Fill the vacant position.
ಶಿರಾ: ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ರಂಜನ್ ಪಾಂಡೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯ ವಿವಿಧ ಕಾರ್ಯಕ್ಷಮತಾ ಸೂಚ್ಯಂಕಗಳನ್ನು ಸಮಗ್ರವಾಗಿ ಪರಿಶೀಲಿಸಿ, ಡಯಾಲಿಸಿಸ್ ಘಟಕದ ದಾಖಲೆಗಳು ಹಾಗೂ ಅದರ ಕಾರ್ಯನಿರ್ವಹಣೆಯ ಪ್ರಗತಿಯನ್ನು ವೀಕ್ಷಿಸಿದರು. ಆಸ್ಪತ್ರೆಯ ದುರಸ್ತಿ ಹಾಗೂ ನವೀಕರಣ ಕಾಮಗಾರಿಗಳಿಗಾಗಿ ಕರ್ನಾಟಕ ಆರೋಗ್ಯ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯಿಂದ 1.5 ಕೋಟಿ ಅಂದಾಜು ಮೊತ್ತದ ಸಿದ್ಧಪಡಿಸಲಾದ ಯೋಜನೆಯನ್ನು ಪರಿಶೀಲಿಸಿ ತಕ್ಷಣವೇ ಇಲಾಖೆಯ ಇಂಜಿನಿಯರ್ ಅವರಿಗೆ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಲು ಆದೇಶಿಸಿದರು.
ಆಸ್ಪತ್ರೆಯಲ್ಲಿ ನಾಲ್ಕು ವೈದ್ಯರ ಹುದ್ದೆಗಳು ಖಾಲಿ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೈದ್ಯರ ಖಾಲಿ ಹುದ್ದೆಗಳ ಕುರಿತು ಸಾಮಾನ್ಯ ವರ್ಗಾವಣೆ ಕೌನ್ಸೆಲಿಂಗ್ನಲ್ಲಿ ಭರ್ತಿಯಾಗದಿದ್ದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಗೆ ಹೆಚ್ಚುವರಿ ಟ್ರಾಮಾ ಕೇರ್ ಹಾಸಿಗೆಗಳ ಅಗತ್ಯತೆ ಬಗ್ಗೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ.ಸಿದ್ದೇಶ್, ಡಾ.ಪ್ರಭಾ, ಡಾ.ರಾಮೇಗೌಡ, ಡಾ.ಮೋಹನ್, ಡಾ.ಮೋಹನ್ ದಾಸ್, ಡಾ.ರವೀಂದ್ರ ನಾಯಕ್, ಡಾ.ಶ್ರೀನಾಥ್, ಡಾ.ಅಪೂರ್ವಾ, ಡಾ.ಶ್ರೀಧರ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.