Development work without party differences
ಹುಳಿಯಾರು: ನಾನು ರಾಜಕಾರಣಿಯಲ್ಲ, ಜನರ ಸೇವಕ. ನಮ್ಮ ಕ್ಷೇತ್ರದಲ್ಲಿ ಯಾವುದೇ ಜಾತಿ, ಮತ ಅಥವಾ ಪಕ್ಷ ಭೇದವಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದೇ ನನ್ನ ಮೊದಲ ಆದ್ಯತೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಹುಳಿಯಾರಿನಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ನಿಮಾರ್ಣವಾಗುತ್ತಿರುವ ಭಗೀರಥ ಸಮುದಾಯ ಭವನದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾದ ಜನಸ್ಪಂದನಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕ್ಷೇತ್ರದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ಬಸವಣ್ಣ ಅವರ ಅನುಭವ ಮಂಟಪದ ಮಾದರಿಯಲ್ಲಿ ಒಂದು ಸಭಾಂಗಣ ನಿರ್ಮಿಸುವ ಯೋಜನೆ ಇದೆ. ಇಲ್ಲಿ ಎಲ್ಲ ಸಮುದಾಯದವರಿಗೂ ಜಾಗ ನೀಡುವ ಮೂಲಕ ಜಾತಿ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಬಾಳುವ ಪರಿಸರ ನಿರ್ಮಿಸುವುದು ನನ್ನ ಆಸೆಯಾಗಿದೆ ಎಂದರು.
ಕ್ಷೇತ್ರದ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಒಟ್ಟು 6 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದರಲ್ಲಿ ಉಪ್ಪಾರಕ್ಕೆ 50 ಲಕ್ಷ, ಕುರುಬ 50 ಲಕ್ಷ, ಲಂಬಾಣಿ ಮತ್ತು ಕಾಡುಗೊಲ್ಲ ಸಮುದಾಯಗಳಿಗೆ ತಲಾ 50 ಲಕ್ಷ ರೂ. ಘೋಷಿಸಲಾಗಿದೆ. ಅಲ್ಲದೆ, ಗೂಬೆಹಳ್ಳಿಯ ಸಮುದಾಯ ಭವನಕ್ಕೆ 25 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಹುಳಿಯಾರಿನಲ್ಲಿ ನಿಮಾರ್ಣವಾಗುತ್ತಿರುವ ಬೃಹತ್ ಸಮುದಾಯ ಭವನದ ಕಾರ್ಯಕ್ಕೆ ಭಗೀರಥ ಸಮಾಜದ ಸರ್ಕಾರಿ ನೌಕರರು ಕೈಜೋಡಿಸಬೇಕು. ಪ್ರತಿಯೊಬ್ಬರೂ ತಮ್ಮ ಒಂದು ತಿಂಗಳ ವೇತನವನ್ನು ಭವನ ನಿಮಾರ್ಣಕ್ಕೆ ನೀಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಬೇಕು ಎಂದು ಭಗೀರಥ ಪೀಠದ ಶ್ರೀ ಡಾ.ಪುರುಷೋತ್ತಮಪುರಿ ಸ್ವಾಮೀಜಿ ಆಶಿಸಿದರು.