ತುಮಕೂರಿನಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಧನುಮಾರ್ಸದ ಇಷ್ಟಲಿಂಗ ಮಹಾಪೂಜಾ- ಜನ ಜಾಗೃತಿ ಧರ್ಮ ಸಮಾರಂಭವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು. ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ, ಶ್ರೀ ರೇಣುಕ ಶಿವಾಚಾರ್ಯಸ್ವಾಮೀಜಿ, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಜಿ.ಬಿ.ಜ್ಯೋತಿಗಣೇಶ್, ಡಾ.ಎಸ್.ಪರಮೇಶ್, ಎನ್.ಬಿ.ಪ್ರದಿಪ್ ಕುಮಾರ್, ಟಿ.ಆರ್.ಸದಾಶಿವಯ್ಯ ಮತ್ತಿತರರು ಇದ್ದರು.
- ಧನುಮಾರ್ಸದ ಇಷ್ಟಲಿಂಗ ಮಹಾಪೂಜಾ
- ಜನ ಜಾಗೃತಿ ಧರ್ಮ ಸಭೆ
- ತುಮಕೂರಿನಲ್ಲಿ ರಂಭಾಪುರಿ ಶ್ರೀಗಳು
ತುಮಕೂರು: ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಶಿವಜ್ಞಾನದ ಅರಿವು, ಆಚರಣೆ ಮುಖ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಸೋಮವಾರ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಧನುಮಾರ್ಸದ ಇಷ್ಟಲಿಂಗ ಮಹಾಪೂಜಾ- ಜನ ಜಾಗೃತಿ ಧರ್ಮ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಮನಸ್ಸೆಂಬ ಚಂಚಲ ಅಲೆಗಳ ಹೊಯ್ದಾಟವನ್ನು ಶಾಂತ ಪ್ರಶಾಂತಗೊಳಿಸುವ ಮಾರ್ಗವೇ ಆಧ್ಯಾತ್ಮವಾಗಿದೆ ಎಂದರು.
ಚಿನ್ನವಿಲ್ಲದೇ ಬದುಕಬಹುದು. ಆದರೆ ಅನ್ನವಿಲ್ಲದೇ ಬದುಕಲಾಗದು. ಶ್ರದ್ಧಾವಂತರಾದ ಭಾರತೀಯರು ಮಣ್ಣು, ನೀರು, ಗಾಳಿ, ಬೆಂಕಿ, ಕಲ್ಲುಗಳಲ್ಲಿ ದೇವರನ್ನು ಕಂಡು ಪೂಜಿಸಿದವರು. ದೇವರ ಮೇಲಿನ ನಂಬಿಕೆ ಶಾಶ್ವತ ನಂದಾದೀಪ. ನಂಬಿಗೆ ವಿಶ್ವಾಸಗಳನ್ನು ಎಂದಿಗೂ ಕಳೆದುಕೊಳ್ಳಬಾರದು. ಮನುಷ್ಯನಿಗೆ ಏನೆಲ್ಲ ಸಂಪತ್ತು ಸಂಪನ್ಮೂಲ ಸೌಲಭ್ಯಗಳಿದ್ದರೂ ಬದುಕು ಹರ್ಷದಾಯಕವಾಗಿಲ್ಲ. ಜ್ಯೋತಿ ಉರಿದು ಬೆಳಕು ಕೊಡುವಂತೆ ಸಂತ ಮಹಂತರು ಬದುಕಿ ಬಾಳುವ ಜನ ಸಮುದಾಯಕ್ಕೆ ಆದರ್ಶ ವಿಚಾರ ಧಾರೆಗಳನ್ನು ಕೊಟ್ಟಿದ್ದಾರೆ. ಅವರು ತೋರಿದ ದಾರಿಯಲ್ಲಿ ನಡೆದರೆ ಸಾಕು. ಜೀವನ ಸಾರ್ಥಕಗೊಳ್ಳುತ್ತದೆ ಎಂದು ತಿಳಿಸಿದರು.
ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸುಖ ಶಾಂತಿಯ ಬದುಕಿಗೆ ಧರ್ಮವೊಂದೇ ಆಶಾಕಿರಣ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಸರ್ವರಿಗೂ ಅವಶ್ಯಕವಾಗಿವೆ ಎಂದರು.
ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯರು, ಅಂಬಲದೇವರಹಳ್ಳಿ ಮಠದ ಉಜ್ಜನಿಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಡಾ. ಎಸ್.ಪರಮೇಶ್, ಉಪಾಧ್ಯಕ್ಷ ಟಿ.ಬಿ.ಹರೀಶ್, ವಿದ್ಯಾವಾಹಿನಿ ಶಿಕ್ಷಣಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದಿಪಕುಮಾರ್, ನಿಖಿಲ್ ರಾಜಣ್ಣ, ಸಿ.ಪಿ.ವಿಜಯ, ಎನ್.ಸಿ.ಸಚಿನ್ ಮತ್ತಿತರರು ಉಪಸ್ಥಿತರಿದ್ದರು. ಕೆ.ಬಿ.ಜಯಣ್ಣ, ಕೆ.ಜಿ.ಜಗದೀಶ ಮತ್ತು ಶಂಕರ್ ಮೋಹನ್ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ ಸ್ವಾಗತಿಸಿದರು. ಸಹಕಾರ್ಯದರ್ಶಿ ಜಿ.ಎಸ್.ಸಿದ್ಧರಾಜು ನಿರೂಪಣೆ ಮಾಡಿದರು.
ಧನುಮಾರ್ಸದ ಅಂಗವಾಗಿ ಬೆಳಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನಡೆಯಿತು.
ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲ. ಸುಖ ಬಯಸುವ ಮನುಷ್ಯ ಧರ್ಮ ಪಾಲನೆ ಮಾಡುತ್ತಿಲ್ಲ. ಧರ್ಮ ರಕ್ಷಿಸಿದರೆ ಧರ್ಮ ನಮ್ಮೆಲ್ಲರನ್ನು ಕಾಪಾಡುತ್ತದೆ. ಧನುಮಾರ್ಸದ ಜ್ಞಾನಯಜ್ಞ ಸಕಲರ ಬಾಳಿಗೆ ಬೆಳಕು ತೋರಲಿ.
ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ
ಸತ್ಕಾರ್ಯಗಳ ಮೂಲಕ ಮನುಷ್ಯ ಮುನ್ನಡೆದಾಗ ಎಲ್ಲೆಡೆ ಶಾಂತಿ ಸಮಾಧಾನ ನೆಲೆಗೊಳ್ಳಲು ಸಾಧ್ಯ. ಸತ್ಯ ಶುದ್ಧ ಕಾಯಕದಿಂದ ಬದುಕಿಗೆ ನಿಜವಾದ ಬೆಲೆ ಬರುತ್ತದೆ. ಶ್ರೀ ರಂಭಾಪುರಿ ಜಗದ್ಗುರುಗಳ ಶ್ರಮ ಸಂಚಾರ ಮತ್ತು ಬೋಧಾಮೃತ ನಮ್ಮೆಲ್ಲರ ಉನ್ನತಿಗೆ ಪ್ರೇರಕ ಶಕ್ತಿಯಾಗಿದೆ.