- ನಾಡುಕಂಡ ಅಪರೂಪದ ರಾಜಕಾರಣಿ ವೀರಣ್ಣ
- ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ
- ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ ಭಾಗಿ
ಮಾಜಿ ಮಂತ್ರಿ ಸಿ.ವೀರಣ್ಣ ಅವರ ನುಡಿನಮನ ಕಾರ್ಯಕ್ರಮವನ್ನು ಆ.30ರಂದು ಮಧ್ಯಾಹ್ನ 3ಕ್ಕೆ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಶ್ರೀ ವೀರಣ್ಣ ಅಭಿಮಾನಿ ಬಳಗ ಹಾಗೂ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ವತಿಯಿಂದ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಕ್ಷಕರಾಗಿ, ವಕೀಲರಾಗಿ, ವಿಧಾನಪರಿಷತ್ ಸದಸ್ಯರಾಗಿ, ವಿಧಾನಸಭಾ ಸದಸ್ಯರಾಗಿ ನಾಡಿಗೆ ಮತ್ತು ವಾಲ್ಮೀಕಿ ಸಮುದಾಯಕ್ಕೆ ವೀರಣ್ಣ ಅವರು ಸಲ್ಲಿಸಿರುವ ಸೇವೆ ಗಣನೀಯ.1985-89ರವರೆಗೆ ಕೊರಟಗೆರೆ ವಿಧಾನಸಭೆಯ ಸದಸ್ಯರಾಗಿ ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಸಣ್ಣ ಉಳಿತಾಯ, ಸಾರಿಗೆ, ತೋಟಗಾರಿಕೆ ಸೇರಿದಂತೆ ಏಕ ಕಾಲಕ್ಕೆ 7 ಖಾತೆಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಲ್ಲದೆ ವಾಲ್ಮೀಕಿ ಸಮುದಾಯಕ್ಕೆ ಎಸ್ಟಿ ಕ್ಯಾಟಗರಿ ಸ್ಥಾನಮಾನ ನೀಡಲು ಸರ್ಕಾರಗಳು ಮೀನಮೇಷ ಎಣಿಸುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕವಾಗಿ ಇದ್ದ ಗೊಂದಲ ಬಗೆಹರಿಸಿ, ಸಮುದಾಯಕ್ಕೆ ಶೇ.3 ಮೀಸಲಾತಿ ಒದಗಿಸಿಕೊಡುವಲ್ಲಿ ವೀರಣ್ಣ ಅವರ ಪಾತ್ರ ಮಹತ್ವದ್ದು ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸಭಾಪತಿ ಎಸ್.ರಮೇಶ್ಕುಮಾರ್, ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯ ಕೆ.ಎನ್.ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಂದ್ರ, ಮಾಜಿ ಸಂಸದ ಜಿ.ಎಸ್.ಬಸವರಾಜು, ಸಾಹಿತಿ ಬರಗೂರು ರಾಮಚಂದ್ರಪ್ಪ ಉಪಸ್ಥಿತರಿರುವರು. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅಧ್ಯಕ್ಷತೆವಹಿಸುವರು. ಜಿಲ್ಲೆಯ ಜನಪ್ರತಿನಿಧಿಗಳು, ವೀರಣ್ಣ ಅವರ ಹಿತೈಷಿಗಳು, ಅಭಿಮಾನಿಗಳು ಭಾಗವಹಿಸುವಂತೆ ಉಗ್ರಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಉಪಾಧ್ಯಕ್ಷ ಎಚ್.ಸಿ.ಹನುಮಂತಯ್ಯ, ಕಾರ್ಯಾಧ್ಯಕ್ಷ ನರಸಿಂಹಯ್ಯ, ಹನುಮಂತರಾಯಪ್ಪ, ಖಜಾಂಚಿ ರಾಜಪ್ಪ, ಶ್ರೀರಾಮುಲು, ಮುಖಂಡರಾದ ರಾಜಣ್ಣ, ಓಬಳರಾಜು,ಮಹಾಲಿಂಗಪ್ಪ, ಗರುಡಯ್ಯ, ಶೀತಲ್, ಕೃಷ್ಣೇಗೌಡ, ಎಡಿ ಬಲರಾಮಯ್ಯ ಮತ್ತಿತರರು ಹಾಜರಿದ್ದರು.