ತುಮಕೂರಿನಲ್ಲಿ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು. ಎಚ್​.ಎಂ.ರೇವಣ್ಣ, ಟಿ.ಬಿ.ಜಯಚಂದ್ರ, ಎಸ್​.ಆರ್​.ಪಾಟೀಲ್​, ಜಿ.ಚಂದ್ರಶೇಖರಗೌಡ, ನಿಕೇತ್​ ರಾಜ್​, ಡಾ.ಎಚ್​.ವಿ.ವಾಸು, ಶುಭಕಲ್ಯಾಣ್​, ಬಿ.ವಿ.ಅಶ್ವಿಜ ಮತ್ತಿತರರು ಇದ್ದರು.  
ತುಮಕೂರು

ಹಸಿವು ಮುಕ್ತ ಕರ್ನಾಟಕಕ್ಕೆ ಸರ್ಕಾರದ ಗ್ಯಾರಂಟಿ

ಜಗನ್ನಾಥ್ ಕಾಳೇನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಕಾರ್ಯಾಗಾರ
  • ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ
  • ಗೃಹ ಸಚಿವ ಡಾ.ಜಿ.ಪರಮೇಶ್ವರ
ತುಮಕೂರು: ಕರ್ನಾಟಕದಲ್ಲಿ ಬಡತನ ನಿಮೂರ್ಲನೆಯಾಗಬೇಕು. ಜನ ಸಮುದಾಯ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕು. ಹಳ್ಳಿಗಾಡಿನ ಯುವಕರು ಹೆಚ್ಚು ವಿದ್ಯಾವಂತರಾಗಿ, ದೇಶವನ್ನು ಕಟ್ಟುವಂತಾಗಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್​ ಸರ್ಕಾರ ಯಾವುದೇ ರೀತಿಯ ಟೀಕೆಗಳಿಗೆ ಜಗ್ಗದೆ ಕೆಲಸ ಮಾಡಲಾಗುತ್ತಿದೆ, ರಾಜ್ಯದ ಜನರನ್ನು ಅಭಿವೃದ್ಧಿಯ ಕಡೆ ತೆಗೆದುಕೊಂಡು ಹೋಗುವುದೇ ಸರ್ಕಾರದ ಜವಾಬ್ದಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್​ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ವಿಶ್ವದ ಅನೇಕ ಅರ್ಥಿಕ ತಜ್ಞರು ಕೊಂಡಾಡುತ್ತಿದ್ದಾರೆ. ಎಷ್ಟೇ ಟೀಕೆ ಟಿಪ್ಪಣಿಗಳು ಬಂದರು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕು ನಿಲ್ಲಿಸುವುದಿಲ್ಲ. ಗ್ಯಾರಂಟಿ ಯೋಜನೆಗಳ ಜತೆಗೆ 2.50 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಶೀಘ್ರ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀಮಾರ್ನಿಸಲಾಗಿದೆ. ಯುವಕರ ಪರವಾಗಿ ಯೋಜನೆಗಳನ್ನು ಕೊಟ್ಟಿದ್ದೇವೆ, ಉದ್ಯೋಗ ಕೊಡುತ್ತೇವೆ ಎಂದು ತಿಳಿಸಿದರು.
ದೇಶ ಹಾಗೂ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೇನು ಹೊಸ ವಿಚಾರವಲ್ಲ. ಜನರಿಗೆ ಆರ್ಥಿಕ ಶಕ್ತಿ ನೀಡಬೇಕು. ದುಡಿಯುವ ಕೈಗೆ ಉದ್ಯೋಗ ಸಿಗಬೇಕು. ಜನರು ಹಸಿವಿನಿಂದ ಮುಕ್ತರಾಗಬೇಕೆಂಬ ಸದುದ್ದೇಶದಿಂದ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಗಳಿಂದ ಜನರ ಬದುಕಿನಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯೊಂದರಲ್ಲಿ 3.43 ಲಕ್ಷ ಕೋಟಿ ಹಣವನ್ನು ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿ 20.03 ಕೋಟಿ ಮಹಿಳೆಯರು ಸಾರಿಗೆ ಬಸ್​ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಹೀಗೆ ಲಕ್ಷಾಂತರ ಕೋಟಿ ಹಣವನ್ನು ತುಮಕೂರು ಜಿಲ್ಲೆಯೊಂದರಲ್ಲೇ ಸರ್ಕಾರದಿಂದ ವೆಚ್ಚ ಮಾಡಲಾಗಿದೆ. ಫಲಾನುಭವಿಗೆ ನೇರವಾಗಿ ತಲುಪುವ ಇಂತಹ ಯೋಜನೆಗಳಿಂದ ರಾಜ್ಯದ ಜನರಲ್ಲಿ ಆರ್ಥಿಕ ಸ್ವಾವಲಂಬನೆಯಾಗಿದೆ. ಇದರಿಂದ ಅಭಿವೃದ್ಧಿ ಸಾಧ್ಯವಿದೆ ಎಂಬುದನ್ನು ಹೆಸರಾಂತ ಆರ್ಥಿಕ ತಜ್ಞರು ವಿಶ್ವದೆಲ್ಲೆಡೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.
ಎಚ್​.ಎಂ.ರೇವಣ್ಣ ಮಾತನಾಡಿ, ಈ ಹಿಂದೆ ದೇಶದಲ್ಲಿ ಗುಜರಾತ್​ ಮಾದರಿ ಎಂದೆಲ್ಲಾ ಹೇಳಲಾಗುತ್ತಿತ್ತು. ಆದರೆ, ಈಗ ಕರ್ನಾಟಕ ಮಾದರಿ ಎಂಬ ಹೆಸರು ದೇಶಾದ್ಯಂತ ಕೇಳಿ ಬರುತ್ತಿದೆ. ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿ ರಾಜ್ಯವಾಗಿ ಪರಿಗಣಿಸಲ್ಪಟ್ಟಿದೆ. ಗ್ಯಾರಂಟಿ ಯೋಜನೆಗಳ ಮೂಲಕ 1.19ಲಕ್ಷ ಕೋಟಿ ಹಣವನ್ನು ನೇರವಾಗಿ ಫಲಾನುಭವಿಗಳಿಗೆ ಸಿಗುವಂತೆ ಸರ್ಕಾರ ಮಾಡಿದೆ. ನಮ್ಮ ಸರ್ಕಾರ ಜನರ ಬದುಕು ಅಥೈಸಿಕೊಂಡು ಆಡಳಿತ ನಡೆಸುತ್ತಿದೆ ಎಂದು ಹೇಳಿದರು.
ಜಾಗೃತ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಡಾ.ಎಚ್​.ವಿ.ವಾಸು ಮಾತನಾಡಿ, ಗ್ಯಾರಂಟಿ ಯೋಜನೆ ಅಭಿವೃದ್ಧಿಗೆ ವಿರುದ್ಧವಲ್ಲ, ಜನರ ಜೀವನಮಟ್ಟ ಸುಧಾರಿಸುವುದು ಅಭಿವೃದ್ಧಿಯ ಸಂಕೇತ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳು ಜನರ ಬದುಕನ್ನು ಸುಧಾರಿಸಿವೆ. ಗ್ಯಾರಂಟಿ ಯೋಜನೆಗಳು ಬಸವತತ್ವದ ಆಧಾರದಲ್ಲಿ ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಇದನ್ನು ವಿರೋಧಿಸುವವರು ಬಸವ ವಿರೋಧಿಗಳು, ಕನ್ನಡ ದ್ರೋಹಿಗಳು ಎಂದು ಪರಿಗಣಿಸಬೇಕಾಗಿರುತ್ತದೆ ಎಂದರು.
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್​.ಆರ್​.ಪಾಟೀಲ, ಜಿಲ್ಲಾಧ್ಯಕ್ಷ ಚಂದ್ರಶೇಖರ್​ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್​ರಾಜ್​, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ.ಅಶೋಕ್​ ಮತ್ತಿತರರು ಇದ್ದರು.