ತುಮಕೂರಿನಲ್ಲಿ ಇಜ್ಞಾನ ಟ್ರಸ್ಟ್ ಹೊರತಂದಿರುವ "ಪುಟ್ಟ ಪುಟ್ಟಿ ಮತ್ತು ಸೈಬರ್ ಸುರಕ್ಷತೆ' ಕೃತಿಯನ್ನು ಟಿ.ಎಸ್.ಗೋಪಾಲ್ ಬಿಡುಗಡೆಗೊಳಿಸಿದರು. ಟಿ.ಜಿ.ಶ್ರೀನಿಧಿ, ಜಿ.ಎಸ್.ಅರುಣ್ ಕುಮಾರ್, ರೂಪಶ್ರೀ ಇದ್ದರು.
- ಪುಟ್ಟಪುಟ್ಟಿ ಮತ್ತು ಸೈಬರ್ ಸುರಕ್ಷತೆ ಕೃತಿ
- ಇಜ್ಞಾನ ಟ್ರಸ್ಟ್ ವತಿಯಿಂದ ಲೋಕಾರ್ಪಣೆ
- ಲೇಖಕ ಟಿ.ಜಿ.ಶ್ರೀನಿಧಿ
ತುಮಕೂರು: ತಂತ್ರಜ್ಞಾನದ ಹೊಸ ಸವಲತ್ತುಗಳನ್ನು ಬಳಸುವುದರ ಜತೆಗೆ ಜವಾಬ್ದಾರಿಯುತ, ಸುರತವಾಗಿ ಬಳಸುವ ಅರಿವನ್ನು ಹೊಂದಿರಬೇಕು ಎಂದು ಲೇಖಕ ಟಿ.ಜಿ.ಶ್ರೀನಿಧಿ ಹೇಳಿದರು.
ನಗರದ ಅಂಕಿತ ಶಾಲೆಯಲ್ಲಿ ಶನಿವಾರ ಇಜ್ಞಾನ ಟ್ರಸ್ಟ್ ಹೊರತಂದಿರುವ "ಪುಟ್ಟ ಪುಟ್ಟಿ ಮತ್ತು ಸೈಬರ್ ಸುರಕ್ಷತೆ' ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜ್ಞಾನ-ತಂತ್ರಜ್ಞಾನ ಜಗತ್ತಿನ ಹೊಸ ಬೆಳವಣಿಗೆಗಳ ಬಗ್ಗೆ ನಮ್ಮ ಭಾಷೆಯಲ್ಲೇ ಮಾಹಿತಿ ಸಿಗುವಂತೆ ಆಗಬೇಕಿರುವುದು ಮುಖ್ಯ. ಈ ನಿಟ್ಟಿನಲ್ಲಿ ಬೆಂಗಳೂರಿನ ಇ ಜ್ಞಾನ ಟ್ರಸ್ಟ್ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂತಹ ಕೆಲಸಗಳು ಇನ್ನೂ ಹೆಚ್ಚು ಪ್ರಮಾಣದಲ್ಲಿ ನಡೆಯಬೇಕಿದೆ ಎಂದರು.
ವಿಜ್ಞಾನ-ತಂತ್ರಜ್ಞಾನ ವಿಷಯಗಳನ್ನು ಕತೆಗಳ ರೂಪದಲ್ಲಿ, ಆಕರ್ಷಕ ಚಿತ್ರಗಳೊಡನೆ ಮಕ್ಕಳಿಗೆ ತಲುಪಿಸುವ ಉದ್ದೇಶದಿಂದ ಇಜ್ಞಾನ ಟ್ರಸ್ಟ್ ಸಂಸ್ಥೆ ಹೊರತಂದಿರುವ 'ಪುಟ್ಟಪುಟ್ಟಿ ಮತ್ತು ಸೈಬರ್ ಸುರಕ್ಷತೆ' ಕೃತಿಯು ವಯಸ್ಸಿನ ಭೇದಭಾವವಿಲ್ಲದೆ ಡಿಜಿಟಲ್ ಸಾಧನಗಳನ್ನು ಎಲ್ಲೆಲ್ಲೂ ವ್ಯಾಪಕವಾಗಿ ಬಳಸುತ್ತಿರುವ ಈ ಸಂದರ್ಭದಲ್ಲಿ, ಅವುಗಳನ್ನು ಸುರಕ್ಷಿತವಾಗಿ ಬಳಸುವುದರ ಬಗ್ಗೆ ಮಾಹಿತಿ ನೀಡುವ ವಿಷಯ ಹೊಂದಿದೆ ಎಂದು ತಿಳಿಸಿದರು.
ಅಮೆರಿಕಾದಿಂದ ಅಂತರ್ಜಾಲ ಮೂಲಕ ಆಶಯ ಭಾಷಣಮಾಡಿದ ಅರುಣ್ ಕುಮಾರ್, ಪ್ರಯತ್ನ ಮತ್ತು ಆತ್ಮವಿಶ್ವಾಸಗಳ ಸಂಗಮವೇ ಯಶಸ್ಸು. ಇ ಜ್ಞಾನ ಟ್ರಸ್ಟ್ ಸಂಸ್ಥಾಪಕರಲ್ಲೊಬ್ಬರಾಗಿದ್ದ ಬಿ. ಎಸ್.ವಿಶ್ವನಾಥ್ ಸಣ್ಣ ಹಳ್ಳಿಯೊಂದರಲ್ಲಿ ಬೆಳೆದರು ತಮ್ಮ ಪ್ರಯತ್ನದಿಂದಾಗಿ ಬಿಎಚ್ಇಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸ್ಥಾನಕ್ಕೆ ಏರಿದ್ದರು. ಅಂತಹ ಸಾಧಕರ ಜೀವನ ನಮಗೆ ಆದರ್ಶವಾಗಬೇಕಿದೆ ಎಂದು ತಿಳಿಸಿದರು.
ಸೈಬರ್ ಸುರಕ್ಷತೆ ಕುರಿತ "ಪುಟ್ಟ ಪುಟ್ಟಿ ಮತ್ತು ಸೈಬರ್ ಸುರಕ್ಷತೆ' ಪುಸ್ತಕದ ಪ್ರತಿಗಳನ್ನು ಅಂಕಿತ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು. ಮಕ್ಕಳದೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.
ಇಜ್ಞಾನ ಟ್ರಸ್ಟ್ ಅಧ್ಯಕ್ಷ ಟಿ. ಎಸ್.ಗೋಪಾಲ್, ಅಂಕಿತ ಶಾಲೆಯ ಜಿ.ಎಸ್.ಅರುಣ್ಕುಮಾರ್, ಜಿ. ಎಸ್.ಅಭಿಷೇಕ್, ರೂಪಶ್ರೀ ಉಪಸ್ಥಿತರಿದ್ದರು.