ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಮಹಾಶಿವಯೋಗಿಗಳ 7 ನೇ ಪುಣ್ಯ ಸಂಸ್ಮರಣೋತ್ಸವ ಸಮಾರಂಭವನ್ನು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್​ ಉದ್ಘಾಟಿಸಿದರು. ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಮಧುಸೂದನ್​ ಸಾಯಿ, ಥಾವರ್​ ಚಂದ್​ ಗೆಹ್ಲೋಟ್​, ಡಾ.ಜಿ.ಪರಮೇಶ್ವರ್​, ಟಿ.ಬಿ.ಜಯಚಂದ್ರ, ಗೋವಿಂದ ಕಾರಜೋಳ, ಡಾ.ಸಿ.ಎನ್​.ಮಂಜುನಾಥ್​, ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್​ ಇದ್ದರು. 
ತುಮಕೂರು

ಶಿವಕುಮಾರ ಶ್ರೀಗಳ ಜೀವನವೇ ದಯೆ, ಸೇವೆಯ ಸಂದೇಶ

ಪ್ರಮುಖ ಮುಖ್ಯಾಂಶಗಳು

  • ಸಿದ್ದಗಂಗಾ ಶ್ರೀಗಳ 7ನೇ ಪುಣ್ಯ ಸಂಸ್ಮರಣೋತ್ಸವ
  • ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್​ ಬಣ್ಣನೆ
  • ಸಮೂಹ ಸ್ಮರಣೆಯ ಪುಣ್ಯ ಕ್ಷಣ ಇದು.
ತುಮಕೂರು: ಶತಮಾನದ ಸಂತ ಡಾ.ಶಿವಕುಮಾರ ಶ್ರೀಗಳ ಜೀವನವೇ ದಯೆ, ಜ್ಞಾನ, ಸೇವೆಯ ಸಂದೇಶವಾಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಕೃಷ್ಣನ್​ ಬಣ್ಣಿಸಿದರು.
ಸಿದ್ದಗಂಗಾಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಬುಧವಾರ ಆಯೋಜಿಸಿದ್ದ ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಮಹಾಶಿವಯೋಗಿಗಳ 7 ನೇ ಪುಣ್ಯ ಸಂಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅನಿಶ್ಚಿತತೆ, ವಿಫಲತೆ, ಅಶಾಂತಿಯ ಈ ಜಗತ್ತಿನಲ್ಲಿ ಪರಮಪೂಜ್ಯ ಶ್ರೀಗಳ ಜೀವನವು ನೈತಿಕ ದಿಕ್ಕನ್ನು ಸೂಚಿಸುವ ಪ್ರಜ್ವಲಿಸುವ ನಂದಾದೀಪವಾಗಿದೆ ಎಂದರು.
ಸಮೂಹ ಸ್ಮರಣೆಯ ಪುಣ್ಯ ಕ್ಷಣ ಇದು. ನಾವು ಈ ದಿನ ಶಿವಕುಮಾರ ಶ್ರೀಗಳ 7ನೇ ಪುಣ್ಮಸ್ಮರಣೆ ಆಚರಿಸುತ್ತಿದ್ದೇವೆ. ಲಿಂಗೈಕ್ಯರಾಗಿ 7 ವರ್ಷಗಳಾದರೂ ಶ್ರೀಗಳ ಸಾನಿಧ್ಯ ಇನ್ನೂ ಒಂದಿಷ್ಟು ಕುಂದಿಲ್ಲ. ಬದಲಾಗಿ ಅವರ ಪ್ರಸ್ತತತೆ ಇನ್ನಷ್ಟು ಬಲವಾಗಿದೆ. ಅನ್ನ,ಅಕ್ಷರ,ವಸತಿ ತ್ರಿವಿಧ ದಾಸೋಹ ಗಟ್ಟಿಗೊಳಿಸಿದ ಶ್ರೀಗಳು ಕೇವಲ ವಿಧಿವಿಧಾನಗಳಲ್ಲಿ ಜೀವಿತವಾಗಿರಲಿಲ್ಲ. ಕ್ರೀಯಾಶೀಲ ಸಂತರಾಗಿದ್ದರು ಎಂದು ಸ್ಮರಿಸಿದರು.
ಶಿವಕುಮಾರ ಸ್ವಾಮೀಜಿ 30ನೇ ವಯಸ್ಸಿನಲ್ಲೇ ಶ್ರೀಮಠದ ಜವಾಬ್ದಾರಿವಹಿಸಿಕೊಂಡಿದ್ದು ಆಧ್ಯಾತ್ಮವನ್ನು ಸೇವೆ, ಕರ್ತವ್ಯವಾಗಿ ಪರಿವರ್ತಿಸಿದ ಮಹಾಸಂತರೆನಿಸಿದರು. ಸೇವೆ ಅಂದರೆ ಸಾಧನೆ, ಮಾನವತೆ ಅಂದರೆ ಅತ್ಯುನ್ನತ ಕೊಡುಗೆ ಎಂಬುದನ್ನು ತ್ರಿವಿಧ ದಾಸೋಹದ ಮೂಲಕ ಶ್ರೀಗಳು ದೃಢಪಡಿಸಿದ್ದಾರೆ. ಶ್ರೀಗಳು ಹಾಗೂ ಪ್ರಸ್ತುತ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠವು ಸಾಮಾಜಿಕ ಚಳವಳಿ ಕೇಂದ್ರವಾಗಿ ರೂಪಿತವಾಗಿದೆ ಎಂದು ಸಿ.ಪಿ.ರಾಧಾಕೃಷ್ಣನ್​ ತಿಳಿಸಿದರು.
ಸಿದ್ದಗಂಗಾ ಮಠವು ದೀರ್ಘ ಆಧ್ಯಾತ್ಮಿಕ ಪರಂಪರೆ ಹೊಂದಿದೆ. ಅಟವಿ ಶ್ರೀಗಳಿಂದ ಆರಂಭವಾದ ಮಠವು ಅನ್ನ, ಅಕ್ಷರ, ಆಶ್ರಯ ತ್ರಿವಿಧ ದಾಸೋಹದ ಮಹಾಮನೆಯಾಗಿದೆ. ಜಾತಿ ಮತಗಳ ಹಂಗು ಇಲ್ಲದೇ ಎಲ್ಲಾ ಬಡ, ಗ್ರಾಮೀಣಭಾಗದ ಲಾಂತರ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಶತಮಾನ ಕಾಲ ಅಸಾಮಾನ್ಯ ಸರಳತೆ, ಅಪೂರ್ವ ಶಿಸ್ತಿನ ಜೀವನ ನಡೆಸಿದ ಶಿವಕುಮಾರ ಶ್ರೀಗಳು, ಇಳಿ ವಯಸ್ಸಿನಲ್ಲು ವಿಶ್ರಾಂತಿ ಪಡೆಯದೆ ಯುವಕನಂತೆ ಸೇವೆಗೆ ಸಮರ್ಪಿಸಿಕೊಂಡು ನಿಸ್ವಾರ್ಥ ಸೇವೆ ಬದ್ಧತೆಯಿಂದ ಜೀವನ ಸಾಗಿಸಿದರು ಎಂದರು.
ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ನೇತೃತ್ವವಹಿಸಿದ್ದರು. ಶ್ರೀ ಸತ್ಯಸಾಯಿ ಲೋಕ ಸೇವಾ ಗುರುಕುಲಂನ ಶ್ರೀ ಮಧುಸೂದನ ಸಾಯಿ, ಶ್ರೀಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಅಧ್ಯಕ್ಷತೆವಹಿಸಿದ್ದರು. ಕೇಂದ್ರ ರೈಲ್ವೆ, ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​, ದೆಹಲಿವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಸಂಸದರಾದ ಗೋವಿಂದ ಕಾರಜೋಳ, ಡಾ.ಸಿ.ಎನ್​.ಮಂಜುನಾಥ್​, ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್​ ಉಪಸ್ಥಿತರಿದ್ದರು.
ಮೋದಿ ನಾಯಕತ್ವದಲ್ಲಿ ಹಿಂದೂಗಳ ಪುನರ್​ ಚೈತನ್ಯ
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಹಿಂದೂಗಳ ಪುನರ್​ ಚೈತನ್ಯವಾಗುತ್ತಿದೆ.
ವಿಕಸಿತ ಭಾರತದತ್ತ ನಾವು ಸಾಗುತ್ತಿದ್ದೇವೆ. ಜಗತ್ತಿನ ದೊಡ್ಡ ಸಮಸ್ಯೆಗಳಿಗೆ ಭಾರತ ಪರಿಹಾರ ಒದಗಿಸುತ್ತಿದೆ. ಆಧ್ಯಾತ್ಮಿಕ, ಸಾಂಸತಿಕ ಪರಂಪರೆ ಸಮಾಜವನ್ನು ನಮ್ಮ ದೇಶ ಉಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಈ ಶಾಶ್ವತ ಆದರ್ಶಗಳು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಇಂತಹ ಆಧ್ಯಾತ್ಮಿಕ ಮಹತ್ವದ ಭೂಮಿಕೆಯನ್ನು ಶ್ರೀಮಠವು ನಿಭಾಯಿಸುತ್ತಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್​ ಮೋದಿ ಆಡಳಿತವನ್ನು ಪ್ರಶಂಸಿದರು.
ಅಭಿವೃದ್ಧಿ, ಪರಂಪರೆಯ ಜತೆಜತೆಯಲಿ ಭೌತಿಕವಾಗಿ ಮುನ್ನಡೆಯಲು ಆಧ್ಯಾತ್ಮಿಕವಾಗಿ ನೆಲೆಯೂರಿದ್ದೇವೆ. ಸಿದ್ದಗಂಗಾ ಮಠದಂತಹ ಸಂಸ್ಥೆಗಳು ನಮ್ಮನ್ನು ಆಧ್ಯಾತ್ಮಿಕವಾಗಿ ಒಗ್ಗೂಡಿಸಿದೆ. ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆಯನ್ನು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಮಾಡಬೇಕು. ಶ್ರೀಗಳ ತತ್ವಾದರ್ಶವನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತಾಗಲಿದೆ.
ಸಿ.ಪಿ.ರಾಧಾಕೃಷ್ಣನ್​
ಉಪರಾಷ್ಟ್ರಪತಿ
111 ವರ್ಷಗಳ ಕಾಲ ಧಾರ್ಮಿಕ, ಸಾಮಾಜಿಕ ಸೇವೆ ಸಲ್ಲಿಸಿದ ಶಿವಕುಮಾರ ಶ್ರೀಗಳು ಎಲ್ಲ ಸಂತರಿಗೂ ದಾರಿ ದೀಪವಾಗಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣ ಅನ್ನ, ಆಶ್ರಯ ನೀಡುವಲ್ಲಿ ಶ್ರೀಮಠ ಮತ್ವದ ಕೊಡುಗೆ ನೀಡುತ್ತಿದೆ. ವಿಶ್ವಶಾಂತಿ, ವಿಶ್ವ ಕಲ್ಯಾಣಕ್ಕೆ ಮಠಗಳು ಪ್ರೇರಣೆಯಾಗಿವೆ. ಶ್ರೀಗಳ ನಿಸ್ವಾರ್ಥ ಧಾರ್ಮಿಕ, ಸಾಮಾಜಿಕ ಸೇವೆ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ.
ಥಾವರ್​ ಚಂದ್​ ಗೆಹ್ಲೋಟ್​
ರಾಜ್ಯಪಾಲರು