ತುಮಕೂರಿನಲ್ಲಿ ಡಾ.ಎಂ.ಆರ್​.ಹುಲಿನಾಯ್ಕರ್​ ಶ್ರೀಮತಿ ಶಾಂತಾದುರ್ಗಾದೇವಿ ಹುಲಿನಾಯ್ಕರ್​ ಜೀವಮಾನ ಸಾಧನಾ ಪುರಸ್ಕಾರ ಕುರಿತು ಸುದ್ದಿಗೋಷ್ಠಿಯಲ್ಲಿ ಡಾ.ರಮಣ್​ ಎಂ. ಹುಲಿನಾಯ್ಕರ್​, ಡಾ.ಎಂ.ಆರ್​.ಹುಲಿನಾಯ್ಕರ್​, ಡಾ.ಲಾವಣ್ಯ, ಡಾ.ನರೇಂದ್ರ ವಿಶ್ವನಾಥ್​ ಇದ್ದರು.  
ತುಮಕೂರು

ಲ್ಯಾಪ್ರೋಸ್ಕೋಪಿಕ್​ ಸರ್ಜನ್​ ಡಾ.ಸಿ.ಪಳನಿವೇಲುಗೆ ಹುಲಿನಾಯ್ಕರ್​ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • ಮಾ.13 ರಂದು ಪ್ರಶಸ್ತಿ ಪ್ರದಾನ
  • ಮಾಜಿ ಸಿಎಂ ಯಡಿಯೂರಪ್ಪ, ಜಿ.ಪರಮೇಶ್ವರ್​ ಭಾಗಿ
  • ಡಾ.ರಮಣ್​ ಎಂ.ಹುಲಿನಾಯ್ಕರ್​ ಸುದ್ದಿಗೋಷ್ಠಿ
ತುಮಕೂರು: ವೈದ್ಯಕಿಯ ಕ್ಷೇತ್ರದಲ್ಲಿ ಅಸಾಧಾರಣಾ ಸಾಧನೆಗೈದ ವಿಶ್ವ ಪ್ರಸಿದ್ಧ ಲ್ಯಾಪ್ರೋಸ್ಕೋಪಿಕ್​ ಸರ್ಜನ್​ ಹಾಗೂ ರೋಬೋಟಿಕ್​ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಸಿ.ಪಳನಿವೇಲು ಅವರು ಡಾ.ಎಂ.ಆರ್​.ಹುಲಿನಾಯ್ಕರ್​, ಶ್ರೀಮತಿ ಶಾಂತಾದುರ್ಗಾದೇವಿ ಹುಲಿನಾಯ್ಕರ್​ ಜೀವಮಾನ ಸಾಧನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶ್ರೀದೇವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ಆದ ಶ್ರೀದೇವಿ ಚಾರಿಟಬಲ್​ ಟ್ರಸ್ಟ್​ ಅಧ್ಯಕ್ಷ ಡಾ.ಎಂ.ಆರ್​.ಹುಲಿನಾಯ್ಕರ್​ ಹೆಸರಲ್ಲಿ ಸ್ಥಾಪಿಸಿರುವ ರಾಷ್ಟ್ರಮಟ್ಟದ ಡಾ.ಎಂ.ಆರ್​. ಹುಲಿನಾಯ್ಕರ್​ ಮತ್ತು ಶಾಂತದುರ್ಗಾ ದೇವಿ ಹುಲಿನಾಯ್ಕರ್​ ಜೀವಮಾನ ಸಾಧನ ಪುರಸ್ಕಾರ ಇದಾಗಿದ್ದು ಮಾ.13 ರಂದು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಡಾ.ಎಂ.ಆರ್​.ಹುಲಿನಾಯ್ಕರ್​ ಜನ್ಮದಿನವಾದ ಜನವರಿ 16 ರಂದು ಪ್ರತಿವರ್ಷ "ಪ್ರೇರಣಾದಿನ'ವನ್ನಾಗಿ ಆಚರಿಸಲಾಗುವುದು ಎಂದು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ರಮಣ್​ ಎಂ. ಹುಲಿನಾಯ್ಕರ್​ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿ ಪ್ರತಿಷ್ಠಿತ ಪ್ರಶಸ್ತಿಗೆ ಲ್ಯಾಪ್ರೋಸ್ಕೋಪಿಕ್​ ಸರ್ಜನ್​ ಡಾ.ಪಳನಿವೇಲುರನ್ನು ಆಯ್ಕೆ ಮಾಡಲಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಅನೇಕ ವೈದ್ಯಕಿಯ ಕೃತಿಗಳನ್ನು ಹೊರ ತಂದಿದ್ದು, ಹಲವು ತಾಂತ್ರಿಕ ಆವಿಷ್ಕಾರಗಳಿಗೂ ಕಾರಣರಾಗಿದ್ದಾರೆ. ಅವರ ಸಾಧನೆ ಗುರುತಿಸಿ ಪುರಸ್ಕಾರ ನೀಡಲಾಗುತ್ತಿದ್ದು ಈ ಪ್ರಶಸ್ತಿ ಮೊತ್ತ ಒಂದೂವರೆ ಲಕ್ಷ ರೂಪಾಯಿ ಹಾಗೂ ಭಿನ್ನವತ್ತಳೆ ಒಳಗೊಂಡಿರುತ್ತದೆ ಎಂದರು.
13 ರಂದು ಪ್ರಶಸ್ತಿ ಪ್ರದಾನ: ಮಾ.13ರಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಉದ್ಘಾಟಿಸಲಿದ್ದು, ಸುವರ್ಣಮುಖಿ ಸಂಸತಿ ಧಾಮದ ಅಧ್ಯಕ್ಷ ಡಾ.ಆಚಾರ್ಯ ಎಂ.ನಾಗರಾಜ್​ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ಪ್ರಶಸ್ತಿ ಪ್ರದಾನ ಮಾಡುವರು. ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯ ನಿರ್ದೇಶಕ ಡಾ.ಈಶ್ವರ್​ ಅರ್​.ಹೊಸಮನಿ, ರಾಷ್ಟ್ರೀಯ ಸ್ವಾಭಿಮಾನ ಪರಿಷತ್ತಿನ ಅಧ್ಯಕ್ಷ ಬಸವರಾಜ ಪಾಟೀಲ್​ ಉಪಸ್ಥಿತರಿರುವರು.
ಕ್ಯಾನ್ಸರ್​ ತಜ್ಞ ಡಾ.ಪಳನಿವೇಲು
ತಮಿಳುನಾಡಿನ ಕೂಲಿ ಕಾರ್ಮಿಕ ಕುಟುಂಬದಲ್ಲಿ ಜನಿಸಿದ ಡಾ. ಪಳನಿವೇಲು ಕೊಯಮತ್ತೂರಿನ ಜಿಇಎಂ ಆಸ್ಪತ್ರೆಯ ಸಂಸ್ಥಾಪಕರಾಗಿ, ವಿಶ್ವದ ಎಲ್ಲ ಕಡೆ ಲ್ಯಾಪ್ರೋಸ್ಕೋಪಿಕ್​ ಶಸ್ತ್ರಚಿಕಿತ್ಸೆ ಬಳಕೆಗೆ ಮೂಲ ಕಾರಣಕರ್ತರಾಗಿದ್ದಾರೆ. ಇಂಗ್ಲೆಂಡಿನ ಪ್ರತಿಷ್ಠಿತ ರಾಯಲ್​ ಕಾಲೇಜಿನ ಫೆಲೋಷಿಪ್​ ಪಡೆದು ವೈದ್ಯಕಿಯ ಕ್ಷೇತ್ರದ ಅಪ್ರತಿಮ ಸಾಧನೆಗಾಗಿ ಕೇಂದ್ರ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಡಾ.ಬಿ.ಸಿ.ರಾಯ್​ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿರುವ ಪಳನಿವೇಲು ಲ್ಯಾಪ್ರೊಸ್ಕೋಪಿಕ್​ ಮತ್ತು ರೋಬೋಟಿಕ್​ ಶಸ್ತ್ರಚಿಕಿತ್ಸೆಯಲ್ಲಿ ಪ್ರಪಂಚದಲ್ಲಿಯೇ ಸಿದ್ದಹಸ್ತರೆನಿಸಿಕೊಂಡಿದ್ದಾರೆ.