ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಕೆ.ಎನ್.ರಾಜಣ್ಣ
- ನ.17ರಂದು ಬರೆದಿದ್ದ ಪತ್ರ ಈಗ ಬಿಡುಗಡೆ
- ಮತಗಳ್ಳತನ ಹೇಳಿಕೆಗೆ ಕೆಎನ್ನಾರ್ ಸ್ಪಷ್ಟನೆ
- ಹೈಕಮಾಂಡ್ ಭೇಟಿಗೆ ಮನವಿ
ತುಮಕೂರು: ಮತಗಳ್ಳತನದ ಬಗ್ಗೆ ರಾಹುಲ್ಗಾಂಧಿ ಆರಂಭಿಸಿದ್ದ ಪ್ರತಿಭಟನೆ ಸಂದರ್ಭದಲ್ಲಿ ಲುವಾಗಿ ಮಾತನಾಡಿ ಸಚಿವ ಸ್ಥಾನದಿಂದ ವಜಾಗೊಂಡಿದ್ದ ಕೆ.ಎನ್.ರಾಜಣ್ಣ ಆ ಸಂದರ್ಭದಲ್ಲಿ ಭೇಟಿಗೆ ಅವಕಾಶ ಕೋರಿ ಬರೆದಿದ್ದ ಪತ್ರ ಒಂದು ತಿಂಗಳ ನಂತರ ಈಗ ಬಹಿರಂಗವಾಗಿದೆ.
ಸಚಿವ ಸ್ಥಾನದಿಂದ ವಜಾ ಬಳಿಕ ನವೆಂಬರ್ 17ರಂದು ಪತ್ರ ಬರೆದಿದ್ದ ಮಾಜಿ ಸಚಿವ ಕೆ.ಎನ್ .ರಾಜಣ್ಣ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಗೆ ಪತ್ರ ಬರೆದು ತನ್ನ ವಿವಾದಾತ್ಮಕ ಹೇಳಿಕೆ ಕುರಿತು 8 ಪುಟಗಳ ಸುಧೀರ್ ಪತ್ರಬರೆದು ಸ್ಪಷ್ಟೀಕರಣ ನೀಡಿದ್ದಾರೆ. ಪತ್ರದಲ್ಲಿ ಮಾಧ್ಯಮಗಳು ಕೇಳಿದ್ದ ಪ್ರಶ್ನೆಗಳು ಹಾಗೂ ನೀಡಿದ್ದ ಪ್ರತಿಕ್ರಿಯೆಗ ಸಂಪೂರ್ಣ ಮಾಹಿತಿಯನ್ನು ಪತ್ರದಲ್ಲಿ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ನಾನು ನೀಡಿದ್ದ ಹೇಳಿಕೆಯನ್ನು ಸಂಪೂರ್ಣ ತಿರುಚಲಾಗಿದೆ, ಪಕ್ಷದ ಹಿತದೃಷ್ಠಿಯಿಂದ ನೀಡಿದ್ದ ಹೇಳಿಕೆಯನ್ನು ತಿರುಚಿ ತಪ್ಪಾಗಿ ನಿಮ್ಮ ಮುಂದೆ ತಂದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಟನೆಗೆ ಸಂಬಂಧಿಸಿದಂತೆ ತಮ್ಮನ್ನು ಭೇಟಿಯಾಗಿ ವಿವರಿಸಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಪತ್ರದಲ್ಲಿ ಕೆಪಿಸಿಸಿ ನೇಮಿಸಿದ ಬಿಎಲ್ಎಗಳು ಜವಾಬ್ದಾರಿ ನಿರ್ವಹಿಸಿಲ್ಲ ಎಂಬುದನ್ನು ಹೇಳುವುದು ನನ್ನ ಹೇಳಿಕೆಯ ಉದ್ದೇಶವಾಗಿತ್ತು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಲೋಪಗಳ ಬಗ್ಗೆ ಸರಿಯಾಗಿ ಗಮನ ಹರಿಸಿದ್ದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಇನ್ನೂ 8 ರಿಂದ 10 ಹೆಚ್ಚುವರಿ ಸ್ಥಾನ ಪಡೆಯಲು ಅವಕಾಶವಿತ್ತು ಎಂಬುದಷ್ಟೇ ನನ್ನ ಮಾತಿನ ಅರ್ಥವಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಪತ್ರ ಬರೆದು ಒಂದು ತಿಂಗಳು ಕಳೆದಿದ್ದು ಈವರೆಗೂ ಭೇಟಿಗೆ ರಾಹುಲ್ಗಾಂಧಿ ಅವಕಾಶ ನೀಡಿಲ್ಲ, ರಾಜಣ್ಣ ಬೆಂಬಲಿಗರೂ ಕೂಡ ದೆಹಲಿ ಯಾತ್ರೆ ಮಾಡುವುದಾಗಿ ನಡೆಸಿದ ಪ್ರಯತ್ನ ಯಶ ಕಂಡಿಲ್ಲ.
ಬಯಸಿ ಬಂದು ರಾಜಣ್ಣ ಭೇಟಿಯಾದ ಡಿಕೆಶಿ!
ಸಚಿವ ಸ್ಥಾನದಿಂದ ವಜಾಗೊಂಡರೂ ಕೆ.ಎನ್.ರಾಜಣ್ಣ ಪ್ರಭಾವ ರಾಜಕೀಯ ವಲಯದಲ್ಲಿ ಕಡಿಮೆಯಾಗಿಲ್ಲ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಯಸಿ ಬಂದು ರಾಜಣ್ಣ ಭೇಟಿಯಾಗಿ ಸತತ ಎರಡು ಗಂಟೆ ಚರ್ಚೆ ನಡೆಸಿರುವುದು ಕುತೂಹಲ ಹೆಚ್ಚಿಸಿದೆ.
ಸಿಎಂ ಸಿದ್ದರಾಮಯ್ಯ ಬಣದ ಮುಂಚೂಣಿಯಲ್ಲಿರುವ ರಾಜಣ್ಣ ಅವರನ್ನು ಭೇಟಿಯಾದ ಶಿವಕುಮಾರ್ ಹಿಂದಿನ ಎಲ್ಲಾ ನೆನೆಪುಗಳನ್ನು ಮೆಲುಕು ಹಾಕಿರುವುದು ಭವಿಷ್ಯದ ರಾಜಕೀಯ ಬೆಳವಣಿಗೆಯ ದಿಕ್ಸೂಚಿ ಎನ್ನಿಸಿದೆ.
ರಾಜಣ್ಣ ಅವರ ನಿವಾಸದಲ್ಲಿ ಭೇಟಿಯಾದ ಶಿವಕುಮಾರ್ ಹಾಗೂ ರಾಜಣ್ಣ ನಡುವೆ ಹಿಂದೆಲ್ಲಾ ನೀಡಿದ್ದ ಬಹಿರಂಗ ಹೇಳಿಕೆಗಳ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ. ರಾಜಣ್ಣ ಭೇಟಿಗೆ ಡಿ.ಕೆ.ಶಿವಕುಮಾರ್ ಕಳೆದೊಂದು ವರ್ಷದಿಂದಲೂ ಪ್ರಯತ್ನ ನಡೆಸುತ್ತಲೇ ಇದ್ದರೂ ಆದರೆ, ಭೇಟಿಗೆ ರಾಜಣ್ಣ ಅವಕಾಶ ನೀಡಿರಲಿಲ್ಲ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ನಡೆದಿರುವ ಈ ಸೌಹಾರ್ದ ಭೇಟಿ ಎಲ್ಲರ ಗಮನ ಸೆಳೆದಿದೆ.