ಪಾವಗಡ ತಾಲೂಕು ನಿಡಗಲ್ ಹೋಬಳಿ, ಕೆ.ಟಿ.ಹಳ್ಳಿ ಗ್ರಾಮದಲ್ಲಿ ಗುಡಿಸಲಿಗೆ ಬೆಂಕಿ ವೃದ್ಧೆ ಸಜೀವ ದಹನ  
ತುಮಕೂರು

ಗುಡಿಸಲಿಗೆ ಬೆಂಕಿ ವೃದ್ಧೆ ಸಜೀವ ದಹನ

ಡಾ.ಶ್ರೀಹರ್ಷ ಸೋರಲಮಾವು

ಪ್ರಮುಖ ಮುಖ್ಯಾಂಶಗಳು

  • ರಾತ್ರಿ ಮಲಗಿದ್ದಾಗ ಕಾಣಿಸಿಕೊಂಡ ಬೆಂಕಿ
  • ಹೊರಬರಲಾಗದೆ ವೃದ್ಧೆ ಸಜೀವ ಧಹನ
ಪಾವಗಡ: ತಾಲೂಕು ನಿಡಗಲ್ ಹೋಬಳಿ, ಕೆ.ಟಿ.ಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯ ರಾತ್ರಿ ಗುಡಿಸಿಲಿಗೆ ಆಕಸ್ಮಿಕ ಅಗ್ನಿ ಅವಘಡ ನಡೆದು ವೃದ್ಧೆಯೊಬ್ಬರು ಸಜೀವ ದಹನವಾಗಿರುವ ಘಟನೆ ನಡೆದಿದೆ.
ಗ್ರಾಮದ ನಿವಾಸಿ, ದಿವಂಗತ ಪರಸೆ ಕದರಪ್ಪ ಅವರ ಪತ್ನಿ ಸಣ್ಣಲಕ್ಷ್ಮಮ್ಮ (67) ಮೃತಪಟ್ಟ ದುರ್ದೈವಿ.
ಗುರುವಾರ ಮಧ್ಯ ರಾತ್ರಿ ಕೆ.ಟಿ.ಹಳ್ಳಿಯಲ್ಲಿರುವ ಸಣ್ಣಲಕ್ಷ್ಮಮ್ಮ ಗುಡಿಸಲು ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಒಣಹುಲ್ಲಿನಿಂದ ಕೂಡಿದ್ದ ಗುಡಿಸಲಾಗಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಮನೆಗೆ ವ್ಯಾಪಿಸಿತು. ವಯೋವೃದ್ದೆ ಕಾರಣದಿಂದ ಬೆಂಕಿಯ ಜ್ವಾಲೆಯಿಂದ ತಕ್ಷಣವೇ ಹೊರಬರಲು ಸಣ್ಣಲಕ್ಷ್ಮಮ್ಮ ಅವರಿಗೆ ಸಾಧ್ಯವಾಗದ ಪರಿಣಾಮವಾಗಿ ಅವರು ಮನೆಯೊಳಗೆಯೇ ಸಿಲುಕಿ ಬೆಂಕಿಯ ಕೆನ್ನಾಲಿಕೆಗೆ ಬಲಿಯಾದರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರಾದರೂ, ಅವರು ತಲುಪುವಷ್ಟರಲ್ಲಾಗಲೇ ಇಡೀ ಗುಡಿಸಲು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು.
ವಿಷಯ ತಿಳಿದ ಅರಸಿಕೇರೆ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಸಿಕೇರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.