Dairy farming helps in becoming economically strong
ಬುಕ್ಕಾಪಟ್ಟಣ: ಮೂಖ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ -ವೈದ್ಯರಿಗೆ ಮಾತೃ ಹೃದಯ ಅವಶ್ಯಕವಾಗಿದೆ. ಅನಾರೋಗ್ಯದ ಪರಿಸ್ಥಿತಿಯಲ್ಲಿ ಅವುಗಳ ಯಾತನೆ ಅರಿತು ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಿರುವುದು ಪಶು ವೈದ್ಯರಿಗೆ ಮಾತ್ರ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ದೊಡ್ಡ ಅಗ್ರಹಾರದಲ್ಲಿ ಮಂಗಳವಾರ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಿದ್ದ ಪಶು ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ರೈತರು ಕೃಷಿ ಚಟುವಟಿಕೆ ಜತೆಗೆ ಉಪ ಕಸುಬನ್ನಾಗಿ ಹೈನುಗಾರಿಕೆ ಆಯ್ಕೆಮಾಡಿಕೊಳ್ಳವುದು ಅತ್ಯಂತ ಲಾಭದಾಯಕ. ಜಾನುವಾರುಗಳನ್ನು ಕಾಳಜಿ ಜವಾಬ್ದಾರಿಯಿಂದ ಪೋಷಿಸಿದರೆ ಅವುಗಳಿಂದ ನಮ್ಮ ಬದುಕು ಸಾಗುತ್ತದೆ. ದೈನಂದಿನ ಚಟುವಟಿಕೆಯಲ್ಲಿ ನಮ್ಮನ್ನು ಕಾರ್ಯಪ್ರವೃತ್ತಿಗೊಳಿಸುವಲ್ಲಿ ಹೈನುಗಾರಿಕೆ ಸಹಕಾರಿಯಾಗಿದೆ. ಕೃಷಿ, ಗೋಮಾತೆ ಕೈಬಿಡುವುದಿಲ್ಲ. ರೈತರು ತಮ್ಮ ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಲು ಹೈನುಗಾರಿಕೆ ಉತ್ತಮ ಆಯ್ಕೆ. ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಹೆಚ್ಚು ಜಾನುವಾರುಗಳು ಇರೋ ಗ್ರಾಪಂ ವ್ಯಾಪ್ತಿಗಳಲ್ಲಿ ಪಶು ಸಂಗೋಪನೆ ಕೇಂದ್ರ ಸ್ಥಾಪಿಸಿ ರೈತರಿಗೆ ಹಾಗೂ ಜಾನುವಾರುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಸರ್ಕಾರದಿಂದ ಹೋಬಳಿಗಳ ಅಭಿವೃದ್ಧಿಗೆ 37 ಕೋಟಿ ರೂ. ಅನುದಾನ ನೀಡಿದ್ದು, ಕಾಮಗಾರಿಗಳು ಪ್ರಾರಂಭಿಸಲಾಗಿದೆ ಎಂದರು.
ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ, ರೈತರು ಆರ್ಥಿಕ ಸಂಕಷ್ಟದಿಂದ ಹೊರಬರಲು ಇರುವ ದಾರಿ ಹೈನುಗಾರಿಗೆ ಮಾತ್ರ. ಅವಳಿ ಕ್ಷೇತ್ರಗಳಾದ ಬುಕ್ಕಾಪಟ್ಟಣ ಹಾಗೂ ಶಿರಾ ಕ್ಷೇತ್ರದ ರೈತರಿಗೆ 1000ಕ್ಕೂ ಹೆಚ್ಚು ರಾಸುಗಳನ್ನು ನೀಡಲು ಮುಂದಾಗಿರುವ ಶಾಸಕ ಸುರೇಶ್ ಬಾಬು ಅವರ ರೈತರ ಮೇಲಿನ ಕಾಳಜಿ ಜನ ಮೆಚ್ಚುವಂತದ್ದು, ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಸಲುವಾಗಿ ಅಂತಾರಾಷ್ಟ್ರೀಯ ಮಹಿಳಾ ಸಂಸ್ಥೆಯಾದ ಇನ್ನರ್ ವೀಲ್ ಕ್ಲಬ್ ಸಂಸ್ಥೆ ಕಳೆದ 102 ವರ್ಷಗಳಿಂದ ಪ್ರಾಣಿಗಳ ಚಿಕಿತ್ಸೆಗಾಗಿ ಪಶುಸಂಗೋಪನೆ ಇಲಾಖೆ ಹಾಗೂ ವಿವಿಧ ಸಹಕಾರಿ ಸಂಘ ಸಂಸ್ಥೆಗಳ ಜತೆಗೂಡಿ ಶ್ರಮಿಸುತ್ತಿರುಬುದು ಶ್ಲಾಘನೀಯ ಎಂದರು.