ತುಮಕೂರಿನ ಕೆ.ಆರ್.ಬಡಾವಣೆಯ ಶ್ರೀರಾಮಮಂದಿರ ಪ್ರದೇಶದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರದಂತೆ ಜಿಲ್ಲಾಡಳಿತ ಕ್ರಮವಹಿಸುವಂತೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದ ನಿಯೋಗ ಮನವಿ ಮಾಡಿತು. ಎಚ್.ಎಸ್.ರವಿಶಂಕರ್, ಟಿ.ಎಚ್.ಹನುಮಂತರಾಜು, ಟಿ.ಕೆ.ಧನುಷ್ ಇದ್ದರು.
- ಪ್ರಸ್ತಾವನೆ ಕೈಬಿಡಲು ಜಿಲ್ಲಾಡಳಿತಕ್ಕೆ ಆಗ್ರಹ
- ಶಾಸಕ ಜ್ಯೋತಿಗಣೇಶ್ ನೇತೃತ್ವದ ನಿಯೋಗ
- ಕಾನೂನು ಸುವ್ಯವಸ್ಥೆಗೆ ಭಂಗ ಸಾಧ್ಯತೆ
ತುಮಕೂರು: ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಸ್ವತ್ತಾದ ನಗರದ ಕೆ.ಆರ್.ಬಡಾವಣೆಯ ಶ್ರೀರಾಮ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಸರ್ಕಾರಿ ಶಾಲಾ ಜಾಗದಲ್ಲಿ ಅಲ್ಪಸಂಖ್ಯಾತರ ಹಾಸ್ಟೆಲ್ ನಿರ್ಮಾಣ ಪ್ರಸ್ತಾವನೆಯನ್ನು ತತ್ಕ್ಷಣವೇ ಕೈಬಿಡುವಂತೆ ಜಿಲ್ಲಾಡಳಿತವನ್ನು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದ ನಿಯೋಗವು ಆಗ್ರಹಿಸಿದೆ.
ಈ ವಿಷಯ ಅತ್ಯಂತ ಸೂಕ್ಷ$್ಮವಾಗಿದ್ದು ನಗರದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆಯಿದೆ. ಹಿಂದು ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿರುವುದರಿಂದ ಸಾರ್ವಜನಿಕ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಮಂಗಳವಾರ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿರನ್ನು ಭೇಟಿ ಮಾಡಿದ ನಿಯೋಗವು ಒತ್ತಾಯಿಸಿತು.
ಈ ವೇಳೆ ಮಾತನಾಡಿ ಶಾಸಕ ಜ್ಯೋತಿಗಣೇಶ್, ಹಿಂದು ಧಾರ್ಮಿಕ ಸೇವಾ ಚಟುವಟಿಕೆಗಳು ಈ ಸ್ಥಳದಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಶ್ರೀರಾಮ ನವಮಿಯನ್ನು ಕಳೆದ 59 ವರ್ಷಗಳಿಂದ ನಿರಂತರವಾಗಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ದೇವಸ್ಥಾನದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಧಾರ್ಮಿಕತೆಗೆ ಸಂಬಂಧಪಟ್ಟಂತೆ ಚಟುವಟಿಕೆಗಳು ಹಿಂದು ಸಮಾಜದವರು ನಡೆಸಿಕೊಂಡು ಬರುತ್ತಿದ್ದು ಇದಕ್ಕೆ ಹೊಂದಿಕೊಂಡಿರುವ ಸರ್ಕಾರಿ ಶಾಲಾ ಜಾಗದಲ್ಲಿ ಈಗ ಅಲ್ಪಸಂಖ್ಯಾತರ ಹಾಸ್ಟೆಲ್ ನಿರ್ಮಿಸುವ ಪ್ರಸ್ತಾವನೆ ಅಥವಾ ಚರ್ಚೆ ನಡೆಯುತ್ತಿರುವುದು ಸ್ಥಳಿಯ ನಾಗರಿಕರು, ಹಿಂದೂ ಭಕ್ತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.
ಮುಜರಾಯಿ ಇಲಾಖೆಗೆ ಸೇರಿದ ಶ್ರೀ ರಾಮ ಮಂದಿರದ ಜಾಗವು ಪಾಲಿಕೆಯ ಪಿಐಡಿ ಸಂಖ್ಯೆ 42551 ಹಾಗೂ 42558ಗಳು ಶ್ರೀ ರಾಮ ಮಂದಿರ ಕಾರ್ಯದರ್ಶಿಗಳ ಹೆಸರಿನಲ್ಲಿ ಖಾತೆ ಚಾಲ್ತಿಯಲ್ಲಿದೆ. ಇತ್ತೀಚಿನ ಕೆಲವು ವರ್ಷಗಳಿಂದ ದೇವಸ್ಥಾನ ಹಿಂಭಾಗದ ಸರ್ಕಾರಿ ಶಾಲೆಯ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಇಂತಹ ಸೂಕ್ಷ$್ಮ ಪ್ರದೇಶದಲ್ಲಿ ಯಾವುದೇ ವಿವಾದಾತ್ಮಕ ಅಥವಾ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವುದು ಮುಂದಿನ ದಿನಗಳಲ್ಲಿ ಅನಗತ್ಯ ಉದ್ವಿಗ್ನತೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಪರಿಸ್ಥಿತಿಯನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಶ್ರೀ ರಾಮ ಮಂದಿರಕ್ಕೆ ಸಂಬಂಧಿಸಿದ ಸಂಪೂರ್ಣ ಜಾಗದ ಅಧಿಕೃತ ಸರ್ವೇ, ಹದ್ದುಬಸ್ತು ಹಾಗೂ ಅಳತೆ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕು. ಮುಜರಾಯಿ ಇಲಾಖೆಯ ದಾಖಲೆಗಳು ಹಾಗೂ ರಾಜ್ಯ ಪತ್ರದಲ್ಲಿ ಉಲ್ಲೇಖಿತ ಜಾಗವನ್ನು ದೇವಾಲಯದ ಆಸ್ತಿಯಾಗಿ ಸಂರಕ್ಷಿಸುವ ಕ್ರಮ ವಹಿಸಬೇಕು. ಆ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಹಾಸ್ಟೆಲ್ ಸೇರಿದಂತೆ ಯಾವುದೇ ಹೊಸ ನಿಮಾರ್ಣ ಕಾರ್ಯಗಳ ಕುರಿತು ಪ್ರಸ್ತಾಪವಿದ್ದರೆ, ಅದನ್ನು ತಕ್ಷಣವೇ ಕೈಬಿಡಬೇಕು. ದೇವಾಲಯಕ್ಕೆ ಸಂಬಂಧಿಸಿದ ಜಾಗವನ್ನು ಹಿಂದೂ ದೇವತಾ ಕಾರ್ಯಗಳು, ಧಾರ್ಮಿಕ ಹಾಗೂ ಸಾಂಸತಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿ ಉಪಯೋಗಿಸಿಕೊಳ್ಳಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಚ್.ಹನುಮಂತರಾಜು, ಬಿಜೆಪಿ ನಗರಾಧ್ಯಕ್ಷ ಟಿ.ಕೆ.ಧನುಷ್ ನಿಯೋಗದಲ್ಲಿದ್ದರು.