Establishment of more substations for quality power supply
ತುರುವೇಕೆರೆ: ರೈತರ ಕೃಷಿ ಬಳಕೆಗೆ ಗುಣಮಟ್ಟದ ವಿದ್ಯುತ್ ನೀಡಲು ತಾಲೂಕಿನಲ್ಲಿ ಹೆಚ್ಚು ವಿದ್ಯುತ್ ಉಪ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ತಾಲೂಕಿನ ಮಾಯಸಂದ್ರ ಹೋಬಳಿ ಮುಗುಳೂರು ಗ್ರಾಮದ ಸಮೀಪ ಕರ್ನಾಟಕ ಪವರ್ ಟ್ರಾನ್ಸ್ ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಮುಂಜೂರಾದ ಸುಮಾರು 21.83 ಲ ವೆಚ್ಚದಲ್ಲಿ 110/11ಕೆ.ವಿ.ವಿದ್ಯುತ್ ಉಪ ಸ್ಥಾವರ ಸ್ಥಾಪನೆಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೇಸಿಗೆ ಕಾಲದಲ್ಲಿ ರೈತರ ಕೃಷಿ ಪಂಪ್ ಸೆಟ್ಗಳಿಗೆ ಗುಣಮಟ್ಟ ವೋಲ್ಟೇಜ್ ವಿದ್ಯುತ್ ದೊರಕದೆ ರೈತರು ತೋಟಗಳಿಗೆ ನೀರು ಹಾಯಿಸಲು ಸಂಕಷ್ಟ ಪಡುವಂತಾಗಿತ್ತು. ಈ ಸಮಸ್ಯೆ ನಿವಾರಿಸಲು ಮಣೆಚಂಡೂರು, ಹರಿದಾಸನಹಳ್ಳಿ ಎರಡು ಕಡೆಗಳಲ್ಲಿ ಈಗಾಗಲೇ ವಿದ್ಯುತ್ ಉಪ ಸ್ಥಾವರ ಸ್ಥಾಪಿಸಲಾಗಿದೆ ಎಂದರು.
ಮುಗಳೂರು ಬಳಿ ವಿದ್ಯುತ್ ಉಪ ಸ್ಥಾವರ ನಿರ್ಮಾಣದಿಂದ ಈ ಭಾಗದ ಸುಮಾರು 30 ಗ್ರಾಮಗಳಿಗೆ ಅನುಕೂಲವಾಗಲಿದೆ. ಇನ್ನೆರೆಡು ತಿಂಗಳಲ್ಲಿ ಪೂರ್ಣಗೊಂಡು ರೈತರಿಗೆ ಅನುಕೂಲವಾಗಲಿದೆ. ವಿದ್ಯುತ್ ಸ್ಥಾವರಕ್ಕೆ ಎರಡು ಎಕರೆ ಭೂಮಿ ನೀಡಿದ್ದು, ಇನ್ನು ಉಳಿಕೆ ಭೂಮಿಯನ್ನು ಸರ್ಕಾರಿ ಯೋಜನೆಗಳಿಗೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಆನೆಕೆರೆ ಬಳಿ ವಿದ್ಯುತ್ ಉಪ ಸ್ಥಾವರ ನಿರ್ಮಿಸಲಾಗುವುದು ಎಂದರು.
ಎಸ್ಒಗಳಾದ ನಾರಾಣಪ್ಪ, ಉಮೇಶ್ವರಯ್ಯ, ವಿದ್ಯುತ್ ಗುತ್ತಿಗೆದಾರ ಸಂದ ಅಧ್ಯ ಮಂಜಣ್ಣ, ರಮೇಶ್ ಕುಮಾರ್, ಮುಖಂಡರಾದ ರಾಜೀವ್ ಕೃಷ್ಣಪ್ಪ, ಕುಶಾಲ್ ಕುಮಾರ್, ಬಸವರಾಜು, ರಾಜಶೇಖರ ಇದ್ದರು.