ತುಮಕೂರಿನ ಎಸ್ಎಸ್ಪುರಂ ಉಮಾಮಹೇಶ್ವರ ದೇವಸ್ಥಾನದಲ್ಲಿ ಬಿಎಸ್ವೈ ಹುಟ್ಟುಹಬ್ಬದ ಅಂಗವಾಗಿ ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ ವತಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಜಿ.ಬಿ.ಜ್ಯೋತಿಗಣೇಶ್, ಪಿ. ಸದಾಶಿವಯ್ಯ, ಆರ್.ಜಿ.ಸುರೇಶ್, ಎನ್.ಆರ್. ಸ್ವಾಮಿ, ನಂಜುಂಡಯ್ಯ, ಚಂದ್ರಶೇಖರ್, ವಿನಯ್ ಜೈನ್, ಲೋಕೇಶ್ ಹೊನ್ನುಡಿಕೆ, ರಾಜಾರಾಮ್ ಮೆಡಿಕಲ್ ಮತ್ತಿತರರು ಇದ್ದರು.
- ಯಡಿಯೂರಪ್ಪ 84ನೇ ಜನ್ಮದಿನ
- ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ
- ಉಮಾಮಹೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ
ತುಮಕೂರು: ರಾಜ್ಯ ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ ಹಾಗೂ ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ 84ನೇ ಹುಟ್ಟುಹಬ್ಬವನ್ನು ಎಸ್.ಎಸ್.ಪುರಂನ ಉಮಾಮಹೇಶ್ವರ ದೇವಾಲಯದ ಬಳಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಿಎಸ್ವೈ ಜನ್ಮದಿನ ಆಚರಣೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು.
ವೇದಿಕೆ ಸಂಚಾಲಕ ಸದಾಶಿವಯ್ಯ ಮಾತನಾಡಿ, ಒಂದು ಕಾಲದಲ್ಲಿ ಬಿ.ಎಸ್.ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂಬ ಮಾತುಗಳು ಕೇಳಿ ಬರುತಿದ್ದವು. ತಮ್ಮನ್ನು ನಂಬಿ ಬಂದವರನ್ನು ಕೈಬಿಡದೆ ರಾಜಕೀಯವಾಗಿ ದಡ ಸೇರಿಸಿದ ವ್ಯಕ್ತಿ ಬಿಎಸ್ವೈ ಮಾತ್ರ. ಅವರಿಗೆ ದೇವರು ಒಳ್ಳೆಯ ಆರೋಗ್ಯ ನೀಡಿ, ಮತ್ತಷ್ಟು ಮಾರ್ಗದರ್ಶನ ಮಾಡುವ ಹುಮ್ಮಸ್ಸು ನೀಡಲಿ ಎಂದು ಶುಭ ಹಾರೈಸಿದರು.
ಬಿಎಸ್ವೈ ರಾಜಕೀಯ ಜೀವನದ ಕುರಿತಾದ ಕಿರುಹೊತ್ತಿಗೆಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಪಿ. ಸದಾಶಿವಯ್ಯ, ಆರ್.ಜಿ.ಸುರೇಶ್, ಎನ್.ಆರ್. ಸ್ವಾಮಿ, ನಂಜುಂಡಯ್ಯ, ಚಂದ್ರಶೇಖರ್, ವಿನಯ್ ಜೈನ್, ಲೋಕೇಶ್ ಹೊನ್ನುಡಿಕೆ, ರಾಜಾರಾಮ್ ಮೆಡಿಕಲ್ ಮತ್ತಿತರರು ಭಾಗವಹಿಸಿದ್ದರು.