ತುಮಕೂರಿನಲ್ಲಿ ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವೈ.ಕೆ. ಬಾಲಕೃಷ್ಣಪ್ಪ, ನರಸೀಯಪ್ಪ, ಪಾವಗಡ ಶ್ರೀರಾಮ್, ಕೊಟ್ಟ ಶಂಕರ್, ಹೊಳಕಲ್ಲು ಆಂಜನಪ್ಪ, ವಿಭೂತಿ ಸಿದ್ಧಪ್ಪ, ಡಾ.ಮುಕುಂದ, ಸಿ.ಗಂಗರಾಜು, ಗೂಳರಿವೆ ನಾಗರಾಜ್, ರಂಗಧಾಮಯ್ಯ, ಕವಣದಾಳ ಶಿವಣ್ಣ, ಮಂಜುನಾಥ್, ಮಹದೇವ್ ಮತ್ತಿತರರು ಇದ್ದರು.
- ಕರ್ನಾಟಕ ಮಾದರ ಮಹಾಸಭಾ ಆಗ್ರಹ
- ಇನ್ನಿಬ್ಬರಿಗೆ ಸಚಿವ ಸ್ಥಾನ ನೀಡಲಿ
- ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ ನೇತೃತ್ವದಲ್ಲಿ ಒತ್ತಾಯ
ತುಮಕೂರು: ನೂತನವಾಗಿ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ಸರ್ಕಾರದ ಸಚಿವ ಸಂಪುಟದಲ್ಲಿ ಮಾದಿಗ ಸಮಾಜದ ಉನ್ನತ ನಾಯಕ ಕೆ.ಎಚ್. ಮುನಿಯಪ್ಪಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಪ್ರಬಲ ಖಾತೆ ನೀಡುವಂತೆ ಕರ್ನಾಟಕ ಮಾದರ ಮಹಾಸಭಾ ಒತ್ತಾಯಿಸಿದೆ.
ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯದ ಹಿರಿಯ ಪ್ರಭಾವಿ ನಾಯಕ ಕೆ.ಎಚ್. ಮುನಿಯಪ್ಪ ಅವರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿಯು ಶ್ರಮವಹಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ 7 ಬಾರಿ ಆಯ್ಕೆಯಾಗಿದ್ದ ಮುನಿಯಪ್ಪ ಕೇಂದ್ರ ಸಚಿವರಾಗಿದ್ದರು. ಅಲ್ಲದೆ, ಕಳೆದ 3 ವರ್ಷ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾಗಿ ಸಮರ್ಥ ಆಡಳಿತ ನೀಡಿದ್ದರು. ಅಪಾರ ಅನುಭವ ಹೊಂದಿರುವ ದಕ್ಷ ಹಾಗೂ ಪ್ರಾಮಾಣಿಕ ಜನಪ್ರಿಯ ನಾಯಕರಾಗಿದ್ದಾರೆ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಎಚ್. ಹುಚ್ಚಯ್ಯ ಹೇಳಿದರು.
ಸುಮಾರು 5 ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಸರ್ಕಾರದ ಆಡಳಿತ, ಸಮುದಾಯದ ಜನರ ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯಪರ ವಿಚಾರದಲ್ಲಿ ಮುಂಚೂಣಿ ರಾಜಕೀಯ ಮುತ್ಸದ್ಧಿಯಾಗಿದ್ದಾರೆ. ಪ್ರಸ್ತುತ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರ ನೂತನವಾಗಿ ಅಸ್ತಿತ್ವಕ್ಕೆ ಬರಲಿದ್ದು ಹೊಸ ಸರ್ಕಾರದಲ್ಲಿ ಮುನಿಯಪ್ಪ ಅವರಿಗೆ ಡಿಸಿಎಂ ಸ್ಥಾನ ನೀಡುವುದಲ್ಲದೆ ಪ್ರಮುಖ ಖಾತೆಯನ್ನು ನೀಡಲು ಒತ್ತಾಯಿಸುತ್ತೇವೆ ಎಂದರು.
ಈ ಹಿಂದೆ ಕಾಂಗ್ರೆಸ್ಸೇತರ ಸರ್ಕಾರಗಳು ಮಾದಿಗ ಸಮುದಾಯದ ಜನ ಪ್ರತಿನಿಧಿಗಳಿಗೆ ಶಿಕ್ಷಣ, ಕಂದಾಯ, ಗೃಹ ಸಮಾಜ ಕಲ್ಯಾಣ, ಲೋಕೋಪಯೋಗಿಯಂತಹ ಪ್ರಮುಖ ಖಾತೆಗಳನ್ನು ನೀಡಿದವು. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಮಾದಿಗ ಜನಪ್ರತಿನಿಧಿಗಳಿಗೆ ಪ್ರಮುಖ ಖಾತೆ ನೀಡದೆ ಅನ್ಯಾಯ ಮಾಡಲಾಗಿದೆ. ಹಾಗಾಗಿ, ಮುನಿಯಪ್ಪಗೆ ಹಾಗೂ ಇವರ ಜೊತೆ ಮತ್ತಿಬ್ಬರು ಮಾದಿಗ ಸಮುದಾಯದ ಶಾಸಕರುಗಳಿಗೆ ಮಂತ್ರಿ ಸ್ಥಾನ ನೀಡಬೇಕು. ಅಲ್ಲದೆ, ಎಂಎಲ್ಸಿ ಸ್ಥಾನ ಹಾಗೂ ರಾಜ್ಯ ಸಭೆಯಲ್ಲಿ ಖಾಲಿ ಇರುವ ರಾಜ್ಯಸಭಾ ಸ್ಥಾನಗಳನ್ನು ಮಾದಿಗ ಸಮುದಾಯಕ್ಕೆ ನೀಡಿ ನ್ಯಾಯ ಒದಗಿಸಬೇಕಾಗಿದೆ ಎಂದು ಹುಚ್ಚಯ್ಯ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡ ವೈ.ಕೆ. ಬಾಲಕೃಷ್ಣ, ನಗರಸಭೆ ಮಾಜಿ ಸದಸ್ಯ ನರಸಿಯಪ್ಪ, ಮುಖಂಡ ಪಾವಗಡ ಶ್ರೀರಾಮ್, ಮಹಾಸಭಾ ಕಾರ್ಯದರ್ಶಿ ಕೊಟ್ಟ ಶಂಕರ್, ತಾಲೂಕು ಅಧ್ಯಕ್ಷ ಹೊಳಕಲ್ಲು ಆಂಜನಪ್ಪ, ಕೊರಟಗೆರೆ ತಾಲೂಕು ಅಧ್ಯಕ್ಷ ವಿಭೂತಿ ಸಿದ್ಧಪ್ಪ, ಮುಖಂಡರಾದ ಡಾ.ಮುಕುಂದ, ಸಿ.ಗಂಗರಾಜು, ಗೂಳರಿವೆ ನಾಗರಾಜ್, ರಂಗಧಾಮಯ್ಯ, ಕವಣದಾಳ ಶಿವಣ್ಣ, ಮಂಜುನಾಥ್, ಮಹದೇವ್, ಬಿ.ಜಿ. ಸಾಗರ್ ಮೊದಲಾದವರು ಹಾಜರಿದ್ದರು.
ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾದಿಗ ಸಮುದಾಯಕ್ಕೆ ಉತ್ತಮ ಸ್ಥಾನಮಾನ ನೀಡಲಿಲ್ಲ. ನಗರದ ಹಿರಿಯ ಕಾಂಗ್ರೆಸ್ ನಾಯಕರಾದ ಮಾಜಿ ಶಾಸಕ ಗಂಗಹನುಮಯ್ಯ, ಜಿಪಂ ಮಾಜಿ ಸದಸ್ಯ ಕೆಂಚಮಾರಯ್ಯ, ನಗರಸಭೆ ಮಾಜಿ ಸದಸ್ಯ ನರಸೀಯಪ್ಪಗೆ ಎಂಎಲ್ಸಿ ಅಥವಾ ಯಾವುದಾದರೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಹೇಳಿದರು.
ಕಾಂಗ್ರೆಸ್ ಮಾತ್ರವಲ್ಲ ಇದೂವರೆಗಿನ ಎಲ್ಲಾ ಸರ್ಕಾರಗಳು ಒಳಮೀಸಲಾತಿ ವಿಚಾರದಲ್ಲಿ ನಮಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿವೆ. ಒಗ್ಗಟ್ಟಿನ ಕೊರತೆಯಿಂದ ಸರ್ಕಾರಗಳು ನಮ್ಮನ್ನು ರ್ನಿಲಕ್ಷ$್ಯ ಮಾಡಿವೆ. ಇನ್ನುಮುಂದೆ ಮಾದಿಗ ಸಮುದಾಯ ಒಗ್ಗಟ್ಟು ಪ್ರದರ್ಶಿಸಿದರೆ ಸಿಗಬೇಕಾದ ಸ್ಥಾನಮಾನಗಳು ನಮಗೆ ಸಿಗುತ್ತವೆ.