ವಿಜಯವಾಣಿ ಪ್ರಕಟಿಸಿರುವ ವರದಿ
- ರಾಜ್ಯದಲ್ಲೆಡೆ ಹೆಚ್ಚಾಗುತ್ತಿರುವ ದೌರ್ಜನ್ಯ
- ಕಳೆದ ಮೂರು ವರ್ಷದಲ್ಲಿ ತುಮಕೂರಿನಲ್ಲಿ 349 ಪ್ರಕರಣ
- ತುರುವೇಕೆರೆ, ಕುಣಿಗಲ್ನಲ್ಲಿ ದೇವಸ್ಥಾನಕ್ಕೂ ಪ್ರವೇಶ ನಿರಾಕರಣೆ
ತುಮಕೂರು: ತುರುವೇಕೆರೆ ತಾಲೂಕು ಗೋಣಿತುಮಕೂರು ದೇವಾಲಯದಲ್ಲಿ ದಲಿತ ದಂಪತಿ ಹೊರಗೆ ಕಳುಹಿಸಲು ದೇವರು ಮೈಮೇಲೆ ಬರಿಸಿಕೊಂಡವರು ಜೈಲು ಪಾಲಾದ ಬೆನ್ನಹಿಂದಲೇ ಕುಣಿಗಲ್ ತಾಲೂಕು ತಿಗಳರಪಾಳ್ಯದಲ್ಲಿ ಪೂಜೆಗೆ ಬಂದ ದಲಿತ ಮಹಿಳೆ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ನಡೆದಿರುವ ಇವೆರಡು ಪ್ರಕರಣಗಳಷ್ಟೇ ಅಲ್ಲ ಕಳೆದ ಮೂರು ವರ್ಷದಿಂದಲೂ ಜಿಲ್ಲೆಯಲ್ಲಿ ದಲಿತ ಸಮುದಾಯದ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿರುವುದು ಸರ್ಕಾರದ ಅಂಕಿ, ಅಂಶಗಳಿಂದಲೇ ದೃಢವಾಗಿದೆ. 2023ರಿಂದ 2025ರ ವರೆಗೂ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯದ 7358 ಪ್ರಕರಣ ದಾಖಲಾಗಿದ್ದೆರೆ ದಲಿತ ಕೋಟಾದಲ್ಲಿ ಸಿಎಂ ಸ್ಥಾನ ಬಯಸುತ್ತಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ತವರು ಜಿಲ್ಲೆ ತುಮಕೂರು ಕೂಡ ಟಾಪ್ 2 ನಲ್ಲಿದೆ.
ಬೆಂಗಳೂರು ನಗರ 990 ಬಿಟ್ಟರೇ ನಂತರದ ಸ್ಥಾನದಲ್ಲಿ ತುಮಕೂರು ಜಿಲ್ಲೆಯಿದ್ದು 349 ಪ್ರಕರಣ ದಾಖಲಾಗುವ ಮೂಲಕ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ತುಮಕೂರು ಜಿಲ್ಲೆಯಲ್ಲಿ 2023ರಲ್ಲಿ 106 ದೌರ್ಜನ್ಯ ಪ್ರಕರಣ ದಾಖಲಾಗಿದೆ, 2024ರಲ್ಲಿ 123 ಹಾಗೂ ಕಳೆದ ವರ್ಷ 2025ರಲ್ಲಿ 120 ಪ್ರಕರಣ ವಿವಿಧ ಠಾಣೆಯಲ್ಲಿ ದಾಖಲಾಗುವ ಮೂಲಕ ದಲಿತರ ಮೇಲಿನ ದೌರ್ಜನ್ಯಕ್ಕೆ ಕುಖ್ಯಾತಿಗಳಿಸುವಂತಾಗಿದೆ.
ದಲಿತ ಸಮುದಾಯದ ಮೇಲೆ ನಡೆಯುವ ದೌರ್ಜನ್ಯದ ಬಹುತೇಕ ಪ್ರಕರಣಗಳು ಠಾಣೆ ಹಂತದಲ್ಲಿಯೇ ರಾಜೀ, ಪಂಚಾಯಿತಿಯಲ್ಲಿಯೇ ಮುಗಿದು ಹೋಗುತ್ತಿದ್ದು ದಾಖಲಾಗಿರುವ ಸಂಖ್ಯೆಕ್ಕಿಂತಲೂ ವಾಸ್ತವದಲ್ಲಿ ಹೆಚ್ಚಿನ ದೌರ್ಜನ್ಯ ನಡೆಯುತ್ತಿದೆ. ರಾಜ್ಯದಲ್ಲಿ ಎಂಟು ವಲಯಗಳಲ್ಲಿ ಎಂಟು ಪೊಲೀಸ್ ಅಧೀಕ್ಷಕರು ಹಾಗೂ ಬೆಂಗಳೂರು ಮುಖ್ಯ ಕಚೇರಿಯಲ್ಲಿ ಪೊಲೀಸ್ ಅಧೀಕ್ಷಕ(ಆಡಳಿತ) ಮತ್ತು ಪೊಲೀಸ್ ಅಧೀಕ್ಷಕ(ಕೇಂದ್ರ ಸ್ನಾನ)ಸೇರಿ 10 ಪೊಲೀಸ್ ಅಧೀಕ್ಷಕರ ದರ್ಜೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದರೂ
ಡಿಸಿಆರ್ಇ ಪೊಲೀಸ್ ಠಾಣೆ ಪರಿಣಾಮಕಾರಿಯಾಗಿಲ್ಲ!?
ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಕಲಂ ದರ್ಜೆಯ 9ರ ಅನುಷ್ಟಾನಕ್ಕೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 33 ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದ್ದು ತನಿಖೆ ನಡೆಸಿ, ಆರೋಪಪಟ್ಟಿ ಸಲ್ಲಿಸಲು ಅಧಿಕಾರ ನೀಡಲಾಗಿದೆ. ಆದರೆ, ಈ ಠಾಣೆಗಳಲ್ಲಿ ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಕರ್ಯದ ಕೊರತೆಯಿಂದ ಎಲ್ಲಿಯೂ ಪರಿಣಾಮಕಾರಿ ಎನ್ನಿಸಿಕೊಂಡಿಲ್ಲ.
ಡಿಸಿಆರ್ಇ ಆರಂಭವಾಗಿ ವರ್ಷ ಕಳೆಯುತ್ತಿದ್ದರೂ ರಾಜ್ಯದಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ಆತಂಕ ಹೆಚ್ಚಿಸಿದೆ. ಕಾಯ್ದೆಯಲ್ಲಿ ಪಿಎಸ್ಐ ಮತ್ತು ಮೇಲ್ಪಟ್ಟ ದರ್ಜೆಯ ಅಧಿಕಾರಿ ದಲಿತ ದೌರ್ಜನ್ಯ ಪ್ರಕರಣಗಳನ್ನು ತನಿಖೆ ಮಾಡಲು ಅಧಿಸೂಚನೆ ಹೊರಡಿಸಲಾಗಿದ್ದು ಡಿಸಿಆರ್ಇ ಘಟಕದ ಎಲ್ಲಾ 33 ಪೊಲೀಸ್ ಠಾಣೆಗಳಿಗೆ ಡಿವೈಎಸ್ಪಿ ದರ್ಜೆಯ ಪೊಲೀಸ್ ಠಾಣೆಗಳೆಂದು 2024ರಲ್ಲಿಯೇ ಪೋಷಿಸಲಾಗಿದೆ.
ರಾಜ್ಯದಲ್ಲಿ 33 ಡಿಸಿಆರ್ಇ ಪೊಲೀಸ್ ಠಾಣೆಗಳಿಗೆ ಠಾಣಾಧಿಕಾರಿಯಾಗಿ 12 ಡಿವೈಎಸ್ಪಿ ಮತ್ತು 21 ಪೊಲೀಸ್ ಇನ್ಸ್ಪೆಕ್ಟರ್ ಮಂಜೂರಾತಿ ನೀಡಲಾಗಿದೆ. ಈಗಾಗಲೆ ಮಂಜೂರಾಗಿರುವ 12 ಡಿವೈಎಸ್ಪಿ ಹುದ್ದೆಗಳು ಭರ್ತಿಯಾಗಿದ್ದು ಪ್ರಸ್ತುತ 21 ಪಿಐ ಹುದ್ದೆಗಳನ್ನು ಡಿವೈಎಸ್ಪಿ ಹುದ್ದೆಗೆ ಮೇಲ್ಮರ್ಜೆಗೇರಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ.
ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ಹೆಚ್ಚಾಗುತ್ತಿರುವುದು ಪ್ರಕರಣಗಳ ಸಂಖ್ಯೆಯಲ್ಲಿಯೇ ದೃಢವಾಗುತ್ತಿದೆ. ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ ಮೇಲೆ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ತಪ್ಪಿತಸ್ಥರಿಗೆ ಶಿೆ ಕೊಡಿಸುವ ಕೆಲಸವಾಗುತ್ತಿಲ್ಲ, ಶೇ.2ರಷ್ಟು ಪ್ರಮಾಣದಲ್ಲಿಯೂ ಶಿೆಯಾಗಿಲ್ಲ. ದೌರ್ಜನ್ಯ ತಡೆಯುವ ಸಲುವಾಗಿಯೇ ಕಳೆದ ವರ್ಷ ಆರಂಭಿಸಿರುವ ಡಿಸಿಆರ್ಇಗೆ ಮತ್ತಷ್ಟು ಶಕ್ತಿ ನೀಡಬೇಕು, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವ ಕೆಲಸವಾಗಬೇಕು.
ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಜಿಲ್ಲಾ ಕೇಂದ್ರಗಳಲ್ಲಿ 33 ಡಿಸಿಆರ್ಇ ಪೊಲೀಸ್ ಠಾಣೆ ತೆರೆಯಲಾಗಿದ್ದು ಕರ್ತವ್ಯ ನಿರ್ವಹಿಸುತ್ತಿವೆ, ಎಂಟು ವಲಯಗಳಿದ್ದು ಎಂಟು ಅಧೀಕ್ಷಕರು, ಬೆಂಗಳೂರು ಆಡಳಿತ, ಕೆಂದ್ರಕ್ಕೆ ಸೇರಿ 10 ಅಧೀಕ್ಷಕರು ಜವಬ್ಧಾರಿ ನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ಘಟನಾವಳಿ ಗಮನಿಸಲು ಮತ್ತು ಸೂಕ್ತ ಕ್ರಮ ತೆಗದುಕೊಳ್ಳಲು ಸಲುವಾಗಿ ಪ್ರೊಟೆಕ್ಷನ್ ಸೆಲ್ ಕರ್ತವ್ಯ ನಿರ್ವಹಿಸುತ್ತಿದೆ.