Comprehensive training should be provided to BLOs.
ತಿಪಟೂರು: ಎಸ್ಐಆರ್ ಪರಿಷ್ಕರಣೆಯ ಫಾಮ್ರ್ ಭರ್ತಿ ವಿಚಾರದಲ್ಲಿ ಬಿಎಲ್ಒಗಳೇ ಗೊಂದಲಕ್ಕೆ ಒಳಗಾಗಿದ್ದು, ಸಮಗ್ರ ತರಬೇತಿಯ ನಂತರ ಫಾಮ್ರ್ ಭರ್ತಿ ಮಾಡಲಿ. ಇಲ್ಲವಾದಲ್ಲಿ ಮಾಹಿತಿ ಕೊರತೆಯಿಂದ ಅರ್ಹರು ಅನರ್ಹರಾಗಲಿದ್ದಾರೆ ಎಂದು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಕಳವಳ ವ್ಯಕ್ತಪಡಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆ ಕುರಿತು ಪಟ್ಟಣದಲ್ಲಿ ಆಯೋಜಿಸಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿ, ಫಾಮ್ರ್ ಭರ್ತಿ ವಿಷಯದಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ ಬಿಎಲ್ಒ ಮತ್ತು ಬಿಎಲ್ಎಗಳಿಗೂ ಮಾಹಿತಿ ಕೊರತೆ ಇದೆ. ಚುನಾವಣಾ ಆಯೋಗ ನೀಡಿರುವ ಫಾಮ್ರ್ ನೋಡಲು ಸರಳವಾಗಿದ್ದರೂ ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳುವ ಪ್ರಶ್ನೆಗಳಂತೆ ಒಗಟಾಗಿವೆ. ಸಮಗ್ರ ಅರಿವಿನ ಕೊರತೆಯಿಂದ ಸ್ವಲ್ಪ ಎಡವಟ್ಟಾದರೂ ಅರ್ಹರು ಅನರ್ಹರಾಗಿ ಉಳಿಯಬೇಕಾಗುತ್ತೆ ಎಂದರು.
ಈಗಾಗಲೇ ಬಿಹಾರದಲ್ಲಿ ಚುನಾವಣಾ ಗುರುತಿನ ಚೀಟಿ ಇಲ್ಲದವರನ್ನು ಎಲ್ಲ ಸೌಲಭ್ಯಗಳಿಂದ ಹೊರಗಿಡುವ ಪ್ರಕ್ರಿಯೆ ಶುರುವಾಗಿದ್ದು, ಪಾಸ್ಪೋರ್ಟ್ ನವೀಕರಣಕ್ಕೆ ವೋಟರ್ ಐಡಿ ಕೇಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಗ್ರಾಮ ಪಂಚಾಯಿತಿ, ನಗರಸಭೆ, ಮತ್ತು ವಾರ್ಡ್ವಾರು ಪ್ರತ್ಯೇಕ ಕೌಂಟರ್ ತೆರೆದು ಎಸ್ಐಆರ್ ಪ್ರಕ್ರಿಯೆಗೆ ಅಗತ್ಯವಿರುವ ದಾಖಲೆ ನೀಡುವ ಕೆಲಸ ಮಾಡಬೇಕು ಮತ್ತು ಜನತೆಯಲ್ಲಿ ಸಮಗ್ರ ಅರಿವು ಮೂಡಿಸಬೇಕು. ಅಗತ್ಯಬಿದ್ದರೆ ಜನ ಸ್ಪಂದನ ಟ್ರಸ್ಟ್ ತಾಲೂಕು ಆಡಳಿತದೊಂದಿಗೆ ಕೈಜೋಡಿಸಿ ಜನರಲ್ಲಿ ಅರಿವು ಮೂಡಿಸಲು ಸಹಕರಿಸುತ್ತದೆ ಎಂದರು.