Community progress through women empowerment
ಗುಬ್ಬಿ: ಗ್ರಾಮೀಣ ಭಾಗದ ಬಡತನದಲ್ಲಿ ಸೊರಗಿದ ಕುಟುಂಬಗಳನ್ನು ಮೇಲೆತ್ತಲು ಮಾದಿಗ ಸಮುದಾಯದ ಮಹಿಳೆಯರಿಗೆ ಬದುಕು ಕಟ್ಟಿಕೊಡಲು ಡಾ.ಬಾಬು ಜಗಜೀವನ ರಾಮ್ ಆದಿ ಜಾಂಬವ ಯುವ ಬ್ರಿಗೇಡ್ ಹಾಗೂ ಅಭಿವೃದ್ಧಿ ಸೇವಾ ಟ್ರಸ್ಟ್ ಸದಾ ಸಿದ್ಧವಿದೆ ಎಂದು ಬ್ರಿಗೇಡ್ ಹಾಗೂ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಬಸವರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನ ರಾಮ್ ಆದಿ ಜಾಂಬವ ಯುವ ಬ್ರಿಗೇಡ್ ಹಾಗೂ ಅಭಿವೃದ್ಧಿ ಸೇವಾ ಟ್ರಸ್ಟ್ ಮಾಸಿಕ ಸಭೆಯಲ್ಲಿ ಮಾತನಾಡಿ, ಸಂಘಗಳ ಮೂಲಕ ಆರ್ಥಿಕ ನೆರವು ನೀಡಿ ವ್ಯವಹಾರ ನಡೆಸಲು ಅನುವು ಮಾಡಲಾಗುವುದು. ಜತೆಗೆ ಬಡತನ ನಿಮೂರ್ಲನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಕಟ್ಟಲು ತಾಲೂಕಿನಲ್ಲಿ ಸಂಘ ಚಟುವಟಿಕೆ ನಡೆಸಿದೆ. ಸಮುದಾಯದ ಮಹಿಳೆಯರ ಆರ್ಥಿಕ ಸ್ವಾವಲಂಭನೆಯಿಂದ ಇಡೀ ಮಾದಿಗ ಸಮಾಜನವನ್ನೇ ಮೇಲೆತ್ತುವ ಕೆಲಸ ಆಗಲಿದೆ ಎಂದರು.
ಉಪಾಧ್ಯಕ್ಷ ಹೊಸಕೆರೆ ಬಸವರಾಜು ಮಾತನಾಡಿ, ದಲಿತ ಕುಟುಂಬಗಳು ಮೊದಲಿಂದಲೂ ಬಡತನ ಅನುಭವಿಸಿ ಬಡತನದಲ್ಲೇ ಸಾವನ್ನಪ್ಪಿದ ಘಟನೆಗಳೇ ಹೆಚ್ಚಾಗಿವೆ. ಇದರಿಂದ ಮಹಿಳೆಯರಲ್ಲಿ ಒಗ್ಗಟ್ಟು ಪ್ರದರ್ಶನ ಹಾಗೂ ಆರ್ಥಿಕ ಸಬಲೀಕರಣ ಸಾಧಿಸಲು ನಮ್ಮ ಬ್ರಿಗೇಡ್ ನಿರಂತರ ದುಡಿದಿದೆ. ಬ್ಯಾಂಕಿನಲ್ಲಿ ಖಾತೆ ತೆರೆಯುವ ಜತೆಗೆ ಸಂಘ ಚಟುವಟಿಕೆ ಬಗ್ಗೆ ತರಬೇತಿ ಹಾಗೂ ಸ್ವ&ಉದ್ಯೋಗ ಬಗ್ಗೆ ತರಬೇತಿ ನೀಡುತ್ತಿದ್ದೇವೆ ಎಂದರು.
ಜಿಲ್ಲಾ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪಡೆದ ಎಚ್.ಬಸವರಾಜ್ ಅವರನ್ನು ಬ್ರಿಗೇಡ್ ಹಾಗೂ ಅಭಿವೃದ್ಧಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ಸನ್ಮಾನಿಸಿದರು. ಸಭೆಯಲ್ಲಿ ಗೌರವಾಧ್ಯಕ್ಷ ಮುದ್ದಣ್ಣ, ಪ್ರಧಾನ ಕಾರ್ಯದರ್ಶಿ ಶಿವರಾಜು, ಖಜಾಂಚಿ ನರಸಿಂಹಮೂರ್ತಿ, ಪದಾಧಿಕಾರಿಗಳಾದ ಮಾದೇವಣ್ಣ, ಜೈ ರಾಮಣ್ಣ, ರೇಖಾ, ರೇಣುಕಾ, ಕುಮಾರ್, ತಾರಾ, ರಾಧಮಣಿ, ಕಾವ್ಯಾ ಇದ್ದರು.