ತುಮಕೂರು: ಕಳೆದೊಂದು ವಾರದಿಂದ ತುಮಕೂರು ದಸರಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಆಯಾಸಗೊಂಡಿದ್ದ ಡಿಸಿಎಂ ಡಾ.ಜಿ.ಪರಮೇಶ್ವರ್ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದು ಸಹಜವಾಗಿ ತುಮಕೂರಿಗರು, ಕಾಂಗ್ರೆಸ್ ಕಾರ್ಯಕರ್ತರು, ಹಿತೈಷಿಗಳು-ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಎದೆನೋವಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಪರಂ ದಾಖಲಾಗಿದ್ದಾರೆಂಬ ಸುದ್ದಿ ಮಂಗಳವಾರ ಮಧ್ಯಾಹ್ನ ಕಾಡ್ಗಿಚ್ಚಿನಂತೆ ಹರಡಿತ್ತು. ಮಾಧ್ಯಮಗಳಿಗೆ ವೈದ್ಯರು ಆರೋಗ್ಯಸ್ಥಿರವಾಗಿದೆ ಎಂಬ ಮಾಹಿತಿಯನ್ನು ನೀಡಿದ ಬಳಿಕವಷ್ಟೇ ಜನತೆ ನಿಟ್ಟುಸಿರುಬಿಟ್ಟರು.
ದಸರಾ ಸಂಭ್ರಮದಲ್ಲಿ ಭಾಗಿಯಾಗಿದ್ದ ಪರಮೇಶ್ವರ್ ಕಳೆದ ಬುಧವಾರ ವಿಜಯದಶಮಿಯ ದಿನ ಮಧ್ಯಾಹ್ನ 1 ಗಂಟೆಯಿಂದ 4 ಗಂಟೆವರೆಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ 3&4 ಕಿ.ಮೀ., ವಾಕ್ ಮಾಡಿದ್ದರು. ಅದಾದ ಬಳಿಕ ಗುರುವಾರ ಬೆಂಗಳೂರಿನಲ್ಲಿ ಕೂಡ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಆದರೆ, ಸ್ವಲ್ಪ ಅನಾಯಾಸದಿಂದಲೇ ಶನಿವಾರ ಗುಬ್ಬಿ, ಚಾಮರಾಜನಗರದಲ್ಲಿನ ನಿಗದಿತ ಕಾರ್ಯಕ್ರಮವನ್ನು ಪರಂ ರದ್ದುಗೊಳಿಸಿದ್ದರು.
ಭಾನುವಾರ ಕೊರಟಗೆರೆ, ಮಧುಗಿರಿ ಪ್ರವಾಸ ಬಳಿಕ ಸೋಮವಾರ ಬೆಂಗಳೂರಿನ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಪರಮೇಶ್ವರ್ ದೈಹಿಕವಾಗಿ ಸಾಕಷ್ಟು ಬಳಲಿದ್ದರು. ಆದರೂ ವಿಶ್ರಾಂತಿಗೆ ಮೊರೆ ಹೋಗದೆ ಮಂಗಳವಾರ ಬೆಳಗ್ಗೆ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ (ಕೆಬಿಎ) ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಅಸ್ವಸ್ತಗೊಂಡಿದ್ದ ಪರಮೇಶ್ವರ್ರನ್ನು ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ಟಕ (ಕ್ರಿಟಿಕಲ್ ಕೇರ್ ಯುನಿಟ್)ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾರೂ ಆತಂಕ ಪಡುವ ಅಗತ್ಯವಿಲ್ಲ. ದೇವರ ದಯೆಯಿಂದ ನನ್ನ ಆರೋಗ್ಯವೀಗ ಸ್ಥಿರವಾಗಿದೆ. ಆಸ್ಪತ್ರೆಯಲ್ಲಿ ಇರುವ ಇತರೆ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನನ್ನನ್ನು ಭೇಟಿ ಮಾಡಲು ದಯವಿಟ್ಟು ಆಸ್ಪತ್ರೆ ಬಳಿ ಬರಬೇಡಿ ಎಂದು ಸಾರ್ವಜನಿಕರಲ್ಲಿ ಡಾ.ಜಿ.ಪರಮೇಶ್ವರ್ ' ಎಕ್ಸ್' ನಲ್ಲಿ ಮನವಿ ಮಾಡಿದ್ದಾರೆ.