ತುಮಕೂರಿನ ಶ್ರೀ ಶ್ರೀದೇವಿ ಚಾರಿಟಬಲ್​ ಟ್ರಸ್ಟ್​ ಹಾಗೂ ಡಾ.ಎಂ.ಆರ್​.ಹುಲಿನಾಯ್ಕರ್​ ಪ್ರತಿಷ್ಠಾನದ ವತಿಯಿಂದ ಲ್ಯಾಪ್ರೋಸ್ಕೋಪಿಕ್​ ಸರ್ಜನ್​ ಡಾ.ಸಿ.ಪಳನಿವೇಲು ಅವರಿಗೆ ಡಾ.ಎಂ.ಆರ್​.ಹುಲಿನಾಯ್ಕರ್​ ಮತ್ತು ಶ್ರೀಮತಿ ಶಾಂತಾದುರ್ಗಾದೇವಿ ಹುಲಿನಾಯ್ಕರ್​ "ಜೀವಮಾನ ಸಾಧನಾ ಪುರಸ್ಕಾರ' ಪ್ರದಾನ ಮಾಡಲಾಯಿತು. ಡಾ.ಆಚಾರ್ಯ ಎಂ.ನಾಗರಾಜ್​, ಬಸವರಾಜ ಪಾಟೀಲ್​, ಡಾ.ಈಶ್ವರ ಆರ್​ ಹೊಸಮನಿ, ಡಾ.ಎಂ. ರಮಣ್​ ಹುಲಿನಾಯ್ಕರ್​, ಡಾ.ಲಾವಣ್ಯ, ಡಾ.ನರೇಂದ್ರ ವಿಶ್ವನಾಥ್​ ಮತ್ತಿತರರು ಇದ್ದರು.  
ತುಮಕೂರು

ವೈದ್ಯ ಲೋಕದ ಧ್ರುವತಾರೆ ಡಾ.ಪಳನಿವೇಲು

ಪ್ರಮುಖ ಮುಖ್ಯಾಂಶಗಳು

  • ಡಾ.ಎಂ.ಆರ್​.ಹುಲಿನಾಯ್ಕರ್​ ಜೀವಮಾನ ಸಾಧನಾ ಪುರಸ್ಕಾರ
  • ಲ್ಯಾಪ್ರೋಸ್ಕೋಪಿಕ್​ ತಜ್ಞ ಡಾ.ಸಿ.ಪಳನಿವೇಲುಗೆ ಪ್ರಶಸ್ತಿ
  • ಶ್ರೀದೇವಿ ಚಾರಿಟಬಲ್​ ಟ್ರಸ್ಟ್​
ತುಮಕೂರು: ಕೌಶಲ ಮತ್ತು ಸಮಯವನ್ನು ಸದ್ಭಳಕೆ ಮಾಡಿಕೊಂಡರೆ ಭಾರತವು ವಿಶ್ವದ ಮುಂಚೂಣಿ ರಾಷ್ಟ್ರವಾಗಲಿದೆ ಎಂದು ಲೆಪ್ರೊಸ್ಕೋಪಿಕ್​, ರೋಬೋಟಿಕ್​ ಶಸ್ತ್ರಚಿಕಿತ್ಸಾ ತಜ್ಞ ಡಾ.ಸಿ.ಪಳನಿವೇಲು ಹೇಳಿದರು.
ನಗರದ ಶ್ರೀದೇವಿ ಚಾರಿಟಬಲ್​ ಟ್ರಸ್ಟ್​ ಹಾಗೂ ಡಾ.ಎಂ.ಆರ್​.ಹುಲಿನಾಯ್ಕರ್​ ಪ್ರತಿಷ್ಠಾನದ ಸಹಯೋಗದಲ್ಲಿ ಶುಕ್ರವಾರ ಡಾ.ಎಂ.ಆರ್​.ಹುಲಿನಾಯ್ಕರ್​ ಮತ್ತು ಶ್ರೀಮತಿ ಶಾಂತಾದುರ್ಗಾದೇವಿ ಹುಲಿನಾಯ್ಕರ್​ "ಜೀವಮಾನ ಸಾಧನಾ ಪುರಸ್ಕಾರ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಭಾರತೀಯರು ಮೂಲತ ಕೌಶಲ ಪ್ರಜ್ಞೆಯ ಜನರು. ಸಮಯವೆಂಬುದು ಬಹು ಅಮೂಲ್ಯ, ಇದನ್ನು ಅರ್ಥ ಮಾಡಿಕೊಂಡು ಮುನ್ನೆಡೆದರೆ ಸಾಧನೆಯ ಹಲವಾರು ಮಜಲುಗಳನ್ನು ದಾಟಬಹುದು. ಇಲ್ಲದಿದ್ದರೆ ನಿಂತಲೇ ಇರಬೇಕಾಗುತ್ತದೆ ಎಂದರು.
ಬೇಡವಾದ ಕೆಲಸಕ್ಕೆ ಸಮಯ ಕಳೆಯುವುದರಿಂದ ಯಾವ ಸಾಧನೆ ಮಾಡಲಾಗುವುದಿಲ್ಲ. ಶೇ. 80ಕ್ಕು ಹೆಚ್ಚು ಜನ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿ ಸಮಯವನ್ನು ಪೋಲು ಮಾಡುತ್ತಿದ್ದಾರೆ. ಇದನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಂಡರೆ ಎತ್ತರಕ್ಕೆ ಹೋಗಬಹುದು ಹಾಗೂ ಸಾಧನೆ ಮಾಡಬಹುದು. ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಬಹುದು ಎಂಬುದಕ್ಕೆ ಸಾಧಕ, ಪ್ರೇರಣಾಶಕ್ತಿ ಡಾ.ಹುಲಿನಾಯ್ಕರ್​ ಅವರೇ ಪ್ರತ್ಯಕ್ಷ ಸಾಕ್ಷಿ ಎಂದರು.
ಭಾರತೀಯ ಕೌಟುಂಬಿಕ ಪದ್ಧತಿ ಜಗತ್ತಿಗೆ ಮಾದರಿ. ಜಪಾನ್​ ಜರ್ಮನಿಯಂತಹ ಮುಂದುವರೆದ ರಾಷ್ಟ್ರಗಳು ನಮ್ಮ ಕೌಟುಂಬಿಕ ಪದ್ಧತಿಯನ್ನು ಅನುಸರಿಸುತ್ತಿದ್ದು ಭಾರತದ ಕೌಟುಂಬಿಕ ಮತ್ತು ಧಾರ್ಮಿಕ ಮೌಲ್ಯದ ಶಕ್ತಿ ಎಷ್ಟು ಎಂಬುದಕ್ಕೆ ನಿದರ್ಶವೆನಿಸಿದೆ. ಇಂಗ್ಲೀಷ್​ ಸಂಪರ್ಕ ಭಾಷೆ. ದೊಡ್ಡ-ದೊಡ್ಡ ವೇದಿಕೆಯಲ್ಲಿ ಇಂಗ್ಲೀಷ್​ ಮಾತನಾಡಿದರೆ ಗೌರವ ಸಿಗುತ್ತದೆ ಎಂಬ ಭಾವನೆ ಸಲ್ಲದು ಬದಲಾಗಿ ಮಾತೃ ಭಾಷೆಯನ್ನು ಪ್ರೀತಿಸಿ, ಅದು ನಿಮ್ಮ ವ್ಯಕ್ತಿತ್ವದ ಶೋಭೆ ಹೆಚ್ಚಿಸುತ್ತದೆ ಎಂದು ಹೇಳಿದರು.
ಡಾ.ಸಿ.ಪಳನಿವೇಲು ಅವರ ಸಾಧನೆಯಿಂದಾಗಿ ಕೊಯಮತ್ತೂರು ಜಗತ್ತಿನ ಶಸ್ತ್ರಚಿಕಿತ್ಸೆಯ ರಾಜಧಾನಿಯನ್ನಾಗಿ ಮಾಡಿದ್ದಾರೆ. ಭಾರತದ ಇತರೆ ನಗರಗಳಿಗೆ ಅತ್ಯಾಧುನಿಕ ಶಸ್ತ್ರಚಿಕಿತ್ಸೆಗಳ ಸೇವೆ ಕಣ್ಣು ತೆರೆಯುವ 20 ವರ್ಷಗಳ ಮುಂಚೆಯೇ ಚನ್ನೆ$ನಲ್ಲಿ ಲ್ಯಾಪ್ರೋಸ್ಕೋಪಿಕ್​ ಶಸ್ತ್ರಚಿಕಿತ್ಸೆಗಳು ದೊರೆಯುತ್ತಿದ್ದವೂ ಎಂಬುದಕ್ಕೆ ಮೂಲ ಕಾರಣ ಡಾ.ಪಳನಿವೇಲುಎಂದು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆ ನಿರ್ದೇಶಕ ಡಾ.ಈಶ್ವರ ಆರ್​ ಹೊಸಮನಿ ಹೇಳಿದರು.
ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾ ಪರಿಷತ್​ ಅಧ್ಯಕ್ಷ ಬಸವರಾಜ ಪಾಟೀಲ್​ ಮಾತನಾಡಿ, ಪ್ರಪಂಚದಲ್ಲಿಯೇ ಖ್ಯಾತ ವೈದ್ಯ ಡಾ.ಪಳನಿವೇಲು ಅವರ ಆತ್ಮಕಥೆ ಹಿಂದಿ, ಒರಿಯಾ, ಕನ್ನಡ ಹೀಗೆ ಹಲವು ಭಾಷೆಗಳಿಗೆ ತರ್ಜುಮೆಯಾಗಿದೆ.ಲ್ಯಾಪ್ರೋಸ್ಕೋಪಿ ಚಿಕಿತ್ಸೆಯಲ್ಲಿ ಅವರ ಸಾಧನೆ ಲೋಕವೇ ಮೆಚ್ಚುವಂತಹದ್ದು. ಇಂತಹ ವ್ಯಕ್ತಿಯನ್ನು ಗುರುತಿಸಿ, ಶ್ರೀದೇವಿ ಶಿಕ್ಷಣ ಸಂಸ್ಥೆ ಪ್ರಶಸ್ತಿ ನೀಡಿ ಗೌರವ ಹೆಚ್ಚಿಸಿಕೊಂಡಿದೆ ಎಂದರು.
ವೈದ್ಯ ಲೋಕದ ಧ್ರುವತಾರೆ: ವೈದ್ಯಕಿಯ ಜಗತ್ತಿನ ಧ್ರುವತಾರೆ ಎನಿಸಿಕೊಂಡ ಡಾ.ಸಿ.ಪಳನಿವೇಲು ಅವರಿಗೆ ಪ್ರಶಸ್ತಿ ನೀಡುವ ಮೂಲಕ ಶ್ರೀದೇವಿ ಸಂಸ್ಥೆ ಗೌರವ-ಘನತೆ ಹೆಚ್ಚಾಗಿದೆ. ಈ ಸಂಸ್ಥೆಯನ್ನು ಪ್ರತಿಭಾವಂತರ ತಾಣವನ್ನಾಗಿಸುವಲ್ಲಿ ಎಲ್ಲರೂ ಪರಿಶ್ರಮವಿದೆ ಹೀಗಾಗಿ ಶ್ರೀದೇವಿ ಶಿಕ್ಷಣ ಸಂಸ್ಥೆ ಒಂದು ಕುಟುಂಬದ, ಒಬ್ಬ ವ್ಯಕ್ತಿ ಆಸ್ತಿಯಲ್ಲ ಸಮಾಜದ ಆಸ್ತಿ ಎಂದು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಎಂ.ಆರ್​ ಹುಲಿನಾಯ್ಕರ್​ ಹೇಳಿದರು.
ಸುವರ್ಣಮುಖಿ ಸಂಸತಿಧಾಮದ ಸಂಸ್ಥಾಪಕ, ಗ್ಯಾಸ್ಟ್ರೋಎಂಟರಲಾಜಿಸ್ಟ್​ ಡಾ.ಆಚಾರ್ಯ ಎಂ. ನಾಗರಾಜ್​ ಅಧ್ಯಕ್ಷತೆವಹಿಸಿದ್ದರು. ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಎಂ. ರಮಣ್​ ಹುಲಿನಾಯ್ಕರ್​ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀದೇವಿ ಇಂಜಿನೀಯರಿಂಗ್​ ಕಾಲೇಜಿನ ಪ್ರಾಂಶುಪಾಲ ಡಾ. ನರೇಂದ್ರ ವಿಶ್ವನಾಥ್​ ಭಿನ್ನವತ್ತಳೆ ವಾಚಿಸಿದರು. ಶ್ರೀದೇವಿ ಚಾರಿಟಬಲ್​ ಟ್ರಸ್ಟ್​ನ ಟ್ರಸ್ಟಿ ಹಾಗೂ ನೇತ್ರತಜ್ಞೆ ಡಾ.ಲಾವಣ್ಯ ರಮಣ್​ ಉಪಸ್ಥಿತರಿದ್ದರು.
ಸುಮಾರು 18 ಸಾವಿರಕ್ಕು ಹೆಚ್ಚು ಲ್ಯಾಪ್ರೋಸ್ಕೋಪಿಕ್​ ಮತ್ತು ರೋಬೋಟಿಕ್​ ಸರ್ಜರಿ ಮಾಡಿರುವುದರಿಂದ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸನ್ಮಾನ ಪ್ರಶಸ್ತಿ ದೊರಕಿದೆ. ಅದೆಲ್ಲಕ್ಕಿಂತಲೂ ಶ್ರೀದೇವಿ ಸಂಸ್ಥೆಯ ಸಂಸ್ಥಾಪಕ ಡಾ. ಹುಲಿನಾಯ್ಕರ್​ ಪ್ರತಿಷ್ಠಾನ ವತಿಯಿಂದ ನೀಡಿರುವ ಈ ಪ್ರಶಸ್ತಿ ವಿಶೇಷವೆನಿಸಿದ್ದು ಕರ್ತವ್ಯ ಪ್ರಜ್ಞೆಯನ್ನು ಹೆಚ್ಚಿಸಿದೆ.
ಡಾ.ಪಳನಿವೇಲು
ಲ್ಯಾಪ್ರೋಸ್ಕೋಪಿಕ್​ ಸರ್ಜನ್​
ವೈದ್ಯೋ ನಾರಾಯಣೋ ಹರಿ ಎಂದರೆ ವೈದ್ಯರು ನಾರಾಯಣನ ಸ್ವರೂಪ ಎಂದಲ್ಲ.ವೈದ್ಯರಿಗೆ ರೋಗಿ ನಾರಾಯಣನ ಸ್ವರೂಪ. ಹಾಗೆ ತಿಳಿದರೆ ಮಾತ್ರ ಒಳ್ಳೆಯ ಸೇವೆ ನೀಡಲು ಸಾಧ್ಯ. ಸಮಾಜ ಸೇವೆಯೇ ವ್ಯೆದ್ಯರ ಪರಮ ಗುರಿ ಎಂಬುದಕ್ಕೆ ಡಾ. ಪಳನಿವೇಲು, ಡಾ.ಎಂ ಆರ್​ ಹುಲಿನಾಯ್ಕರ್​ ಬದುಕು ಸಾಕ್ಷಿಯಾಗಿದೆ. ಅನುಕರಣೀಯವಾಗಿದೆ.
ಡಾ.ಆಚಾರ್ಯ ಎಂ.ನಾಗರಾಜ್​
ಗ್ಯಾಸ್ಟ್ರೊಎಂಟರಲಾಜಿಸ್ಟ್​