ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್​ ತಂಡದೊಂದಿಗೆ ಎಸ್ಪಿ ಕೆ.ವಿ.ಅಶೋಕ್​. 
ತುಮಕೂರು

ಅಣ್ಣನಿಂದಲೇ ತಮ್ಮನ ಕೊಲೆ

ಪ್ರಮುಖ ಮುಖ್ಯಾಂಶಗಳು

  • ಎಲ್​ಐಸಿ ಹಣಕ್ಕಾಗಿ ಕೃತ್ಯ
  • ಅಪಘಾತವೆಂಬಂತೆ ಬಿಂಬಿಸಿದ್ದ
  • ಪೊಲೀಸ್​ ತನಿಖೆಯಲ್ಲಿ ನಿಜಾಂಶ ಬಯಲು
ತುಮಕೂರು: ಎಲ್​ಐಸಿ ಹಣಕ್ಕಾಗಿ ಒಡಹುಟ್ಟಿದ ಸಹೋದರನನ್ನೇ ಭೀಕರವಾಗಿ ಕೊಲೆಗೈದು ರಸ್ತೆ ಅಪಘಾತವೆಂಬಂತೆ ಬಿಂಬಿಸಿದ್ದ ಅಣ್ಣ ಹಾಗೂ ಆತನ ಸಹಚರರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶಿರಾ ತಾಲೂಕು ಪಟ್ಟನಾಯಕನಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯ ಹೊಸನಹಳ್ಳಿ -ಬಡೇನಹಳ್ಳಿ ಗೇಟ್​ ಮಧ್ಯದಲ್ಲಿ ಶನಿವಾರ ರಸ್ತೆ ಅಪಘಾತದಲ್ಲಿ ರಮೇಶ್​ (35) ಎಂಬಾತ ಸಾವನ್ನಪ್ಪಿದ್ದು ಈ ಸಂಬಂಧ ಮೃತನ ಅಣ್ಣ ರಂಗನಾಥ ನೀಡಿದ ದೂರಿನ ಹಿನ್ನೆಲೆ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಮೈಮೇಲಿನ ಗಾಯ !: ಮೃತ ರಮೇಶ್​ ಮೈಮೇಲಿನ ಗಾಯಗಳನ್ನು ಗಮನಿಸಿದ ಪಟ್ಟನಾಯಕನಹಳ್ಳಿ ಪಿಎಸ್​ಐ ಹರೀಶ್​ ಹಾಗೂ ಮರಣೋತ್ತರ ಪರೀೆ ವರದಿಯು ಇದು ಅಪಘಾತವಲ್ಲ, ಕೊಲೆ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿತು. ಅನುಮಾನಸ್ಪದ ಸಾವು ಪ್ರಕರಣವನ್ನು ಜೂ.22 ರಂದು ಕೊಲೆ ಎಂದು ದಾಖಲಿಸಿಕೊಂಡ ಪೊಲೀಸರು ಅಸಲಿ ಪ್ರಕರಣದ ಬಯಲಿಗೆಳೆಯಲು ಮುಂದಾದರು.
ಕೊಲೆ ಪ್ರಕರಣ ದಾಖಲಾದ 12 ಗಂಟೆಯ ಒಳಗಾಗಿ ಪ್ರಕರಣದ ಪ್ರಮುಖ ಸೂತ್ರಧಾರಿ ನಿದ್ರಗಟ್ಟದ ಹನುಮಂತರಾಜು ಹಾಗೂ ಬೆಂಗಳೂರಿನ ಲಕ್ಷಿ$್ಮಕಾಂತ (31), ಊರ್ಡಿಗೆರೆ ಹೋಬಳಿ ಮಾಚನಹಳ್ಳಿ ನವೀನ್​ ಕುಮಾರ್​ (28) ಹಾಗೂ ಕೊರಟಗೆರೆ ತಾಲೂಕಿನ ರೌರಗಾನಹಳ್ಳಿಯ ಎಂ.ಡಿ.ಜಿಲಾನ್​ (21)ರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಎಲ್​ಐಸಿ ಕಂತು ಪಾವತಿ !
ಮೃತ ರಮೇಶ್​ ಮೂಲತ ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನ ನಿದ್ರಗಟ್ಟ ಗ್ರಾಮದವನಾಗಿದ್ದು ಕಳೆದ 6ವರ್ಷದಿಂದ ಊರು ತೊರೆದು ಬೆಂಗಳೂರಿನಲ್ಲಿ ಎಳನೀರು ಹಾಗೂ ಮಂಡ್ಯದಲ್ಲಿ ಕಬ್ಬಿನ ಜ್ಯೂಸ್​ ವ್ಯಾಪಾರ ಮಾಡಿಕೊಂಡಿದ್ದ. ಮಾಟಮಂತ್ರ ಮಾಡುವುದನ್ನು ಕಲಿತಿದ್ದ ರಮೇಶ್​ ಸ್ವಂತ ಅಣ್ಣಂದಿರ ಸಂಸಾರಕ್ಕೆ ಆಗ್ಗಿಂದಾಗ್ಗೆ ಮಾಟಮಂತ್ರ ಮಾಡಿ ತೊಂದರೆ ಕೊಡುತ್ತಿದ್ದ. ಇದರಿಂದ ಬೇಸತ್ತ ಮೃತನ ಮೂರನೇ ಅಣ್ಣ ಹನುಮಂತರಾಜು ಕಳೆದ 2 ವರ್ಷಗಳ ಹಿಂದೆ ಸಹೋದರರನ್ನು ಮುಗಿಸಲು ಸ್ಕೆಚ್​ ಹಾಕಿದ್ದ. ಆ ಮೂಲಕ ಲಾಭ ಮಾಡಿಕೊಳ್ಳಲು ರಮೇಶನ ಹೆಸರಿಗೆ 15ಲಕ್ಷ ಮೊತ್ತದ ಎಲ್​ಐಸಿ ವಿಮೆ ಮಾಡಿಸಿ ತನ್ನನ್ನೇ ನಾಮಿನಿ ಮಾಡಿಕೊಂಡಿರುವುದು ತನಿಖೆ ವೇಳೆ ಬಯಲಾಗಿದೆ. ಪ್ರತಿ ವರ್ಷಕ್ಕೆ 85000ರೂ., ವಿಮಾ ಕಂತನ್ನು ಪಾವತಿ ಮಾಡಿದ್ದ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ನಾಮಿನಿದಾರರಿಗೆ ವಿಮೆ ಮೊತ್ತದ ಡಬಲ್​ ಹಣ ಪಾವತಿಯಾಗುವಂತೆ ಇದ್ದುದ್ದರಿಂದ ಈ ಹಣದ ದುರಾಸೆಯಿಂದ ಸಂಚು ಹೂಡಿ ಕೊಲೆಗೈದಿದ್ದಾನೆ.