ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಸಿದ್ದರಾಮಯ್ಯ
- ಸಿಎಂ ಸ್ಥಾನಕ್ಕೆ ಕಡೆಗಣಿಸಿದ್ದಕ್ಕೆ ಪರಮ್ ಗರಂ
- ಲಾಬಿ ತೀವ್ರಗೊಳಿಸಿರುವ ಕೆ.ಷಡಕ್ಷರಿ, ಟಿಬಿಜೆ
- ಡಿಕೆ ಸಂಪುಟ ಸೇರಲಾರೆ ಎಂದಿದ್ದ ಕೆಎನ್ಆರ್
- ಗುಬ್ಬಿ ಶ್ರೀನಿವಾಸ್ಗೆ ಕೂಡಿಬಂದ ಅದೃಷ್ಟ
ತುಮಕೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಸನ್ನಿಹಿತವಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ರಾಜಕೀಯ ಅಧಿಕಾರ ಹಂಚಿಕೆಯ ಬಗ್ಗೆ ತರಹೇವಾರಿ ಚರ್ಚೆ ಆರಂಭವಾಗಿದೆ. ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಡಾ.ಜಿ.ಪರಮೇಶ್ವರ ಗೃಹ ಸಚಿವರಾಗಿದ್ದು ಸಿಎಂ ರಾಜೀನಾಮೆ ಅಂಗೀಕರಣವಾದ ಕೂಡಲೇ ಸಚಿವರ ಅಧಿಕಾರ ಕೂಡ ಇಲ್ಲವಾಗಲಿದೆ. ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಕೂಡ ಹಿಂದೆಯೇ ಸಚಿವ ಸ್ಥಾನ ಕಳೆದುಕೊಂಡಿದ್ದರು.
ನೂತನ ಸಿಎಂ ಆಯ್ಕೆಯಾದ ನಂತರ ರಚನೆಯಾಗಲಿರುವ ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನ ಎಂಬ ಕುತೂಹಲವಿದೆ, ಜಿಲ್ಲೆಯಲ್ಲಿ ಏಳು ಶಾಸಕರಿದ್ದು ಎಲ್ಲರೂ ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಯಾರೇ ಸಿಎಂ ಆದರೂ ಜಿಲ್ಲೆಯಲ್ಲಿ ಹಿರಿಯರಾದ ಡಾ.ಜಿ.ಪರಮೇಶ್ವರಗೆ ಬಯಸಿದ ಖಾತೆಯೊಂದಿಗೆ ನಿರಾಯಾಸವಾಗಿ ಸಚಿವ ಸ್ಥಾನ ಒಲಿದು ಬರಲಿದೆ. ಸಿಎಂ ಸ್ಥಾನಕ್ಕೆ ಕಡೆಗಣಿಸಿರುವ ಹಿನ್ನೆಲೆಯಲ್ಲಿ ಗರಂ ಆಗಿರುವ ಪರಮೇಶ್ವರ ಸಚಿವ ಸಂಪುಟಕ್ಕೆ ಸೇರದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಸಿಎಂ ಆದರೆ ಅವರ ಸಚಿವ ಸಂಪುಟದಲ್ಲಿ ನಾನು ಸಚಿವನಾಗುವುದಿಲ್ಲ ಎಂದು ಹಿಂದೆಯೇ ಘೋಷಿಸಿಕೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ನಡೆ ಕುತೂಹಲ ಮೂಡಿಸಿದೆ. ಕೊನೆಯ ಕ್ಷಣದಲ್ಲಿ ಅೆಕ್ಸ್ ಬ್ಯಾಂಕ್ಗೆ ಅವರು ತೃಪ್ತರಾಗಿವ ಸಾಧ್ಯತೆ ಹೆಚ್ಚಿದೆ. ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಮತ್ತೊಮ್ಮೆ ಸಚಿವರಾಗುವ ಕನಸು ಕಟ್ಟಿಕೊಂಡಿದ್ದಾರೆ.
ನಿರೀಕ್ಷೆಯಂತೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ಅವರ ಸಮಕಾಲೀನರಾದ ಡಾ.ಜಿ.ಪರಮೇಶ್ವರ್, ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್.ರಾಜಣ್ಣ ಡಿಕೆಶಿ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಲು ಹಿಂದೇಟು ಹಾಕಿದರೆ ಜಿಲ್ಲೆಯಲ್ಲಿ ದಶಕಗಳಿಂದಲೂ ಅಧಿಕಾರ ಹಿಡಿದಿಟ್ಟುಕೊಂಡಿರುವ ಒಂದು ತಲೆಮಾರಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿದೆ.
ಪರಮ್, ವಾಸಣ್ಣ ಸಚಿವರಾಗೋದು ಸುಲಭ!?
ಎಲ್ಲರೂ ನಿರೀಸಿದಂತೆ ಡಿ.ಕೆ.ಶಿವಕುಮಾರ್ ರಾಜ್ಯದ ಸಿಎಂ ಆದರೆ ಜಿಲ್ಲೆಯಿಂದ ಇಬ್ಬರು ಸಚಿವರಾಗೋದು ಖಚಿತ ಎನ್ನಿಸಿದೆ, ಸಿಎಂ ಸ್ಥಾನದ ರೇಸ್ನಲ್ಲಿರುವ ಡಾ.ಜಿ.ಪರಮೇಶ್ವರ ಹೈಕಮಾಂಡ್ ಜತೆಯೂ ನಿಕಟವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ನಿರಾಯಾಸವಾಗಿ ಪ್ರಮುಖ ಖಾತೆಯ ಜತೆ ಸಚಿವ ಸ್ಥಾನ ಒಲಿದುಬರಲಿದೆ.
ಡಿ.ಕೆ.ಶಿವಕುಮಾರ್ ಅವರ ಗುಂಪಿನಲ್ಲಿರುವ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಒಕ್ಕಲಿಗ ಕೋಟಾದಲ್ಲಿ ಜಿಲ್ಲೆಯಿಂದ ಸಚಿವರಾಗುವ ಸಾಧ್ಯತೆ ದಟ್ಟವಾಗಿದೆ. ಕುಂಚಿಟಿಗ ಕೋಟಾದಲ್ಲಿ ಕಳೆದ ಮೂರು ವರ್ಷದಿಂದಲೂ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಲೇ ಟಿ.ಬಿ.ಜಯಚಂದ್ರ ಪ್ರಯತ್ನ ಮುಂದುವರಿಸಬಹುದು.
ಲಿಂಗಾಯತ ಸಮುದಾಯದ ಕೋಟಾದಲ್ಲಿ ಸಚಿವ ಸ್ಥಾನಕ್ಕಾಗಿ ತಿಪಟೂರಿನ ಕೆ.ಷಡಕ್ಷರಿ ಕೂಡ ಪ್ರಭಲವಾದ ಲಾಬಿ ಆರಂಭಿಸಿದ್ದು ಅವರಿಗೆ ವಯಸ್ಸು ಅಡ್ಡಿಯಾಗಿದೆ. ಹಿರಿತನವೇ ಮಾನದಂಡವಾಗಿ ಪರಿಗಣಿಸಿ ಸಚಿವ ಸ್ಥಾನ ನೀಡಲೇಬೇಕು ಎಂದು ಹಕ್ಕು ಮಂಡಿಸುವುದು ಫಿಕ್ಸ್ ಆಗಿದೆ. ತುಮುಲ್ ಅಧ್ಯಕ್ಷರಾಗಿರುವ ಪಾವಗಡ ಶಾಸಕ ಎಚ್.ವಿ.ವೆಂಕಟೇಶ್ ಹಾಗೂ ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಹೊಸ ಸರ್ಕಾರಕ್ಕೆ ಸಚಿವರಾಗುವ ಸಾಧ್ಯತೆ ಕಡಿಮೆಯಿದ್ದರೂ ಪ್ರಭಾವಿಗಳಾಗಿರಲಿದ್ದಾರೆ.
ಕಾರ್ಯಕರ್ತರಲ್ಲಿಯೂ ಮೂಡಿಸಿದ ಭರವಸೆ:
ಪಕ್ಷ ಅಧಿಕಾರದಲ್ಲಿರುವ ಕಳೆದ ಮೂರು ವರ್ಷಗಳಿಂದಲೂ ಅಧಿಕಾರ ಸಿಕ್ಕಿಲ್ಲ ಎಂಬ ನೋವು ಕಾರ್ಯಕರ್ತರ ವಲಯದಲ್ಲಿದೆ. ಜೂ.19ರಂದು ತುಮಕೂರಿನಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶದಲ್ಲಿಯೂ ಆಕ್ರೋಶ ಸ್ಫೋಟಗೊಂಡಿತ್ತು. ಈಗ ರಚನೆಯಾಗಲಿರುವ ಹೊಸ ಸರ್ಕಾರದಲ್ಲಿಯಾದರೂ ಕಾರ್ಯಕರ್ತರಿಗೆ ಅಧಿಕಾರ ಸಿಗಬಹುದು ಎಂಬ ವಿಶ್ವಾಸ ಕಾಂಗ್ರೆಸ್ ಪಾಳಯದಲ್ಲಿದೆ.
ನಗರಾಭಿವೃದ್ಧಿ ಪ್ರಧಿಕಾರಗಳು, ಎಪಿಎಂಸಿ, ವಿವಿ ಸಿಂಡಿಕೇಟ್, ಗ್ಯಾರಂಟಿ ಸಮಿತಿಗಳು ಸೇರಿದಂತೆ ಸಾಕಷ್ಟು ಕಡೆ ನಾಮನಿರ್ದೇಶನಕ್ಕೆ ಅವಕಾಶವಿದ್ದು ಪಕ್ಷದಲ್ಲಿ ಪದಾಧಿಕಾರಿಗಳಾಗಿದ್ದವರಲ್ಲಿ ಹೊಸ ಭರವಸೆ ಮೂಡಿಸಿದೆ. ತಾಪಂ, ಜಿಪಂ, ನಗರ ಪಾಲಿಕೆ ಚುನಾವಣೆಗಳೂ ಕೂಡ ಮುಂದಿನ ದಿನಗಳಲ್ಲಿ ನಡೆಯಲಿದ್ದು ಬಿಜೆಪಿ&ಜೆಡಿಎಸ್ ಮೈತ್ರಿಯ ಎದುರು ಯಶಸ್ವಿಯಾಗಲು ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಅನಿವಾರ್ಯತೆ ಕೈ ಪಾಳಯಕ್ಕಿದೆ.
ಸಿದ್ದರಾಮಯ್ಯ ಪರ ಕುರುಬ ಮುಖಂಡರ ಪ್ರತಿಭಟನೆ:
ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು ಎಂದು ಆಗ್ರಹಿಸಿ ಕುರುಬ ಸಮುದಾಯದ ಮುಖಂಡರು ತುಮಕೂರಿನ ಬಿಜಿಸ್ ವೃತ್ತದಲ್ಲಿ
ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಹೈಕಮಾಂಡ್ ಯಾವ ಕಾರಣಕ್ಕಾಗಿ ರಾಜೀನಾಮೆ
ಪಡೆಯುತ್ತಿದ್ದಾರೆ, ಯಾವುದೇ ಕಾರಣವಿರಲಿ ನಿಮ್ಮೊಂದಿಗೆ ಸದಾ ನಾವು ನಿಲ್ಲುತ್ತೇವೆ ಎಂಬ ಬಿತ್ತಪತ್ರ ಹಿಡಿದು ಕೈ ಹೈಕಮಾಂಡ್ ನಿರ್ಧಾರದ ವಿರುದ್ಧ ಪ್ರತಿಭಟಿಸಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರನ್ನು ಏಕಾಏಕಿ ರಾಜೀನಾಮೆ ಕೇಳಿ ಅಪಮಾನ ಮಾಡಿದ್ದಾರೆ. ಇದು ಅಹಿಂದ ಸಮುದಾಯಕ್ಕೆ ತುಂಬಾ ನೋವಾಗಿದೆ. ದಯವಿಟ್ಟು ರಾಜೀನಾಮೆ ಕೊಡಬೇಡಿ, ಮುಂದೆ ಏನಾಗುತ್ತದೆ ನೋಡೋಣ. ಮುಂದೆ ನಾವು ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.