ತುಮಕೂರು ವಿಶ್ವವಿದ್ಯಾಲಯ 
ತುಮಕೂರು

ತುಮಕೂರು ವಿವಿ "ಪ್ರೇರಣಾ ಉಪನ್ಯಾಸ'ಕ್ಕೆ ದುಂದುವೆಚ್ಚ

ಪ್ರಮುಖ ಮುಖ್ಯಾಂಶಗಳು

  • 15 ಉಪನ್ಯಾಸ, 14.34 ಲಕ್ಷ ರೂ. ಖರ್ಚು
  • ವಿವಿ ಸಭಾಂಗಣಗಳಲ್ಲಿ ನಡೆದ ಸಮಾವೇಶ

ತುಮಕೂರು: ತುಮಕೂರು ವಿವಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಪ್ರೇರಣೆ ಉಂಟುಮಾಡಿ ಚಾರಿತ್ರ್ಯ ನಿಮಾರ್ಣ ಮಾಡುವ ಉದ್ದೇಶದಿಂದ ಆರಂಭಿಸಲಾಗಿರುವ "ಪ್ರೇರಣಾ ಉಪನ್ಯಾಸ' ಕಾರ್ಯಕ್ರಮಕ್ಕೆ ದುಂದು ವೆಚ್ಚ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

ಸಮಾಜಿಕ ಕಾರ್ಯಕರ್ತ ವಿಶ್ವನಾಥನ್​ ಆರ್​ಟಿಐ ಮೂಲಕ ಪಡೆದಿರುವ ಮಾಹಿತಿಯಲ್ಲಿ ತುಮಕೂರು ವಿವಿ ಕಳೆದ ಮೂರು ವರ್ಷದಲ್ಲಿ ನಡೆಸಿರುವ 15 ಪ್ರೇರಣಾ ಉಪನ್ಯಾಸಕ್ಕೆ ಬರೋಬ್ಬರಿ 14.34ಲಕ್ಷ ರೂ. ವ್ಯಯಿಸಿರುವುದು ಅಚ್ಚರಿ ಮೂಡಿಸಿದೆ. ತುಮಕೂರು ವಿವಿ ನೀಡಿರುವ ಲಾಂತರ ರೂ. ಖರ್ಚಿನ ಲೆಕ್ಕ ಅನುಮಾನಕ್ಕೆ ಕಾರಣವಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಸಾಧನೆ ಮಾಡಿರುವ ಸಾಧಕರನ್ನು ಕರೆಸಿ ಅವರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಿಸುವ ಕಾರ್ಯಕ್ರಮಕ್ಕೆ ವಿವಿಧ ಸಂಗ, ಸಂಸ್ಥೆಗಳು ಸಹಯೋಗ ನೀಡಲು ಸಿದ್ಧವಿದ್ದರೂ ವಿವಿ ವತಿಯಿಂದಲೇ ಹಣ ಖರ್ಚು ಮಾಡುವ ಔಚಿತ್ಯವೇನು ಎಂಬ ಪ್ರಶ್ನೆ ಮೂಡಿದೆ. ಒಂದೊಂದು ಕಾರ್ಯಕ್ರಮಕ್ಕೆ ಒಂದೊಂದು ರೀತಿಯಲ್ಲಿ ಹಣ ಖರ್ಚು ಮಾಡಲಾಗಿದೆ.
2025 ಜ.25ರಂದು ವಿವಿ ಸಭಾಂಗಣದಲ್ಲಿ ಆಯೋಜಿಸಿದ್ದ ಇನ್ಫೋಸಿಸ್​ ಸಂಸ್ಥೆಯ ಎನ್​.ಎಸ್​.ನಾರಾಯಣಮೂರ್ತಿ ಭಾಗವಹಿಸಿದ್ದ ಒಂದು ಪ್ರೇರಣಾ ಉಪನ್ಯಾಸಕ್ಕೆ ಬರೋಬ್ಬರಿ 8.45ಲಕ್ಷ ರೂ. ಖರ್ಚು ಮಾಡಲಾಗಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ(ಕೆಟಿಪಿಪಿ)ಕಾಯ್ದೆ  ಯಲ್ಲಿ ಐದು ಲಕ್ಷ ರೂ. ಮೇಲ್ಪಟ್ಟ ಎಲ್ಲಾ ಖರ್ಚುಗಳಿಗೂ ಇ&ಟೆಂಡರ್​ ಮಾಡಬೇಕು ಎಂಬ ನಿಯಮವಿದ್ದರೂ ವಿವಿಯಲ್ಲಿ ಪಾಲನೆಯಾಗಿಲ್ಲ.
ಆದರೆ, ವಿವಿಯಲ್ಲಿ ಉಪನ್ಯಾಸ ನೀಡಿರುವ ಬಹುತೇಕ ಸಾಧಕರು ಯಾವುದೇ ಗೌರವಧನ ಪಡೆಯದೇ ಸ್ವಂತ ಖರ್ಚಿನಿಂದ ಆಗಮಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ್ದರೂ ವಿವಿ ನೀಡುತ್ತಿರುವ ಖರ್ಚಿನ ಲೆಕ್ಕ ಅನುಮಾನಕ್ಕೆ ಕಾರಣವಾಗಿದೆ. 
ಕೇವಲ 15 ಉಪನ್ಯಾಸಕ್ಕೆ 14.34ಲಕ್ಷ ರೂ.ಖರ್ಚು!
ವಿವಿ ಸಭಾಂಗಣದಲ್ಲಿಯೇ ವಿದ್ಯಾರ್ಥಿಗಳನ್ನು ಕೂರಿಸಿ ಸರಳವಾಗಿಯೇ ಆಯೋಜಿಸುವ ಪ್ರೇರಣಾ ಉಪನ್ಯಾಸದಲ್ಲಿ ಉಪನ್ಯಾಸ ನೀಡುವವರಿಗೆ ಗೌರವಧನ(ಪಡೆದರೆ) ಹಾಗೂ ವೇದಿಕೆಗೆ ಅಲ್ಪಸ್ವಲ್ಪ ಖರ್ಚು ಮಾಡಲಾಗುತ್ತದೆ. ಕಳೆದ ಮೂರು ವರ್ಷದಲ್ಲಿ 15 ಪ್ರೇರಣಾ ಉಪನ್ಯಾಸಗಳು ನಡೆದಿದ್ದು ಇದಕ್ಕಾಗಿ 14.34 ಲಕ್ಷ ರೂ. ರ್ಖಚಾಗಿದೆ ಎಂಬ ವಿಷಯ ವಿವಿ ಪ್ರಾಧ್ಯಾಪಕ ವಲಯದಲ್ಲಿಯೇ ಅಚ್ಚರಿಗೆ ಕಾರಣವಾಗಿದೆ.
2023 ನ.21ರಂದು ಗುರುರಾಜ ಕರ್ಜಗಿ ಅವರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ 70000, ಡಿ.28ರಂದು ಡಾ.ಸಂತೋಷ್​ಹೆಗ್ಡೆ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ 65 ಸಾವಿರ ರೂ., 2024 ಜ.30ರಂದು ಬಿ.ಆರ್​.ರವಿಕಾಂತೇಗೌಡ ನೀಡಿದ ಉಪನ್ಯಾಸ ಕಾರ್ಯಕ್ರಮಕ್ಕೆ 67000, ಜೂ.24ರಂದು ಎಸ್​.ಷಡಕ್ಷರಿ ಭಾಗವಹಿಸಿದ್ದ ಕಾರ್ಯಕ್ರಮಕ್ಕೆ 42000ರೂ., ಜು.24ರಂದು ಪ್ರೊ.ಎಂ.ಕೃಷ್ಣೇಗೌಡರ ಉಪನ್ಯಾಸಕ್ಕೆ 47577ರೂ., ಅ.24ರಂದು ವೊಡೆ ಪಿಕೃಷ್ಣ ಅವರ ಕಾರ್ಯಕ್ರಮಕ್ಕೆ 40000, ಡಾ.ವಿ.ಬಿ.ಆರತಿ ನೀಡಿದ ನ.21ರ ಉಪನ್ಯಾಸಕ್ಕೆ 40000, 2025 ಜ.20ರಂದು ಹಿರೇಮಗಳೂರು ಕಣ್ಣನ್​ ಭಾಗವಹಿಸಿದ್ದ ಉಪನ್ಯಾಸ ಕಾರ್ಯಕ್ರಮಕ್ಕೆ 50000ರೂ. ಖರ್ಚು ಮಾಡಲಾಗಿದೆ.
2025 ಜ.25ರಂದು ವಿವಿ ಸಭಾಂಗಣದಲ್ಲಿ ಆಯೋಜಿಸಿದ್ದ ಇನ್ಫೋಸಿಸ್​ ಸಂಸ್ಥೆಯ ಎನ್​.ಎಸ್​.ನಾರಾಯಣಮೂರ್ತಿ ಭಾಗವಹಿಸಿದ್ದ ಒಂದು ಪ್ರೇರಣಾ ಉಪನ್ಯಾಸಕ್ಕೆ ಬರೋಬ್ಬರಿ 8.45ಲಕ್ಷ ರೂ. ಖರ್ಚು ಮಾಡಲಾಗಿದೆ. ಮೇ.30ರಂದು ಡಾ.ಕೆ.ಪಿ.ಪುತ್ತುರಾಯರ ಕಾರ್ಯಕ್ರಮಕ್ಕೆ 30000ರೂ.,  ಪ್ರೊ.ಸಿ.ಆರ್​.ಚಂದ್ರಶೇಖರ್​ ಅವರ ಕಾರ್ಯಕ್ರಮಕ್ಕೆ 30000ರೂ., ಡಾ.ನಾ.ಸೋಮೇಶ್ವರ ಅವರ ಉಪನ್ಯಾಸಕ್ಕೆ 30000ರೂ., 2026 ಜ.13ರಂದು ಶ್ರೀಸ್ವಯಂ ಪ್ರಕಾಶ ಸಚ್ಚದಾನಂದ ಸ್ವಾಮೀಜಿ ಅವರ ಕಾರ್ಯಕ್ರಮಕ್ಕೆ 75ಸಾವಿರ ರೂ. ಹಾಗೂ ಮಾ.26ರಂದು ನಡೆದಿರುವ ಡಾ.ಸಿ.ಸೋಮಶೇಖರ್​ ಅವರ ಕಾರ್ಯಕ್ರಮಕ್ಕೆ 30 ಸಾವಿರ ರೂ. ಖರ್ಚು ಮಾಡಿರುವುದಾಗಿ ವಿವಿ ತಿಳಿಸಿದೆ.
ತುಮಕೂರು ವಿವಿ ನೀಡಿರುವ ಮಾಹಿತಿಯಲ್ಲಿಯೇ ಪ್ರೇರಣಾ ಉಪನ್ಯಾಸದ ಹೆಸರಿನಲ್ಲಿ ದುಂದು ವೆಚ್ಚ ಮಾಡಿರುವುದು ಬಯಲಾಗಿದೆ. ಸಂ, ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಚಿತವಾಗಿ ಮಾಡಲು ಅವಕಾಶವಿರುವ ಕಾರ್ಯಕ್ರಮಕ್ಕೆ ಬಡ ವಿದ್ಯಾರ್ಥಿಗಳು ಶುಲ್ಕದ ರೂಪದಲ್ಲಿ ಪಾವತಿಸಿದ ಹಣದಲ್ಲಿ ನಿಯಮ ಉಲ್ಲಂಘಿಸಿ ಲಾಂತರ ರೂ. ಖರ್ಚು ಮಾಡುವುದು ಖಂಡನೀಯ. ಈ ಬಗ್ಗೆ ವಿವಿ ಸಿಂಡಿಕೇಟ್​, ಉನ್ನತ ಶಿಕ್ಷಣ ಇಲಾಖೆ ಗಮನಹರಿಸಬೇಕು.
ಎಸ್​.ವಿಶ್ವನಾಥನ್​
ಸಮಾಜಿಕ ಕಾರ್ಯಕರ್ತ