Develop a learning attitude.
ಕೊರಟಗೆರೆ: ಕಲಿಕೆ ಎಂಬುದು ಹುಟ್ಟಿನಿಂದ ಸಾವಿನವರೆಗೂ ಸಾಗುವ ನಿರಂತರ ಪ್ರಕ್ರಿಯೆ. ಮಕ್ಕಳು ಪ್ರತಿಯೊಂದು ವಿಷಯದಲ್ಲೂ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸ್ಕಾರ ಶಿಬಿರದಲ್ಲಿ ಮಾತನಾಡಿ, ಪಾಲಕರು ಮಕ್ಕಳಿಗಾಗಿ ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ಹೀಗಾಗಿ ಮಕ್ಕಳು ಪಾಲಕರು ತಮ್ಮಿಂದ ಏನು ನಿರೀಕ್ಷಿಸುತ್ತಾರೆ ಎಂಬುದನ್ನು ಅರಿತು ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಣಗಳಿಕೆ ಅಥವಾ ಉದ್ಯೋಗಕ್ಕಿಂತಲೂ ಸಂಸ್ಕಾರಯುತ ಬದುಕು ಮುಖ್ಯ. ಆ ದಿಕ್ಕಿನಲ್ಲಿ ವಿದ್ಯಾಭ್ಯಾಸ ಮಾಡುವುದು ಜೀವನದ ನಿಜವಾದ ಸಾಧನೆಗೆ ದಾರಿ ಮಾಡಿಕೊಡುತ್ತದೆ ಎಂದರು. ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಕಳೆದ 5 ವರ್ಷಗಳಿಂದ ಮಠದಲ್ಲಿ ಸಂಸ್ಕಾರ ಶಿಬಿರವನ್ನು ನಿರಂತರವಾಗಿ ಆಯೋಜಿಸಲಾಗುತ್ತಿದ್ದು, ಈ ಬಾರಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸ ಎಂದರು. ಸರ್ಕಾರಿ ಕಾಲೇಜಿನ ಉಪನ್ಯಾಸಕ ಪ್ರೊ. ಮುಧವೀರಪ್ಪ, ವಿದ್ವಾನ್ ಡಾ.ನಂಜುಂಡಯ್ಯ, ವಿದ್ವಾನ್ ಗಣೇಶ್ ಇದ್ದರು.