ಕುಣಿಗಲ್ ತಾಲೂಕಿನ ಅರೆಪಾಳ್ಯ ಕದ್ರಾಪುರಕ್ಕೆ ಸೇರಿದ ಒಣಗಿದ ಕೆರೆಯ ಬಳಿ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಬಾಂಬೆ ಶಿವಣ್ಣ, ಮಾಜಿ ಗ್ರಾಪಂ ಅಧ್ಯಕ್ಷ ಕುಮಾರಸ್ವಾಮಿ, ಮುಖಂಡರಾದ ಅರೇಪಾಳ್ಯ, ಮಂಜುನಾಥ, ಆಂಜನಪ್ಪ, ರಾಮಚಂದ್ರಯ್ಯ, ಬ್ರಹ್ಮ ಕುಮಾರ್ ಮತ್ತಿಯರರು ಇದ್ದರು.
- ನೀರು ಹರಿಸದಿದ್ದರೆ ಉಗ್ರ ಹೋರಾಟ
ಕುಣಿಗಲ್: ತಾಲೂಕಿನಲ್ಲಿ ಭೀಕರ ಬರಗಾಲ ಎದುರಾಗಿದ್ದು, ಕಸಬಾ ಹೋಬಳಿಯ ಎಲ್ಲ ಕೆರೆ&ಕಟ್ಟೆಗಳು ಒಣಗಿ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಸಾಲು ಕೆರೆಗಳಿಗೆ ಹೇಮಾವತಿ ನೀರು ಹರಿಸದಿದ್ದರೆ ಅಧಿಕಾರಿಗಳ, ಶಾಸಕರ ವಿರುದ್ಧ ರೈತಾಪಿ ಜನರೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಬಾಂಬೆ ಶಿವಣ್ಣ ಎಚ್ಚರಿಸಿದರು.
ಅರೆಪಾಳ್ಯ ಕದ್ರಾಪುರ ಗ್ರಾಮಕ್ಕೆ ಸೇರಿದ ಒಣಗಿದ ಕೆರೆಯ ಬಳಿ ಮಾತನಾಡಿದ ಅವರು, ಈ ಭಾಗದಲ್ಲಿರುವ ಕೆರೆಕಟ್ಟೆಗಳು ಮಳೆ ಇಲ್ಲದೆ ಸಂಪೂರ್ಣವಾಗಿ ಒಣಗಿ ಹೋಗಿವೆ. ಈ ಭಾಗದ ರೈತಪಿ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ಸಹ ನೀರಿಲ್ಲದೆ ಪರದಾಡುವಂತಾಗಿದೆ. ತೆಂಗು ಅಡಿಕೆ ನಂಬಿ ಬದುಕುತ್ತಿರುವ ರೈತ ಭೂಮಿಗೆ ಹತ್ತಾರು ಕೊಳವೆ ಬಾವಿ ಕೊರಸಿದರು ನೀರು ಸಿಗದೇ ಸಾಲ ಮಾಡಿ ಶೂಲಕ್ಕೆ ಏರುವ ಪರಿಸ್ಥಿತಿ ಉಂಟಾಗಿದೆ. ಕುಣಿಗಲ್ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕಸಬಾ ಹೋಬಳಿಯ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಎರಡು ವರ್ಷದ ಹಿಂದೆಯೇ ಶಾಸಕರು ಭರವಸೆ ನೀಡಿದ್ದರು. ಆದರೆ ಇದುವರೆಗೂ ಪ್ರಯೋಜನವಾಗಿಲ್ಲ. ಶಾಸಕ ರಂಗನಾಥ್ ಅವರು ನೀರಿನ ವಿಚಾರದಲ್ಲಿ ರಾಜಕಾರಣ ಮಾಡದೆ ಈ ಭಾಗದ ರೈತರ ಸಮಸ್ಯೆ ಅರಿತು ಮೊದಲನೆಯ ಹಂತದಲ್ಲಿ ಬರುತ್ತಿರುವ ಹೇಮಾವತಿ ನೀರನ್ನು ಹರಿಸುವಂತೆ ಒತ್ತಾಯಿಸಿದರು.
ಈ ಭಾಗದಲ್ಲಿ ಬರುವ ಕಿತ್ನಾನಾಮಂಗಳಕೆರೆ, ಕಾಡುಮತ್ತಿಕೆರೆ, ಸಂತೆಮಾವತ್ತೂರು, ಅರೆಪಾಳ್ಯ ,ಕೆಂಚನಹಳ್ಳಿ ಮೋದೂರು ಮತ್ತು ದೊಡ್ಡಮವತ್ತೂರು ಈ ಗ್ರಾಮಗಳ ಕೆರೆಗಳಲ್ಲಿ ಒಂದು ಹನಿಯೂ ನೀರು ಇಲ್ಲ. ಈ ಭಾಗದ ರೈತರು ಎಲ್ಲಿ ಹೋಗಬೇಕು. ಅಡಿಕೆ, ತೆಂಗು ಒಣಗಿ ಹೋಗುತ್ತಿವೆ ಈ ಕೆರೆಗಳಿಗೆ ಮೊದಲು ನೀರು ಕೊಟ್ಟು ರೈತರ ಪ್ರಾಣ ಉಳಿಸಿ ಇಲ್ಲ ಅಂದರೆ ಅವರೆಲ್ಲ ಗ್ರಾಮಗಳನ್ನು ತೊರೆದು ಹೋಗಬೇಕಾಗುತ್ತದೆ ಎಂದರು.