ತುಮಕೂರಿನಲ್ಲಿ ಕೂಲಿ ಕಾರ್ಮಿಕರಿಗೆ ಹೊದಿಕೆ ವಿತರಣೆ
- ರಿಂಗ್ ರಸ್ತೆಯಲ್ಲಿರುವ ಕೂಲಿಕಾರ್ಮಿಕರು
ತುಮಕೂರು: ಕೊರೆಯುವ ಚಳಿ ಹಿನ್ನೆಲೆಯಲ್ಲಿ ನಗರದಲ್ಲಿರುವ ನಿರ್ಗತಿಕರಿಗೆ ಹಾಗೂ ಉತ್ತರ ಕರ್ನಾಟಕದಿಂದ ಬಂದಿರುವಂತಹ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಕಂಬಳಿ ಹಾಗೂ ಉಣ್ಣೆಯ ಟೋಪಿಗಳನ್ನು ವಿತರಿಸಿಸಲಾಯಿತು.
ತುಮಕೂರಿನ ರಿಂಗ್ ರೋಡ್ ಬಳಿ, ಸಪ್ತಗಿರಿ ಬಡಾವಣೆ ಹಾಗೂ ಬಡ್ಡಿಹಳ್ಳಿ ಬಳಿ ಇರುವ ಗುಡಿಸಲು ವಾಸಿಗಳಿಗೆ, ಉಚಿತವಾಗಿ ಕಂಬಳಿ, ಸ್ವೆಟರ್ ಹಾಗೂ ಉಣ್ಣೆಯ ಟೋಪಿಗಳನ್ನು ವಿತರಿಸಲಾಯಿತು. ಬೆಳಗಿನ ಚುಮು ಚುಮು ಚಳಿಯಲ್ಲಿಯೂ ತುಮಕೂರಿನಲ್ಲಿ ರಿಂಗ್ ರಸ್ತೆಯ ಬಳಿಯಿರುವ ಮೂರು ಕೊಳಚೆ ಪ್ರದೇಶಗಳಿಗೆ ಭೇಟಿಯಿತ್ತು ಮುಖ್ಯವಾಗಿ ವೃದ್ಧರಿಗೆ, ಅಶಕ್ತರಿಗೆ, ಕಟ್ಟಡ ಕೂಲಿ ಕಾರ್ಮಿಕರಿಗೆ ವಿತರಿಸಲಾಯಿತು.
ಪ್ರತೀ ವರ್ಷವೂ ಇದೇ ತೆರನಾದ ಸೇವೆ ಸಲ್ಲಿಸುತ್ತಿರುವ ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದಜೀ ರವರನ್ನು ಗುರುತಿಸಿದ ಆ ಕೂಲಿ ಕಾರ್ಮಿಕರು ಅತ್ಯಂತ ಸಂತೋಷ ಮತ್ತು ಆದರತೆಯಿಂದ ಸ್ವಾಮೀಜಿಯವರಿಗೆ ತಮ್ಮ ಗುಡಿಸಲುಗಳಿಗೆ ಬರಮಾಡಿಕೊಂಡರು.
ಜಪಾನಂದಜೀ ಗುಡಿಸಲಿನಲ್ಲಿದ್ದ ಬ ಡ ಮಹಿಳೆಯೊಬ್ಬಳು “ಸ್ವಾಮಿ ನಿನಗಾಗಿ ಜೋಳದ ರೊಟ್ಟಿಯನ್ನು ಮಾಡಿರುತ್ತೇನೆ, ಸ್ವೀಕರಿಸು ಎಂದು ವಿನಂತಿಸಿಕೊಂಡರು. ಭಾರತೀಯ ಸಂಪ್ರದಾಯದ ಆ ಅಭ್ಯಾಸ ಇಂದಿಗೂ ಜೀವಂತವಾಗಿದೆ ಎಂಬುದನ್ನು ಸ್ವಾಮೀಜಿ ಸ್ಮರಿಸಿದರು.
ತೆಂಗಿನ ಗರಿ ಮತ್ತು ಪ್ಲಾಸ್ಟಿಕ್‍ಗಳಿಂದ ನಿರ್ಮಿಸಿರುವ ಗುಡಿಸಲುಗಳ ಮಧ್ಯೆ ಸ್ವಾಮೀಜಿಯವರು ನಡೆದಾಡುತ್ತಾ ನೊಂದ ಜನರಿಗೆ ಸಹಾಯಹಸ್ತ ನೀಡುತ್ತಿರುವುದು ಕಳೆದ 40 ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದ್ದಾರೆ.
ಸ್ವಾಮೀಜಿ ಮಾತನಾಡಿ, ಸ್ವಾಮಿ ವಿವೇಕಾನಂದರು ಬಯಸಿದ ರೀತಿಯಲ್ಲಿ “ಮಾನವನಲ್ಲಿ ಮಾಧವನನ್ನು ಕಂಡು ಸೇವೆ ಸಲ್ಲಿಸುವ” ಪವಿತ್ರ ಪರಂಪರೆ ಮುಂದುವರಿಸಲಾಗಿದೆ ಎಂದರು.
ಸೇವಾ ಕಾರ್ಯದಲ್ಲಿ ತುಮಕೂರು ವಿವಿ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಕೆ.ಜಿ.ಪರಶುರಾಮ್ ನೇತೃತ್ವದಲ್ಲಿ ಸ್ವಯಂಸೇವಕರು ಭಾಗವಹಿಸಿದ್ದರು. ಸೇವಾಶ್ರಮದ ಸಂಯೋಜಕ ಎಂ.ಎಸ್.ನಾಗರಾಜು, ವೀರೇಶ್ ಇದ್ದರು.