ಮಧುಗಿರಿಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ -69ರ ಚತುಷ್ಪಥ ರಸ್ತೆ ಅಭಿವೃದ್ಧಿ ಕುರಿತ ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ಎನ್​.ರಾಜಣ್ಣ, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್​ ನಂದಿನಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮಾ ಇದ್ದರು.  
ತುಮಕೂರು

ಚತುಷ್ಪಥ ಕಾಮಗಾರಿ ಸಮಸ್ಯೆಯಾಗದಿರಲಿ

ಅಧಿಕಾರಿಗಳಿಗೆ ಶಾಸಕ ಕೆ.ಎನ್​.ರಾಜಣ್ಣ ಸೂಚನೆ

ವಿಜಯವಾಣಿ ಸುದ್ದಿಜಾಲ ಮಧುಗಿರಿ

ರಾಷ್ಟ್ರೀಯ ಹೆದ್ದಾರಿ -69ರ ಶಿರಾ-ಬಡವನಹಳ್ಳಿ ಚತುಷ್ಪಥ ಕಾಮಗಾರಿಯನ್ನು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಶಾಸಕ ಕೆ.ಎನ್​.ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ -69ರ ಚತುಷ್ಪಥ ಅಭಿವೃದ್ಧಿ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಶಿರಾದಿಂದ ಬಡವನಹಳ್ಳಿವರೆಗಿನ 20.2 ಕಿ.ಮೀ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ 584 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈಗಾಗಲೇ ಟೆಂಡರ್​ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು 15 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.

ಶಿರಾ ಮತ್ತು ಮಧುಗಿರಿ ತಾಲೂಕಿನಲ್ಲಿ ಒಟ್ಟು 900 ಮರಗಳನ್ನು ತೆರವುಗೊಳಿಸಲಾಗುವುದು. ಇದಕ್ಕೆ ಪರ್ಯಾಯವಾಗಿ 1 ಮರಕ್ಕೆ 10 ಸಸಿಗಳಂತೆ ನೆಡಲು ಉದ್ದೇಶಿಸಲಾಗಿದ್ದು, ಪ್ರತಿ ಸಸಿಗೆ 411ರಂತೆ ಒಟ್ಟು 37 ಲಕ್ಷ ರೂ. ಅನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಅರಣ್ಯ ಇಲಾಖೆಗೆ ಪಾವತಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಎಇಇ ಲಕ್ಷಿ$್ಮಕಾಂತ ಸಭೆಗೆ ಮಾಹಿತಿ ನೀಡಿದರು.

ಎರಡನೇ ಹಂತದ ಬಡವನಹಳ್ಳಿಯಿಂದ ಭೈರೇನಹಳ್ಳಿವರೆಗಿನ ಚತುಷ್ಪಥ ನಿಮಾರ್ಣಕ್ಕೂ 950 ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರವೇ ಟೆಂಡರ್​ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾಗಲಿದೆ. ಅಲ್ಲದೆ, ಪಟ್ಟಣದ ನೃಪತುಂಗ ವೃತ್ತದಿಂದ ಹೈಸ್ಕೂಲ್​ ರಸ್ತೆಯವರೆಗಿನ ಭೂಮಾಲೀಕರಿಗೆ ಜನವರಿ ತಿಂಗಳಲ್ಲಿ ಪರಿಹಾರದ ಮೊತ್ತವನ್ನು ವಿತರಿಸುವಂತೆ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.

ವಿದ್ಯುತ್​ ಕಂಬಗಳ ಸ್ಥಳಾಂತರ: ರಸ್ತೆ ವಿಸ್ತರಣೆಗೆ ಅಡ್ಡಿಯಾಗುವ ವಿದ್ಯುತ್​ ಕಂಬಗಳನ್ನು ಸ್ಥಳಾಂತರಿಸಲು 2.22 ಕೋಟಿ ರೂ. ಅಂದಾಜು ಪಟ್ಟಿಯ ಪ್ರಸ್ತಾವನೆಯನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಬೆಸ್ಕಾಂ ಎಇಇ ಮಾಕಣ್ಣನಾಯಕ್​ ತಿಳಿಸಿದರು.

ಡಿವೈಎಸ್ಪಿ ಮಂಜುನಾಥ್​, ತಾಪಂ ಇಒ ಧನಂಜಯ, ಜಿಪಂ ಎಇಇ ಮಂಜುನಾಥ್​, ಪುರಸಭೆ ಮುಖ್ಯಾಧಿಕಾರಿ ಸುರೇಶ್​, ಮುಖಂಡರಾದ ಲಕ್ಷಿ$್ಮನಾರಾಯಣ, ಕುರುಬರಹಳ್ಳಿ ಹರ್ಷ ಇದ್ದರು.