ತುಮಕೂರು ವಿವಿಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾದಕ ದ್ರವ್ಯ ಜಾಗೃತಿಯನ್ನು ಕೆ.ವಿ. ಅಶೋಕ್ ಉದ್ಘಾಟಿಸಿದರು. ಎ.ಜಿ.ವಿನಯ್, ಪುರುಷೋತ್ತಮ್, ಗೋಪಾಲ್ , ಮನಿಶಾ ಭಟ್, ಚಂದ್ರಶೇಖರ್, ಪ್ರೊ. ಬಿ. ಶೇಖರ್, ಎ.ಎಂ.ಮಂಜುನಾಥ್ ಇದ್ದರು.
- ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ
- ತುಮಕೂರು ವಿಶ್ವವಿದ್ಯಾಲಯ ಸಹಯೋಗ
- ಯುವ ಜನತೆಯೇ ಪೊಲೀಸ್ ಮಾರ್ಷಲ್ಗಳಾಗಲಿ
ತುಮಕೂರು: ಯುವಜನತೆ ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ದೇಶವನ್ನು ನಶೆ ಮುಕ್ತೆಗೊಳಿಸಲು ಪಣ ತೊಡಬೇಕಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ಹೇಳಿದರು.
ವಿವಿಯ ಸರ್ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದುಶ್ಚಟಗಳಿಂದ ಕಾಪಾಡಲು ಯುವ ಜನತೆಯೇ ಪೊಲೀಸ್ ಮಾರ್ಷಲ್ಗಳಾಗಬೇಕಿದೆ ಎಂದರು.
ಸಮಾಜದಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಮಾದಕ ದ್ರವ್ಯ ವ್ಯಸನದ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ಅದರ ಸೇವೆನಿಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಮನವರಿಕೆ ಮಾಡಿಕೊಡಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡೋವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಲಹೆನೀಡಿದರು.
ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳೇ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ. ಆನ್ಲೈನ್ನಲ್ಲಿ ಆಹಾರ ಆರ್ಡರ್ ಮಾಡಿದಷ್ಟೇ ಸುಲಭವಾಗಿ, ಕೆಲವೇ ನಿಮಿಷಗಳಲ್ಲಿ ಡ್ರಗ್ಸ್ ಕೂಡ ವ್ಯಸನಿಗಳ ಕೈ ಸೇರುತ್ತಿದೆ. ವಿವಿಧ ಜಾಹೀರಾತುಗಳು ಸಹ ಯುವಜನತೆಯನ್ನು ಮದ್ಯ ಹಾಗೂ ಮಾದಕ ವ್ಯಸನಗಳ ಕಡೆಗೆ ಪ್ರೇರೇಪಿಸುತ್ತಿವೆ ಯುವಕರು ತಮ್ಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು ಎಂದು ಆರೋಹಣ್ ಫೌಂಡೇಶನ್ ನಿರ್ದೇಶಕ ಎ.ಜಿ.ವಿನಯ್ ಹೇಳಿದರು.
ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮುಕ್ತ ಭಾರತದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ ಎಎಸ್ಪಿ ಪುರುಷೋತ್ತಮ್ ಮಾತನಾಡಿ, ಸಮಾಜವನ್ನು ಸುಧಾರಿಸುವಲ್ಲಿ ಯುವಜನತೆಯ ಪಾತ್ರ ದೊಡ್ಡದಾಗಿದ್ದು, ಮಾದಕ ದ್ರವ್ಯ ಮುಕ್ತ ಸಮಾಜ ನಿಮಾರ್ಣಕ್ಕೆ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ ಎಂದರು.
ಹಿಂದಿನ ಕಾಲದಲ್ಲಿ ಸೀಮಿತ ಜನರಿಗೆ ಮಾತ್ರ ಸಿಗುತ್ತಿದ್ದ ಮಾದಕ ದ್ರವ್ಯಗಳು, ನಗರ, ಪಟ್ಟಣ ಹಾಗೂ ಗ್ರಾಮೀಣಭಾಗದಲ್ಲು ಸುಲಭವಾಗಿ ಲಭ್ಯವಾಗುತ್ತಿರುವುದು ದುರದೃಷ್ಟಕರ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ಮಾದಕ ದ್ರವ್ಯಕ್ಕೆ ದಾಸನಾದರೂ ಇಡೀ ಕುಟುಂಬವೇ ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ, ಇಂದಿನ ಯುವ ಪೀಳಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳಬೇಕು ಎಂದು ಎಎಸ್ಪಿ ಗೋಪಾಲ್ ಹೇಳಿದರು.
ಸಂಪನ್ಮೂಲ ವ್ಯಕ್ತಿ ಮನಿಶಾ ಭಟ್, ಡಿವೈಎಸ್ಪಿ ಚಂದ್ರಶೇಖರ್ , ಹಿರಿಯ ಪ್ರಾಧ್ಯಾಪಕ ಪ್ರೊ. ಬಿ. ಶೇಖರ್, ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಎ.ಎಂ.ಮಂಜುನಾಥ್ ಉಪಸ್ಥಿತರಿದ್ದರು.
ಮಾದಕ ವಸ್ತುಗಳ ಬಳಕೆಯಿಂದ ವ್ಯಕ್ತಿಯ ಆರೋಗ್ಯ, ಶಿಕ್ಷಣ, ಕುಟುಂಬ ಹಾಗೂ ಸಮಾಜದ ಮೇಲೆ ಅತ್ಯಂತ ದುಷ್ಪರಿಣಾಮ ಉಂಟಾಗುತ್ತದೆ. ವಿದ್ಯಾರ್ಥಿಗಳು ಒಳ್ಳೆಯದು, ಕೆಟ್ಟದ್ದನ್ನು ಅರಿತು ಜವಾಬ್ದಾರಿಯುತವಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಮಹತ್ವದ ಹಂತದಲ್ಲಿದ್ದಾರೆ. ಇಂತಹ ದುಶ್ಚಟಗಳಿಂದ ಯುವಜನತೆ ದೂರವಿರಬೇಕು. ತುಮಕೂರು ಅನ್ನು ನಶೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ನಾವೆಲ್ಲರೂ ಒಟ್ಟಾಗಿ ಕೈಜೋಡಿಸಬೇಕಾಗಿದೆ.