- ಹಾಸನ-ಸೋಲಾಪುರ ಎಕ್ಸ್ಪ್ರೆಸ್ ರೈಲು ವಿಳಂಬ
- ರೈಲ್ವೆ ಮಂಡಳಿ ಸ್ಪಷ್ಟನೆ
- ಸಂಚಾರಕ್ಕೆ ಎಂಜಿನ್ ಯೋಗ್ಯ
ತುಮಕೂರು: ಹಾಸನ-ಸೋಲಾಪುರ ಎಕ್ಸೆಪ್ರೆಸ್ ರೈಲಿನ ಎಂಜಿನ್ ಕುಣಿಗಲ್ ತಾಲೂಕು ಎಡೆಯೂರು ರೈಲ್ವೆ ನಿಲ್ದಾಣ ಬಳಿ ಭಾನುವಾರ ಸಂಜೆ ಕೆಟ್ಟು ನಿಂತ ಪರಿಣಾಮ ಗಂಟೆಗಟ್ಟೆಲೆ ಪ್ರಯಾಣಿಕರು ಪರದಾಡುವಂತಾಯಿತು. ಆದರೆ, ಈ ರೈಲಿಗೆ ಬಳಸಲಾದ ಎಂಜಿನ್ ಪ್ರಯಾಣಿಕ ರೈಲುಗಳ ಕಾರ್ಯಾಚರಣೆಗೆ ಯೋಗ್ಯವಾಗಿತ್ತು ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ.
ಆಗಸ್ಟ್ 16 ರಂದು ರೈಲು ಸಂಖ್ಯೆ 11312ಗೆ ಅಳವಡಿಸಿದ್ದ ಲೋಕೋಮೋಟಿವ್ (ಎಂಜಿನ್) ಸಂಖ್ಯೆ 40438 ಎಡೆಯೂರು ಬಳಿ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿತ್ತು. ಇದರ ಪರಿಣಾಮ 3-4 ಗಂಟೆ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ವೇಳೆ ರೈಲ್ವೆ ಎಂಜಿನ್ "ನಾಟ್ ಫಿಟ್ ಾರ್ ಪ್ಯಾಸೆಂಜರ್/ಗೂಡ್ಸ್' ಎಂದು ಬರೆಯಲಾಗಿತ್ತು. ಇದರಿಂದ ಪ್ರಯಾಣಿಕರು ರೊಚ್ಚಿಗೆದ್ದು ಪ್ರತಿಭಟನೆ ಮುಂದಾಗಿದ್ದರು. ಅಷ್ಟರಲ್ಲಿ ಮತ್ತೊಂದು ಎಂಜಿನ್ ತರಿಸಿ ರೈಲಿಗೆ ಅಳವಡಿಸಿ ಪ್ರಯಾಣ ಮುಂದುವರೆಸಲಾಗಿತ್ತು.
ಎಂಜಿನ್ ಯೋಗ್ಯವಾಗಿದೆ!: ಪ್ರಯಾಣಿಕ ರೈಲುಗಳ ಕಾರ್ಯಾಚರಣೆಗೆ ಎಂಜಿನ್ ಯೋಗ್ಯವಾಗಿದ್ದು ಈ ಲೋಕೋಮೋಟಿವ್ ಅನ್ನು ಈ ಹಿಂದೆ ಶೆಂಟಿಂಗ್ ಕಾರ್ಯಾಚರಣೆಗಳಿಗೆ ಬಳಸಲಾಗುತ್ತಿತ್ತು. ನಂತರ, ಕೃಷ್ಣರಾಜಪುರಂ ಲೋಕೋ ಶೆಡ್ನಲ್ಲಿ ಈ ಲೋಕೋಮೋಟಿವ್ ಗೆ ಬಳಸಲಾಗಿತ್ತು. ಮೇಜರ್ ಶೆಡ್ಯೂಲ್ ಓವರ್ ಹಾಲಿಂಗ್ (ವೈ 6)ನಡೆಸಿ ಪ್ರಯಾಣಿಕ/ಸರಕು ರೈಲುಗಳ ಕಾರ್ಯಾಚರಣೆಯು ಸೇರಿದಂತೆ ಮುಖ್ಯಮಾರ್ಗದ ಕಾರ್ಯಾಚರಣೆಗೆ ಅಗತ್ಯವಿರುವಂತೆ ಸಿದ್ಧಗೊಳಿಸಿ ಪರಿಶೀಲನೆ ನಡೆಸಿ ಪ್ರಯಾಣಿಕ/ಸರಕು ರೈಲುಗಳ ಕಾರ್ಯಾಚರಣೆಗೆ ಫಿಟ್ ಎಂದು ಪ್ರಮಾಣೀಕರಿಸಿದ ಬಳಿಕ ಪ್ರಯಾಣಿಕ ರೈಲುಗಳ ನಿರ್ವಹಣೆಗೆ ಬಳಸಲಾಗಿದೆ.
ಎಂಜಿನ್ನ ಮೇಲಿದ್ದ ಹಳೇ ಪೇಂಟ್/ ಲೇಬಲ್ ಅನ್ನು ಕೂಡಲೇ ತೆರವುಗೊಳಿಸುವಂತೆ ಸೂಚನೆಗಳನ್ನು ನೀಡಲಾಗಿದೆ. ಹಾಸನ&ಸೋಲಾಪುರ ಎಕ್ಸೆಪ್ರೆಸ್ ರೈಲು ಸಂಚಾರದ ವೇಳೆ, ಈ ಎಂಜಿನ್ನಲ್ಲಿ ಉಂಟಾದ ತಾಂತ್ರಿಕ ದೋಷದ ಕಾರಣದಿಂದ ಎಡೆಯೂರು ನಿಲ್ದಾಣದಲ್ಲಿ ವಿಳಂಬಗೊಂಡಿತೇ ಹೊರತು ಎಂಜಿನ್ ಯೋಗ್ಯವಲ್ಲದ ಕಾರಣ ನಿಂತಿದ್ದಲ್ಲ. ನಂತರ ಪರ್ಯಾಯ ವ್ಯವಸ್ಥೆ ಮಾಡಿ ರೈಲು ಪ್ರಯಾಣ ಮುಂದುವರೆಸಲಾಯಿತು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.