ಸಿಎಂ ಡಿ.ಕೆ.ಶಿವಕುಮಾರ್ ಪ್ರೀತಿಯ ಅಪ್ಪುಗೆಯಲ್ಲಿ ಪರಮೇಶ್ವರ್.
- ಡಾ. ಜಿ.ಪರಮೇಶ್ವರ ಉಪಮುಖ್ಯಮಂತ್ರಿ
- 8 ವರ್ಷ ದೀರ್ಘಕಾಲ ಪಕ್ಷದ ಸಾರಥ್ಯ
- ರಾಜೀವ್ ಗಾಂಧಿ ನೀಲಿಕಣ್ಣಿನ ಹುಡುಗ
ತುಮಕೂರು: ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, ಸಜ್ಜನ ರಾಜಕಾರಣಿ ಡಾ.ಜಿ.ಪರಮೇಶ್ವರ್ಗೆ ಮತ್ತೊಮ್ಮೆ ಉಪಮುಖ್ಯಮಂತ್ರಿ ಸ್ಥಾನ ಒಲಿದುಬಂದಿದೆ. ಮುಖ್ಯಮಂತ್ರಿ ಪಟ್ಟದ ಕನಸು ಕೈಗೂಡದಿದ್ದರೂ ಪಕ್ಷ ನಿಷ್ಠೆ ಪರಂಗೆ ಸರ್ಕಾರದಲ್ಲಿ ಉನ್ನತ ಸ್ಥಾನ ತಂದುಕೊಟ್ಟಿದೆ. ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ 14 ತಿಂಗಳು ಡಿಸಿಎಂ ಹುದ್ದೆ ನಿರ್ವಹಿಸಿದ್ದ ಪರಮೇಶ್ವರ್ 6 ಬಾರಿ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು.
ಆಸ್ಟ್ರೆಲಿಯಾದ ಅಡಿಲೇಡ್ ಕೃಷಿ ವಿವಿಯ ಪಿಎಚ್ಡಿ ಪದವೀಧರರಾದ ಡಾ.ಜಿ.ಪರಮೇಶ್ವರ್ ರಾಜಕೀಯ ಪ್ರವೇಶವೇ "ಆಕಸ್ಮಿಕ'. ಶಿಕ್ಷಣ ಭೀಷ್ಮ ದಿವಂಗತ ಡಾ.ಎಚ್.ಎಂ.ಗಂಗಾಧರಯ್ಯ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ವೈದ್ಯಕಿಯ ಕಾಲೇಜಿನ ಸಂಸ್ಥಾಪನ ದಿನದ ಕಾರ್ಯಕ್ರಮಕ್ಕೆ 1989ರಲ್ಲಿ ಆಗಮಿಸಿದ್ದ ಅಂದಿನ ಪ್ರಧಾನಿ ರಾಜೀವ್ಗಾಂಧಿ ಕಣ್ಣಿಗೆ ಬಿದ್ದಿದ್ದ ಪರಮೇಶ್ವರ್ರನ್ನು ರಾಜಕೀಯಕ್ಕೆ ಬರುವಂತೆ ಆಹ್ವಾನಿಸಿದ್ದರು. ರಾಜೀವ್ ನೀಲಿಗಣ್ಣಿನ ಹುಡಗನೆನಿಸಿದ್ದರು. ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕೆಂಬ ಕನಸು ಕಾಣುತ್ತಿದ್ದ ಯವಕ ರಾಜಕೀಯ ಕ್ಷೇತ್ರದಲ್ಲಿ "ಕೃಷಿ'ಗಿಳಿದರು.
1989ರಲ್ಲಿ ರಾಜಕೀಯ ಇನ್ನಿಂಗ್ಸ್: ದಿವಂಗತ ಪ್ರಧಾನಿ ರಾಜೀವ್ಗಾಂಧಿ ನೀಲಿಕಣ್ಣಿನ ಹುಡುಗ ಜಿ.ಪರಮೇಶ್ವರ್ 1989ರಲ್ಲಿ ಮಧುಗಿರಿ ಮೀಸಲು ಕ್ಷೇತ್ರದಿಂದ ಮೊದಲ ಬಾರಿ ಸ್ಪರ್ಧಿಸಿ ಶಕ್ತಿಸೌಧ ಪ್ರವೇಶಿಸಿದರು. ಆ ನಂತರ ಅವರು ರಾಜಕಾರಣದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ.
1999 ಹಾಗೂ 2004ರಲ್ಲಿ ಮಧುಗಿರಿಯಿಂದಲೇ ಮರು ಆಯ್ಕೆಯಾದ ಪರಮೇಶ್ವರ್ ಕ್ಷೇತ್ರ ಮರುವಿಂಗಡಣೆ ಬಳಿಕ 2008ರಲ್ಲಿ ಕೊರಟಗೆರೆ ಕ್ಷೇತ್ರದತ್ತ ಮುಖಮಾಡಿ ಮತ್ತೆ ವಿಧಾನಸಭೆ ಪ್ರವೇಶಿಸಿದರು. 2010ರಲ್ಲಿ ಪಕ್ಷದ ಸಾರಥ್ಯ ವಹಿಸಿದ ಪರಮೇಶ್ವರ್ 2013ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖಪಾತ್ರವಹಿಸಿದರಾದರೂ ಹಿತಶತೃಗಳಿಂದ ಸ್ವಕ್ಷೇತ್ರದಲ್ಲಿ ಸೋಲುಕಂಡರು. ಅಂದು ಪರಮೇಶ್ವರ್ ಸಿಎಂ ಹುದ್ದೆ ಕನಸು ಭಗ್ನಗೊಂಡಿತ್ತು. ಆನಂತರ 2014ರಲ್ಲಿ ಎಂಎಲ್ಸಿ ಆಗಿ ವರ್ಷದ ಬಳಿಕ ಸಿದ್ದರಾಮಯ್ಯ ಸಂಪುಟ ಸೇರ್ಪಡೆಗೊಂಡರು. ಗೃಹಸಚಿವ ಸ್ಥಾನ ಹೊಣೆಹೊತ್ತುಕೊಂಡರು.
2018ರಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಉನ್ನತ ಹುದ್ದೆಗೇರುವ ಕನಸು ಪರಮೇಶ್ವರದ್ದಾಗಿತ್ತು. ಆದರೆ, ಈ ಬಾರಿ ಪರಂ ಗೆದ್ದರು ಪಕ್ಷ ಬಹುಮತ ಪಡೆಯುವಲ್ಲಿ ಎಡವಿತು. ಅಂದು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಡಿಸಿಎಂ ಸ್ಥಾನಕ್ಕೇರಿದರು. ಆ ಮೂಲಕ ಜಿಲ್ಲೆಗೆ ದೊಡ್ಡ ಹುದ್ದೆ ಒಲಿಯಿತು. 2023ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಸಚಿವರಾದರು. ಇದೀಗ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಮತ್ತೆ ಉಪಮುಖ್ಯಮಂತ್ರಿ ಸ್ಥಾನ ಒಲಿದು ಬಂದಿದೆ ಪಕ್ಷನಿಷ್ಠ ಪರಂಗೆ.
39 ವರ್ಷಕ್ಕೆ ಶಕ್ತಿಸೌಧ ಪ್ರವೇಶ
ಮಧುಗಿರಿ ಮೀಸಲು ಕ್ಷೇತ್ರದಿಂದ 1989ರಲ್ಲಿ ಪರಮೇಶ್ವರ್ ಮೊಟ್ಟಮೊದಲ ಚುನಾವಣೆ ಎದುರಿಸಿದಾಗ ಕೇವಲ 39 ವರ್ಷ. ಮೊದಲ ಅವಧಿಯಲ್ಲೇ 1993-94ರ ವೀರಪ್ಪ ಮೊಯ್ಲಿ ಸಚಿವ ಸಂಪುಟದಲ್ಲಿ ರೇಷ್ಮೆ ಸಚಿವರಾಗುವ ಯೋಗವು ಒದಗಿಬಂತು. 1994ರ ಚುನಾವಣೆಯಲ್ಲಿ ಪರಮೇಶ್ವರ್ ಸೋಲನುಭವಿಸಿದರು. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 14 ತಿಂಗಳ ಕಾಲ ಉಪಮುಖ್ಯಮಂತ್ರಿಯಾಗಿದ್ದ ಪರಮೇಶ್ವರ್ಗೆ 2026ರಲ್ಲಿ ಮತ್ತೆ ಡಿಸಿಎಂ ಪಟ್ಟ ಒಲಿದುಬಂದಿದೆ.
1951 ಆಗಸ್ಟ್ 6 ರಂದು ಶಿಕ್ಷಣ ಭೀಷ್ಮ ಡಾ.ಎಚ್.ಎಂ.ಗಂಗಾಧರಯ್ಯ ಮತ್ತು ಗಂಗಾಳಮ್ಮ ದಂಪತಿಯ ದ್ವೀತಿಯ ಪುತ್ರರಾಗಿ ಜನಿಸಿದ ಪರಮೇಶ್ವರ್ಗೆ ಈಗ 75 ವರ್ಷ. 1989ರಲ್ಲಿ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಪರಮೇಶ್ವರ್ 37 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಕಾಲೇಜು ದಿನಗಳಲ್ಲಿ ಅಥ್ಲೀಟ್ ಆಗಿದ್ದ ಪರಮೇಶ್ವರ್ ಕ್ರೀಡಾಸ್ಫೂರ್ತಿಯಿಂದಲೇ ಎಲ್ಲವನ್ನೂ ತೆಗೆದುಕೊಂಡಿದ್ದಾರೆ. ಸುಶಿಕ್ಷಿತ, ಸಜ್ಜನ ರಾಜಕಾರಣಿ ಎನಿಸಿರುವ ಪರಮೇಶ್ವರ್ಗೆ ಸಿಎಂ ಕೈಗೂಡದ ಕನಸಾಗಿದೆ.