ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಉಚಿತ ಪಠ್ಯಪುಸ್ತಕಗಳನ್ನು ಪ್ರಾಚಾರ್ಯ ರಾಜಕುಮಾರ್ ವಿತರಿಸಿದರು. ಟಿ.ವಿ. ಪ್ರಕಾಶ್, ಆರೀಫ್ ಅಹಮದ್, ತಸ್ಲೀಮ್ ಉನ್ನೀಸಾ, ರವಿಕುಮಾರ್, ರೇಣುಕಪ್ರಸಾದ್ ಇದ್ದರು.
- ಜಿಲ್ಲೆಯ 71 ಸರ್ಕಾರಿ ಕಾಲೇಜುಗಳಲ್ಲಿ ಟೆಕ್ಸ್ಟ್ ಬುಕ್ ವಿತರಣೆ
- ಪ್ರಥಮ, ದ್ವೀತಿಯ ವರ್ಷದ 13 ಸಾವಿರ ವಿದ್ಯಾರ್ಥಿಗಳು
- ಈ ಶೈಕ್ಷಣಿಕ ವರ್ಷದಿಂದ ಪೂರೈಕೆ
ತುಮಕೂರು: ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗು ಉಚಿತ ಪಠ್ಯಪುಸ್ತಕ ಪೂರೈಸಲಾಗುತ್ತಿದ್ದು ಬುಧವಾರದಿಂದ ಜಿಲ್ಲೆಯ ಪ್ರಥಮ ಹಾಗೂ ದ್ವೀತಿಯ ಪಿಯು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ.
ಈವರೆಗೆ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪಠ್ಯಪುಸ್ತಕ ನೀಡಲಾಗುತ್ತಿದ್ದು ಈ ಶೈಕ್ಷಣಿಕ ಸಾಲಿನಿಂದ ಪಿಯುಸಿ ವಿದ್ಯಾರ್ಥಿಗಳಿಗು ಉಚಿತ ಪಠ್ಯಪುಸ್ತಕ ವಿತರಣಾ ಯೋಜನೆಯನ್ನು ವಿಸ್ತರಿಸಲಾಗಿದೆ. ರಾಜ್ಯದಲ್ಲಿ ಸುಮಾರು 61 ಲಕ್ಷ ವಿದ್ಯಾರ್ಥಿಗಳು ಈ ಯೋಜನೆ ಲಾಭ ಪಡೆಯಲಿದ್ದು ಜಿಲ್ಲೆಯಲ್ಲಿ ಪ್ರಥಮ, ದ್ವೀತಿಯ ಪಿಯುಸಿಯ ಒಟ್ಟು 13 ಸಾವಿರಕ್ಕು ಹೆಚ್ಚು ಮಕ್ಕಳಿಗೆ ಪುಸ್ತಕ ಭಾಗ್ಯ ದೊರೆಯಲಿದೆ.
71 ಪಿಯು ಕಾಲೇಜು: ಜಿಲ್ಲೆಯಲ್ಲಿ 71 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. ಕಳೆದ ವರ್ಷದ ದಾಖಲಾತಿ ಆಧರಿಸಿ 5853 ಸರ್ಕಾರಿ ಪಿಯು ಕಾಲೇಜಿನ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ತಾಲೂಕು ಮಟ್ಟದಲ್ಲಿ ನೋಡಲ್ ಕೇಂದ್ರಗಳನ್ನು ತೆರೆದು ಕಾಲೇಜುಗಳಿಗೆ ಪುಸ್ತಕ ಪೂರೈಸಲು ಕ್ರಮವಹಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಎಸ್.ರಾಧ "ವಿಜಯವಾಣಿ'ಗೆ ಮಾಹಿತಿ ನೀಡಿದರು.
ಸರ್ಕಾರಿ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವೀತಿಯ ವರ್ಷದ ಒಟ್ಟು 13 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಒಟ್ಟು 34 ವಿಷಯಳನ್ನು ಬೋಧಿಸಲಾಗುತ್ತಿದ್ದು, ಉಚಿತ ಪಠ್ಯಪುಸ್ತಕ ವಿತರಣೆಯಲ್ಲಿ ಪುಸ್ತಕಗಳು ಪೂರೃಕೆಯಾಗಲಿವೆ.
3 ಹಂತದಲ್ಲಿ ಪಠ್ಯ ಪುಸ್ತಕ ವಿತರಣೆ
ಎಸ್ಸೆಸ್ಸೆಲ್ಸಿ ಉತ್ತಮ ಲಿತಾಂಶ ಬಂದಿದ್ದರಿಂದ ಸರ್ಕಾರಿ ಪಿಯು ಕಾಲೇಜುಗಳಿಗೆ ದಾಖಲಾತಿಯು ಹೆಚ್ಚಿದೆ. ಈವರೆಗೆ ಮಕ್ಕಳ ಸಂಖ್ಯೆ 8 ಸಾವಿರ ದಾಟಿದೆ. ಆದರೆ, 2025&26ನೇ ಸಾಲಿನ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲಾತಿ ಆಧರಿಸಿ ಪಠ್ಯಪುಸ್ತಕಗಳನ್ನು ಮೊದಲ ಹಂತದಲ್ಲಿ ವಿತರಿಸಲಾಗುತ್ತಿದೆ. ಹೆಚ್ಚುವರಿ ಮಕ್ಕಳಿಗೆ ಇನ್ನೆರಡು ಹಂತದಲ್ಲಿ ಪಠ್ಯಪುಸ್ತಕಗಳನ್ನು ಪೂರೈಸಲಾಗುವುದು.
ತುಮಕೂರು- ನಗರದ ಸರ್ಕಾರಿ ಜೂನಿಯರ್ ಕಾಲೇಜಿನ 1540 ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಸರಬರಾಜು ಮಾಡಿರುವ ಪಠ್ಯಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ರಾಜಕುಮಾರ್ ಪಠ್ಯಪುಸ್ತಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಟಿ.ವಿ. ಪ್ರಕಾಶ್, ಆರೀಫ್ ಅಹಮದ್, ತಸ್ಲೀಮ್ ಉನ್ನೀಸಾ, ರವಿಕುಮಾರ್, ಗ್ರಂಥಪಾಲಕ ರೇಣುಕಪ್ರಸಾದ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಲ್ಲಾ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪಠ್ಯ ಪುಸ್ತಕ ವಿತರಣೆ ಆರಂಭಿಸಲಾಗಿದೆ. ತಾಲೂಕು ಮಟ್ಟದಲ್ಲಿ ನೋಡಲ್ ಕೇಂದ್ರಗಳನ್ನು ತೆರೆದು ಪುಸ್ತಕ ಪೂರೈಕೆಗೆ ಕ್ರಮವಹಿಸಲಾಗಿದೆ. 3 ಹಂತಗಳಲ್ಲಿ ಪುಸ್ತಕ ವಿತರಿಸಲಿದ್ದು ಎಲ್ಲಾ ವಿದ್ಯಾರ್ಥಿಗಳು ಪಠ್ಯಪುಸ್ತಕ ಸಿಗಲಿವೆ. ಎಲ್ಲಾ ಮಕ್ಕಳಿಗು ಪುಸ್ತಕ ಸಿಗಲಿದ್ದು ಯಾವುದೇ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ.
ಸರ್ಕಾರ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತವಾಗಿ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಿವೆ. ಈ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ತಾಲೂಕಿನ 10 ಪಿಯು ಕಾಲೇಜುಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಗಿದ್ದು ಅದೇ ರೀತಿ ನಮ್ಮ ಕಾಲೇಜಿನ ಮಕ್ಕಳಿಗೂ ವಿತರಿಸಲಾಗಿದೆ. ಪುಸ್ತಕಗಳನ್ನು ಜೋಪಾನವಾಗಿಟ್ಟುಕೊಂಡು ಮುಂದಿನ ವರ್ಷ ಬೇರೆ ಮಕ್ಕಳಿಗು ನೀಡಬಹುದು.
ಪ್ರಾಚಾರ್ಯ, ಸರ್ಕಾರಿ ಜೂನಿಯರ್ ಕಾಲೇಜು