Don't privatize the electricity network.
ತಿಪಟೂರು: ನಾವು ಸಿದ್ಧಪಡಿಸಿದ ಊಟ ಸವಿಯಲು ಮುಂದಾಗಿರುವ ಟಾಟಾ ಕಂಪನಿಗೆ ಯಾವುದೇ ಕಾರಣಕ್ಕೂ ವಿದ್ಯುತ್ ಸರಬರಾಜು ಗುತ್ತಿಗೆ ನೀಡಬಾರದು ಎಂದು ನಗರದ ಬೆಸ್ಕಾಂ ನೌಕರರು ಮತ್ತು ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದರು.
ನಗರದ ಬೆಸ್ಕಾಂ ಕಚೇರಿ ಎದುರು ಅಧಿಕಾರಿಗಳು, ನೌಕರರು ಮತ್ತು ಗುತ್ತಿಗೆದಾರರು ಸೋಮವಾರ ಆಯೋಜಿಸಿದ್ದ ದ್ವಾರಸಭೆಯಲ್ಲಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಮನೋಹರ್, ಕಳೆದ 75 ವರ್ಷಗಳಿಂದ ರೈತರು ಮತ್ತು ಜನತೆಯ ಸಹಕಾರದಿಂದ ಕಾಡು, ಮೇಡು ಅಲೆದು, ಕಷ್ಟಪಟ್ಟು ನಾವು ನಿರ್ಮಿಸಿರುವ ವಿದ್ಯುತ್ ಜಾಲ ಇಡೀ ರಾಜ್ಯದ ಜನತೆಗೆ, ರೈತರಿಗೆ, ಉದ್ಯಮಿಗಳಿಗೆ ಬೆಳಕು ನೀಡುತ್ತಿದೆ. ಇಲ್ಲಿವರೆಗೂ ನಮ್ಮ ಕರ್ತವ್ಯದ ವಿಷಯದಲ್ಲಿ ಸಾರ್ವಜನಿಕರಿಂದ ಯಾವುದೇ ತಕರಾರು ಇಲ್ಲ. ಹಾಗಿದ್ದರೂ, ಯಾರನ್ನೋ ಮೆಚ್ಚಿಸುವ ಭರದಲ್ಲಿ ಟಾಟಾ ಕಂಪನಿಗೆ ವಿದ್ಯುತ್ ಸರಬರಾಜು ಗುತ್ತಿಗೆ ನೀಡಲು ಮುಂದಾಗಿರುವ ಸರ್ಕಾರದ ನಡೆಯಿಂದ ಬೆಸ್ಕಾಂ ನೌಕರರು, ರೈತರುಮತ್ತು ಗ್ರಾಹಕರಿಗೆ ತೊಂದರೆಯಾಗಲಿದೆ. ನಾವು ಸಿದ್ಧಪಡಿಸಿದ ಊಟವನ್ನು ನಿರಾಯಾಸವಾಗಿ ಟಾಟಾ ಕಂಪನಿಯವರಿಗೆ ಸವಿಯಲು ಕೊಟ್ಟಂತಾಗುತ್ತೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.
ಪ್ರಾಂತ ರೈತ ಸಂದ ಜಿಲ್ಲಾಧ್ಯಕ್ಷ ಆರ್.ಎಸ್.ಚನ್ನಬಸವಣ್ಣ ಮಾತನಾಡಿ, ಜಿಲ್ಲೆಯ ರೈತರು ಎಂದಿಗೂ ಬೆಸ್ಕಾಂ ಪರವಾಗಿದ್ದೇವೆ. ಇಲಾಖೆಯಿಂದ ನಮಗೆ ತೊಂದರೆಯಾದರೆ ಜಗಳ ಮಾಡಿಯಾದರೂ ಸರಿ, ನಾವು ಕೆಲಸ ಮಾಡಿಸಿಕೊಳ್ಳುತ್ತೇವೆ. ಆದೇ ಮುಂದಿನ ದಿನಗಳಲ್ಲಿ ಇಲಾಖೆ ಖಾಸಗೀಕರಣಗೊಂಡರೆ ನಮ್ಮ ಕಷ್ಟ ಕೇಳಲು ಯಾರೂ ಇರುವುದಿಲ್ಲ. ಮಿಗಿಲಾಗಿ ಸ್ಮಾರ್ಟ್ ಮೀಟರ್ ಅಳವಡಿಸುವುದರಿಂದ "ಐಪಿ' ಸೆಟ್ಗಳಿಗೂ ವಿದ್ಯುತ್ ಶುಲ್ಕ ಪಾವತಿಸಬೇಕಾಗುತ್ತೆ ಮತ್ತು ಗೃಹಲಕ್ಷಿ$್ಮ ಯೋಜನೆ ಕೈತಪ್ಪುವ ಅಪಾಯವಿದೆ. ಸಾರ್ವಜನಿಕ ವಿರೋಧ ವ್ಯಕ್ತವಾಗದೇ ಇದ್ದಲ್ಲಿ ಅರ್ಜಿ ಮಾನ್ಯ ಮಾಡಬಹದು ಎಂದು ರಾಜ್ಯ ಸರ್ಕಾರ ಹೇಳಿದ್ದು, ಜೂ.23 ರಂದು ಟಾಟಾ ಕಂಪನಿ ಸಲ್ಲಿಸಿರುವ ಅರ್ಜಿಯ ಇತ್ಯರ್ಥವಾಗಲಿದೆ. ಅಷ್ಟರೊಳಗೆ ತಾಲೂಕಿನಲ್ಲಿರುವ 30 ಸಾವಿರಕ್ಕೂ ಹೆಚ್ಚು "ಐಪಿ' ಸೆಟ್ ಹೊಂದಿರುವ ರೈತರು ತಹಸೀಲ್ದಾರ್ ಮೂಲಕ ತಕರಾರು ಅರ್ಜಿ ಸಲ್ಲಿಸಲಿದ್ದಾರೆ ಮತ್ತು ಜೂ.22 ರಂದು ತಾಲೂಕಿನ ಈರಲಗೆರೆಯಿಂದ ನಗರದವರೆಗೂ ಒಂದು ಸಾವಿರ ರೈತರು ಜಾಥಾ ಮೂಲಕ ತೆರಳಿ ಖಾಸಗೀಕರಣದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಎಇಇ ಮನೋಹರ್, ಸೋಮಶೇಖರ್, ಕಲ್ಯಾಣ ಸಮಿತಿಯ ಕುಮಾರಸ್ವಾಮಿ, ಬಿಳಿಗೆರೆ, ನೊಣವಿನಕೆರೆ, ಹೊನ್ನವಳ್ಳಿಯ ಸೆಕ್ಷನ್ ಆಫೀಸರ್ಗಳು, ಲೈನ್ಮೆನ್ಗಳು, ಸಿಬ್ಬಂದಿ ಇದ್ದರು.