ಜಿಲ್ಲೆಯಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು
- ಶಿಶುಪಾಲನಾ ರಜೆ ಪಡೆದ ಸಿಇಒ ಬಿ.ವಿ.ಅಶ್ವಿಜಾ
- ಬರ ಸಂದರ್ಭದಲ್ಲಿ ಜಿಪಂ ನಿರ್ವಹಣೆಗೆ ಮೇಟಿ ಇಲ್ಲ
- ಜಿಲ್ಲಾಧಿಕಾರಿ ಶುಭಕಲ್ಯಾಣ್ಗೆ ಹೆಚ್ಚುವರಿ ಹೊಣೆ
- ಹೆಚ್ಚು ಸೇವಾವಧಿ ದಾಖಲೆ ಸನಿಹದಲ್ಲಿ ಕೆ.ವಿ.ಅಶೋಕ್
ತುಮಕೂರು: ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿಯಿದ್ದರೂ ಜಿಪಂ ಸಿಇಒ ಬಿ.ವಿ.ಅಶ್ವಿಜಾ ಒಂದು ತಿಂಗಳು ಶಿಶುಪಾಲನಾ ರಜೆಯ ಮೇಲೆ ತರಳಿರುವುದು ಜಿಪಂ ಆಡಳಿತಕ್ಕೆ ಗ್ರಹಣ ಬಡಿದಿದೆ. ಸಿಇಒ ಬಿ.ವಿ.ಅಶ್ವಿಜಾ ಜುಲೈ 27ರಿಂದ ಸುಧೀರ್ ರಜೆಯ ಮೇಲೆ ತೆರಳಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ಗೆ ಹೆಚ್ಚುವರಿ ಹೊಣೆ ವಹಿಸಿಕೊಂಡಿದ್ದಾರೆ.
10 ತಾಲೂಕು 11 ವಿಧಾನಕ್ಷೇತ್ರ ಒಳಗೊಂಡಿರುವ ತುಮಕೂರು ಭೌಗೋಳಿಕವಾಗಿಯೂ ರಾಜ್ಯದ ಎರಡನೇ ದೊಡ್ಡ ಜಿಲ್ಲೆಯಾಗಿದ್ದು ಈಗಾಗಲೇ ಜನಪ್ರತಿನಿಧಿಗಳಿಲ್ಲದೆ ಸೊರಗಿರುವ 330 ಗ್ರಾಪಂಗಳಲ್ಲಿಯೂ ಜನರ ಸಮಸ್ಯೆಗಳನ್ನು ಆಲಿಸಲು ಮೇಟಿಯೇ ಇಲ್ಲದಂತಾಗಿದೆ. ಬರ ನಿರ್ವಹಣೆಯ ಸಂದರ್ಭದಲ್ಲಿ ಜಿಪಂ ಇಲಾಖೆಗೆ ಮುಖ್ಯಸ್ಥರೇ ಇಲ್ಲದಂತಾಗಿರುವುದು ಆಡಳಿತಕ್ಕೆ ಗ್ರಹಣ ಬಡಿಸಿದೆ.
ಜಿಲ್ಲಾಡಳಿತದಲ್ಲಿರುವ ತ್ರಿಮೂರ್ತಿ ಅಧಿಕಾರಿಗಳು ಸುಧೀರ್ಘ ಕಾಲದಿಂದಲೂ ಜಿಲ್ಲೆಯಲ್ಲಿ ಉಳಿಸಿಕೊಂಡಿರುವ ಔಚಿತ್ಯವನ್ನು ಜಿಲ್ಲೆಯ ಜನರು ಪ್ರಶ್ನಿಸಲಾರಂಭಿಸುವ ನಡುವೆಯೇ ಜಿಪಂ ಸಿಇಒ ರಜೆಯ ಮೇಲೆ ತೆರಳಿರುವುದು ಹಾಗೂ ಜಿಲ್ಲಾಧಿಕಾರಿಗೆ ಹೆಚ್ಚುವರಿ ಹೊಣೆ ಹೊರಿಸಿರುವುದು ಜಿಲ್ಲೆಯ ಆಡಳಿತ ಹಳಿ ತಪ್ಪುವಂತಾಗಿದೆ
ಭೌಗೋಳಿಕವಾಗಿಯೂ ದೊಡ್ಡದು ಎನ್ನಿಸಿರುವ ತುಮಕೂರು ಜಿಲ್ಲೆಯಲ್ಲಿ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಹೊಣೆಯನ್ನು ಒಬ್ಬ ಅಧಿಕಾರಿಗೆ ವಹಿಸಿರುವುದು ಸಾರ್ವಜನಿಕ ಕೆಲಸ, ಕಾರ್ಯಗಳಿಗೆ ದೊಡ್ಡ ಹಿನ್ನೆಡೆ ತಂದೊಡ್ಡಿದೆ.
ತುಮಕೂರು ಮಹಾನಗರ ಪಾಲಿಕೆಯಲ್ಲಿ ಆಯುಕ್ತರಾಗಿ ಜಿಲ್ಲೆಗೆ ಆಗಮಿಸಿದ್ದ ಐಎಎಸ್ ಅಧಿಕಾರಿ ಬಿ.ವಿ.ಅಶ್ವಿಜಾ ಮೂರು ತಿಂಗಳು ಖಾಲಿ ಉಳಿದಿದ್ದ ಜಿಪಂ ಸಿಇಒ ಹುದ್ದೆಗೆ ವರ್ಗಾವಣೆಗೊಂಡಿದ್ದರು. ತುಮಕೂರು ಜಿಲ್ಲೆಯಲ್ಲಿ ಅಭಿವೃದ್ಧಿ ಹಾಗೂ ನಿತ್ಯದ ಆಡಳಿತದ ಮೇಲೆ ನಿಗಾವಹಿಸಬೇಕಾದ ಪ್ರಮುಖ ಹುದ್ದೆಗಳೇ ತಿಂಗಳುಗಟ್ಟಲೆ ಖಾಲಿ ಇರುವ ಪರಿಸ್ಥಿತಿ ನಿಮಾರ್ಣವಾಗಿರುವುದು ಕೃಷಿ ವಲಯದ ಜತೆಗೆ ಜಿಲ್ಲೆಯಲ್ಲಿ ಆಡಳಿತಕ್ಕೂ "ಬರ' ಬಡಿದಂತಾಗಿದೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಮುಖ ಸಂಸ್ಥೆಯಾಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯನ್ನು ತಿಂಗಳುಗಟ್ಟಲೆ ಖಾಲಿ ಬಿಟ್ಟು ಜಿಲ್ಲಾಧಿಕಾರಿಗೆ ಪದೇಪದೇ ಹೆಚ್ಚುವರಿ ಹೊಣೆಗಾರಿಕೆ ನೀಡುವುದರಿಂದ ಆಡಳಿತದ ವೇಗ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವಂತೆ ಮಾಡಿದೆ.
ಒಂದೇ ಹುದ್ದೆಯಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಕಾಲ ಸೇವೆ ಸಲ್ಲಿರುವ ಹೆಗ್ಗಳಿಕೆ ಐಪಿಎಸ್ ಅಧಿಕಾರಿ ಪಿ.ಎಸ್.ಹರ್ಷ ಅವರ ಹೆಸರಿನಲ್ಲಿದೆ. ಇದೇ ಸೆಪ್ಟೆಂಬರ್ಗೆ ಜಿಲ್ಲೆಗೆ ಬಂದು ಮೂರು
ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಕೂಡ ಜಿಲ್ಲೆಯಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಅಧಿಕಾರಿ ಎಂಬ ಇತಿಹಾಸ ನಿರ್ಮಿಸಲಿದ್ದಾರೆ.
ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಧೀರ್ಘಕಾಲದಿಂದ ಜಿಲ್ಲೆಯಲ್ಲಿ ಉಳಿಸಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಿದೆ. ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಅಧಿಕಾರಿಗಳ ಸಮತೋಲನ ಕಾಪಾಡಿಕೊಳ್ಳಲು ಸರ್ಕಾರ ರೂಪಿಸಿಕೊಂಡಿರುವ ವರ್ಗಾವಣೆ ನೀತಿ ಹಾಗೂ ಸೇವಾ ಅವಧಿಗೆ ಸಂಬಂಧಿಸಿದ ನಿಯಮಾವಳಿ ಜಿಲ್ಲೆಯಲ್ಲಿ ಪಾಲನೆಯಾಗುತ್ತಿಲ್ಲ ಎಂಬ ಕೂಗಿದೆ.
ಜಿಲ್ಲಾಧಿಕಾರಿ ಹುದ್ದೆ ಅತ್ಯಂತ ಮಹತ್ವದ್ದಾದರೂ, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ತಮ್ಮ ತಮ್ಮ ಜವಾಬ್ದಾರಿಗಳನ್ನು ಸ್ವತಂತ್ರವಾಗಿ ನಿರ್ವಹಿಸುವ ವ್ಯವಸ್ಥೆ ಇರುವುದು ಆಡಳಿತದ ಮೂಲಭೂತ ಅಗತ್ಯವಾಗಿರುವಾಗ ಜಿಲ್ಲೆಯ ಪ್ರಮುಖ ಹುದ್ದೆಗಳನ್ನು ತಿಂಗಳುಗಟ್ಟಲೆ ಖಾಲಿ ಬಿಟ್ಟು ಬರಗಾಲದ ಸಂದರ್ಭದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ನೀಡುವುದು ಪರಿಣಾಮಕಾರಿ ಆಡಳಿತವೇ?
ಎಂಬುದನ್ನು ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ.
ರಾಜ್ಯ ಕಾರ್ಯದರ್ಶಿ, ಕೆಆರ್ಎಸ್ ಪಕ್ಷ