- ಜಿಲ್ಲೆಗೆ ಉಸ್ತುವಾರಿ ಸಚಿವರ ಹೇಳಿಕೆಯ ಆಘಾತ
- ಯೋಜನೆ ಕೈಬಿಡಲು ಸಾಧ್ಯವೇ ಇಲ್ಲವೆಂದ ಡಿಸಿಎಂ
- ನೆನೆಗುದಿಗೆ ಬಿದ್ದಿರುವ ಯೋಜನೆಗೆ 900ಕೋಟಿ ರೂ. ವೆಚ್ಚ?
ತುಮಕೂರು: ಜಿಲ್ಲೆಗೆ ಮರಣ ಶಾಸನವಾಗಿದೆ ಎಂದು ಇಡೀ ರೈತ ಸಮುದಾಯ ಆತಂಕದಲ್ಲಿರುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾ ಉಸ್ತುವಾರಿಯೂ ಆದ ಡಿಸಿಎಂ ಡಾ.ಜಿ.ಪರಮೇಶ್ವರ ಟೊಂಕಕಟ್ಟಿ ನಿಂತಿದ್ದಾರೆ.
ಮಂಗಳವಾರ ಜಿಪಂ ಕಚೇರಿ ಆವರಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಲಿಂಕ್ ಕೆನಾಲ್ ಕಾಮಗಾರಿಗೆ ಈಗಾಗಲೇ 900ಕೋಟಿ ರೂ. ವೆಚ್ಚ ಮಾಡಲಾಗಿದ್ದು ಈ ಹಂತದಲ್ಲಿ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ನೀಡಿದ ಖಡಕ್ ಹೇಳಿಕೆ ಜಿಲ್ಲೆಯ ರೈತರಲ್ಲಿ ಆಘಾತ ತಂದಿದೆ, ಕಾಮಗಾರಿಗೆ ಪರಮೇಶ್ವರ್ ಬೆಂಬಲವಾಗಿರುವುದು ಭವಿಷ್ಯದಲ್ಲಿ ಜನಾಕ್ರೋಶಕ್ಕೂ ಕಾರಣವಾಗುವ ಸಾಧ್ಯತೆಯಿದೆ.
ಹೇಮಾವತಿ ಲಿಂಕ್ ಕೆನಾಲ್ ಎಂಬ ಶಬ್ಧವನ್ನು ಸುದ್ದಿಗಾರರಿಂದ ಕೇಳಿದ ಕೂಡಲೇ ಕೆಂಡಾಮಂಡಲರಾದ ಡಾ.ಜಿ.ಪರಮೇಶ್ವರ, ಯೋಜನೆಗೆ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಲಾಗಿದ್ದು ಈಗ ನಿಲ್ಲಿಸಬೇಕು ಎಂದರೆ ಅದು ಸಾಧ್ಯವೇ ಇಲ್ಲ, ಯಾರೇ ವಿರೋಧ ಮಾಡಿದರೂ, ಹೋರಾಟ ಮಾಡಿದರೂ ಸರ್ಕಾರ ಮುಂದುವರಿಸಲಿದೆ ಎಂದು ಕಡ್ಡಿ ತುಂಡಾದಂತೆ ಹೇಳಿದರು.
ಯೋಜನೆಗೆ ಅಗತ್ಯವಿರುವ ಭೂಮಿಯ ಪೂರ್ಣ ಪ್ರಮಾಣದಲ್ಲಿ ಸ್ವಾಧಿನ ಕೂಡ ಆಗದ, ಶೇ.30ರಷ್ಟು ಭಾಗದಲ್ಲಿ ಮಾತ್ರ ಪೈಪ್ಲೈನ್ ಮಾಡಲಾಗಿರುವ, ರೈತರ ವಿರೋಧದ ಕಾರಣಕ್ಕೆ ನೆನೆಗುದಿಗೆ ಬಿದ್ದಿರುವ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ಈಗಾಗಲೇ 900ರೂ. ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂಬ ಡಾ.ಜಿ.ಪರಮೇಶ್ವರ್ ಹೇಳಿಕೆಯೂ ಅಚ್ಚರಿಗೆ ಕಾರಣವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಹಿತಾಸಕ್ತಿ ಬಲಿ ಕೊಡಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿದ ಪರಮೇಶ್ವರ್, ಯಾರೂ ಯಾವ ಜಿಲ್ಲೆಯ ಹಿತಾಸಕ್ತಿಯನ್ನು ಬಲಿ ಕೊಟ್ಟಿಲ್ಲ, ಕುಣಿಗಲ್ ಕೂಡ ನಮ್ಮ ಜಿಲ್ಲೆಯಲ್ಲಿಯೇ ಇದೆ, ಅಲ್ಲಿಗೆ ನೀರು ತೆಗೆದುಕೊಂಡು ಹೋದರೆ ಹಿತಾಸಕ್ತಿಯ ಪ್ರಶ್ನೆ ಎಲ್ಲಿ ಬರಲಿದೆ ಎಂದು ಮರು ಪ್ರಶ್ನೆಹಾಕಿದರು.
ಗುಬ್ಬಿ ತಾಲೂಕಿನಿಂದ ಕುಣಿಗಲ್ ತಾಲೂಕಿನ ವರೆಗೂ ಪೈಪ್ಲೈನ್ ಮೂಲಕ ನೀರು ತೆಗೆದುಕೊಂಡು ಹೋದರೂ ಈಗಾಗಲೇ ನಿರ್ಮಿಸಿರುವ ಸ್ವಾಭಾವಿಕ ನಾಲೆಯನ್ನು ಮುಚ್ಚುವುದಿಲ್ಲ, ಅದು ಕೂಡ ಇರಲಿದ್ದು ಎಲ್ಲಿಂದ ಬೇಕಾದರೂ ನೀರು ತೆಗೆದುಕೊಂಡು ಹೋಗಲು ಅವಕಾಶವಿರಲಿದೆ ಎಂದು ವಾದಿಸಿದರು.