ಮಾಜಿ ಸಚಿವ ಕೆ.ಎನ್.ರಾಜಣ್ಣ ನಿವಾಸದಲ್ಲಿ ಬಾಡೂಟ ಸವಿದ ಸಿಎಂ ಸಿದ್ದರಾಮಯ್ಯ.
- ಬಾಡೂಟ ಸವಿದ ಸಿಎಂ
- ನಾಟಿಕೋಳಿ, ಕಾಲುಸೂಪ್
- ಜತೆಯಲಿ ಪರಂ, ಕೆಎನ್ನಾರ್
ತುಮಕೂರು: ನಿರೀಕ್ಷೆ ಯಂತೆಯೇ ಸಿಎಂ ಸಿದ್ದರಾಮಯ್ಯ ತುಮಕೂರು ಭೇಟಿ ಸಂದರ್ಭದಲ್ಲಿ ಪರಮಾಪ್ತ ಕೆ.ಎನ್.ರಾಜಣ್ಣ ನಿವಾಸಕ್ಕೆ ಭೇಟಿ ನೀಡಿ ಇಷ್ಟದ ಭೋಜನ ಸವಿದರು.
ಕರ್ನಾಟಕ ಕ್ರೀಡಾಕೂಟ-2026 ಉದ್ಘಾಟನೆ ಕಾರ್ಯಕ್ರಮಕ್ಕೆ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಆಗಮಿಸಿದ ಸಿಎಂ ಆಪ್ತರೊಂದಿಗೆ ನೇರವಾಗಿ ಕೆ.ಎನ್.ರಾಜಣ್ಣ ಅವರ ಕ್ಯಾತಸಂದ್ರ ಸಮೀಪದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ನಾಟಿ ಕೋಳಿ ಹಾಗೂ ಕಾಲುಸೂಪ್ ಸವಿದರು. ಈ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಇದ್ದರು.
ಊಟ ಮುಗಿಸಿ ಹೊರಬಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನಗೆ ಕೆಲವು ದಿನಗಳಿಂದ ಜ್ವರವಿತ್ತು, ಬಾಯಿಕೆಟ್ಟಿದ್ದರಿಂದ ಇಷ್ಟಪಟ್ಟು ನಾನ್ವೆಜ್ ಊಟ ಮಾಡಿದೆ ಎಂದರು.
ರಾಜ್ಯ ಸಚಿವ ಸಂಪುಟ ಪುನರಚನೆ ಸಂದರ್ಭದಲ್ಲಿ ಕೆ.ಎನ್.ರಾಜಣ್ಣಗೆ ಸಿಹಿ ಸುದ್ದಿ ನೀಡುತ್ತೀರ ಎಂಬ ಮಾಧ್ಯಮದವರ ಪ್ರಶ್ನೆಗೆ, ಯಾವಾಗಲೂ ರಾಜಣ್ಣನ ಜೊತೆ ಸಿಹಿ ಸುದ್ದಿನೆ ಇರೋದು, ಹೈಕಮಾಂಡ್ ಜತೆ ಮಾತನಾಡುತ್ತೇನೆ ಎಂದು ನಕ್ಕರು.
ಈ ಸಂದರ್ಭದಲ್ಲಿ ಕೆ.ಎನ್.ರಾಜಣ್ಣ ಅಭಿಮಾನಿಗಳು ಸಚಿವ ಸ್ಥಾನ ನೀಡುವಂತೆ ಘೋಷಣೆಗಳನ್ನು ಕೂಗಿ ಆಗ್ರಹಿಸಿದರು.