ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶಬ್ಬೀರ್ ಅಹ್ಮದ್, ರೈತ ಮುಖಂಡ ಕೃಷ್ಣಮೂರ್ತಿ, ವಸಂತ, ಕೃಷ್ಣಪ್ಪ, ಅನಂತರಾಜು , ಜಯಣ್ಣ, ನರಸಿಂಹಮೂರ್ತಿ, ನೂರಾರು ರೈತರು ಇದ್ದರು.
ಕೊರಟಗೆರೆ: ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಎತ್ತಿನಹೊಳೆ ಯೋಜನೆಯ ಮತ್ತೊಂದು ಅಧ್ಯಾಯ ಈಗ ಕೊರಟಗೆರೆ ತಾಲೂಕಿನ ವಡ್ಡೇರಹಳ್ಳಿಯಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.
ಸುಮಾರು 1.2 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಬಫರ್ ಡ್ಯಾಂ ನಿಮಾರ್ಣಕ್ಕೆ ಸರ್ಕಾರ ಮುಂದಾಗಿದ್ದು, ಬಜೆಟ್ನಲ್ಲಿಯೂ ಈ ಯೋಜನೆಗೆ ಅನುಮೋದನೆ ದೊರೆತಿದೆ. ಆದರೆ, ಯೋಜನೆ ಜಾರಿಗೆ ಬರುವ ಮುನ್ನವೇ ಸ್ಥಳಿಯ ಗ್ರಾಮಸ್ಥರ ತೀವ್ರ ವಿರೋಧ ಉಂಟಾಗಿದೆ.
ವಡ್ಡೇರಹಳ್ಳಿ ಬಳಿ ಹರಿಯುವ ಎತ್ತಿನಹೊಳೆ ನಾಲೆಯ ಬಳಿ 817.50 ಮೀಟರ್ ಎತ್ತರ ಮತ್ತು ಸುಮಾರು 1,440 ಮೀಟರ್ ಉದ್ದದ ಬಫರ್ ಡ್ಯಾಂ ನಿಮಾರ್ಣ ಮಾಡುವ ಯೋಜನೆ ರೂಪಿಸಲಾಗಿದೆ. ಈ ಡ್ಯಾಂ ನಿಮಾರ್ಣದ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಹರಿಸಲು ಸಹಾಯವಾಗಲಿದೆ. ಆದರೆ, ಈ ಯೋಜನೆಯಿಂದ ಹಲವಾರು ಗ್ರಾಮಗಳ ಮನೆಗಳು ಮತ್ತು ಕೃಷಿ ಭೂಮಿ ಮುಳುಗುವ ಭೀತಿ ಎದುರಾಗಿರುವುದರಿಂದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಡ್ಯಾಂ ನಿಮಾರ್ಣದಿಂದ ವಡ್ಡೇರಹಳ್ಳಿ ಸೇರಿದಂತೆ ಕಾಟೇನಹಳ್ಳಿ, ಅಂಕೋನಹಳ್ಳಿ, ನಾಯಕರಪಾಳ್ಯ, ಚೆಣಚೆಹಟ್ಟಿ, ನರಸಾಪುರ ಮತ್ತು ಗಾಣದಹಟ್ಟಿ ಸೇರಿ 8 ಗ್ರಾಮಗಳ ರೈತರು ನೇರ ಪರಿಣಾಮ ಅನುಭವಿಸಬೇಕಾಗುತ್ತದೆ ಎನ್ನಲಾಗಿದೆ.
ಭೂಮಿ ಮತ್ತು ಮನೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಾವನೆಯಿಂದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ಜಮೀನು, ನಮ್ಮ ಮನೆಗಳನ್ನು ನೀರಿನಲ್ಲಿ ಮುಳುಗಿಸಿ ಅಭಿವೃದ್ಧಿ ಮಾಡುವುದಾದರೆ ನಮಗೆ ಅಂಥ ಅಭಿವೃದ್ಧಿ ಬೇಡ. ಪ್ರಾಣ ಬಿಟ್ಟೇವು ಹೊರತು ಡ್ಯಾಂ ನಿಮಾರ್ಣಕ್ಕೆ ಜಾಗ ನೀಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಇನ್ನೊಂದೆಡೆ ಸ್ಥಳಿಯರ ವಿರೋಧದ ಕುರಿತು ಗೃಹ ಸಚಿವ ಜಿ.ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದು, ರೈತರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಇದಕ್ಕೂ ಮೊದಲು ಈ ಬಫರ್ ಡ್ಯಾಂ ನಿಮಾರ್ಣಕ್ಕೆ ಬೈರಗೊಂಡನಹಳ್ಳಿ ಪ್ರದೇಶವನ್ನು ಪರಿಗಣಿಸಲಾಗಿತ್ತು. ನಂತರ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಭಾಗದಲ್ಲಿ ಚರ್ಚೆಯಾದರೂ, ಮತ್ತೆ ಬೈರಗೊಂಡನಹಳ್ಳಿಯಲ್ಲೇ ನಿಮಾರ್ಣದ ಪ್ರಸ್ತಾಪ ಹೊರಬಂದಾಗ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಕಾನೂನು ಹೋರಾಟಕ್ಕೆ ಸಿದ್ಧತೆ: ಆರು&ಏಳು ಬಾರಿ ಸಭೆಗಳು ನಡೆದರೂ ಗ್ರಾಮಸ್ಥರು ಒಪ್ಪಿಗೆ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ವಡ್ಡೇರಹಳ್ಳಿಯಲ್ಲಿ ಡ್ಯಾಂ ನಿಮಾರ್ಣಕ್ಕೆ ಸರ್ಕಾರ ಮುಂದಾಗಿದೆ. ಆದರೆ, ವಡ್ಡೇರಹಳ್ಳಿಯಲ್ಲಿ ಕೂಡ ವಿರೋಧ ವ್ಯಕ್ತವಾಗಿದ್ದು, ವಿಷಯವು ಈಗ ಸರ್ಕಾರ ಮತ್ತು ಗ್ರಾಮಸ್ಥರ ನಡುವೆ ಸಂಘರ್ಷದ ರೂಪ ಪಡೆಯುವ ಲಕ್ಷಣವಿದೆ.