುಭ ಕಲ್ಯಾಣ್​, ಜಿ. ಪ್ರಭು, ಕೆ.ವಿ.ಅಶೋಕ್​, ಯೋಗಾನಂದ್​ ಮತ್ತಿತರರು ಇದ್ದರು.  
ತುಮಕೂರು

ಗ್ರೇಟರ್​ ತುಮಕೂರು ಪ್ರಸ್ತಾವನೆ ಸಲ್ಲಿಕೆ

ಪ್ರಮುಖ ಮುಖ್ಯಾಂಶಗಳು

  • ಗೃಹಸಚಿವ ಡಾ.ಜಿ.ಪರಮೇಶ್ವರ್​
  • ಮೂಲಸೌಕರ್ಯ ಅಭಿವೃದ್ಧಿ
  • ಬೆಂಗಳೂರಿಗೆ ಪರ್ಯಾಯ ನಗರ
ತುಮಕೂರು: ಗ್ರೇಟರ್​ ತುಮಕೂರು ಘೋಷಣೆಗಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು ಈ ಬಗ್ಗೆ ಸರ್ಕಾರ ಹಂತದಲ್ಲಿ ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಭಾನುವಾರ ನಗರಾಭಿವೃದ್ಧಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಇ-ಖಾತಾ ಆಂದೋಲನ , ವಿವಿಧ ಅನುದಾನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರೇಟರ್​ ತುಮಕೂರು ಘೋಷಣೆಯಿಂದ ನಗರಕ್ಕೆ ಹೆಚ್ಚಿನ ಅನುದಾನ ಹರಿದುಬರಲಿದೆ ಎಂದರು.
ರಸ್ತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಸುಧಾರಣೆಗೊಳ್ಳುತ್ತದೆ. ಕೈಗಾರಿಕೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಯೋಜಿತ ನಗರ ಅಭಿವೃದ್ಧಿ ಹೊಂದಿ ಜನರ ಜೀವನಮಟ್ಟ ಉತ್ತಮಗೊಳಿಸುವ ಉದ್ದೇಶದಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರು ನಗರವನ್ನು ಅಭಿವೃದ್ಧಿ ಪಡಿಸಬೇಕಿದೆ. ರಾಜ್ಯದಲ್ಲಿ ತುಮಕೂರು, ಮೈಸೂರು, ಹುಬ್ಬಳ್ಳಿ&ಧಾರವಾಡ ಜಿಲ್ಲೆಗಳು ಬಹಳ ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ ಎಂದು ತಿಳಿಸಿದರು.
ಪಟ್ಟಣಗಳಿಗೆ ವಲಸೆ: ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಭವಿಷ್ಯ ನಿಮಾರ್ಣದ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಿಂದ ಜನರು ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಗ್ರಾಮಗಳಲ್ಲಿ ಜೀವನ ಸಾಗಿಸಲು ಎದುರಾಗುವ ಸಮಸ್ಯೆಗಳ ಕಾರಣದಿಂದ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ನಗರಗಳಲ್ಲಿ ಬದುಕು ಸಹ ಸುಲಭವಲ್ಲ. ಅನೇಕ ಕುಟುಂಬಗಳು ಮೂಲಭೂತ ಸೌಕರ್ಯಗಳಿಲ್ಲದೆ ಕಷ್ಟಕರ ಜೀವನ ನಡೆಸುತ್ತಿವೆ. ರಾಜ್ಯದಲ್ಲಿ ಶೇ.40ರಷ್ಟು ಜನರು ಪಟ್ಟಣಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಪರಮೇಶ್ವರ್​ ಕಳವಳ ವ್ಯಕ್ತಪಡಿಸಿದರು.
ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್​ ಮಾತನಾಡಿ, ಪೌರಕಾರ್ಮಿಕರು ಹಾಗೂ ಕೊಳಗೇರಿ ಪ್ರದೇಶದ ನಿವಾಸಿಗಳ ಜೀವನಮಟ್ಟವನ್ನು ಸುಧಾರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕೊಳಗೇರಿ ಪ್ರದೇಶಗಳಲ್ಲಿ ಯುಜಿಡಿ ಹಾಗೂ ಕಸ ವಿಲೇವಾರಿ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಬೇಕಾದ ಅಗತ್ಯವಿದೆ. ಜತೆಗೆ, ಕೊಳಗೇರಿ ಪ್ರದೇಶಗಳ ಹೆಸರನ್ನು ಬದಲಿಸುವ ಮೂಲಕ ಸಾಮಾಜಿಕ ಗೌರವ ಹೆಚ್ಚಿಸುವ ಕ್ರಮ ಕೈಗೊಳ್ಳಬೇಕು ಎಂದರು.
ಬಿಎಂಟಿಸಿ ಉಪಾಧ್ಯಕ್ಷ ನಿಕೇತ್​ ರಾಜ್​ ಮೌರ್ಯ, ಜಿಲ್ಲಾಧಿಕಾರಿ ಶುಭ ಕಲ್ಯಾಣ್​, ಜಿಪಂ ಸಿಇಒ ಜಿ. ಪ್ರಭು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.