ಜೆಡಿಎಸ್​ ತೊರೆದು ಬಿಜೆಪಿ ಸೇರಿದ್ದ ಹೊನ್ನೇಭಾಗಿ ಶಶಿಧರ್​ 
ತುಮಕೂರು

ಚಿಕ್ಕನಾಯಕನಹಳ್ಳಿ ಬಿಜೆಪಿಗೆ ಸಿಕ್ಕಿದ ಹೊಸ ಸಾರಥಿ

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್​ ತೊರೆದಿದ್ದ ಶಶಿಧರ್​ಗೆ ಮಂಡಲ ಅಧ್ಯಕ್ಷ ಸ್ಥಾನ
  • ಕಮಲ ಪಾಳಯದಲ್ಲಿ ಹೊಸ ಸಂಘರ್ಷಕ್ಕೆ ನಾಂದಿ
  • ಕೇಂದ್ರ ಸಚಿವ ವಿ.ಸೋಮಣ್ಣ ಮಾಸ್ಟರ್​ ಪ್ಲಾನ್​
ತುಮಕೂರು: ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮುನಿಸು ಕಾರಣದಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನೆಲೆ ಕಳೆದುಕೊಂಡಿರುವ ಬಿಜೆಪಿಗೆ ನೂತನ ಸಾರಥಿ ಹುಡುಕಲಾಗಿದೆ. ಸಂಟನೆಯೇ ಇಲ್ಲದೆ ಸೊರಗಿರುವ ಚಿಕ್ಕನಾಯಕನಹಳ್ಳಿಯಲ್ಲಿ ಕಮಲ ಪಕ್ಷದ ಹೊಣೆಯನ್ನು ಎಚ್​.ಆರ್​.ಶಶಿಧರ್​ಗೆ ನೀಡಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್​ ಶುಕ್ರವಾರ ಆದೇಶಿಸಿದ್ದಾರೆ.
ಜೆಡಿಎಸ್​ ಪಕ್ಷ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿರುವ ಹೊನ್ನೇಭಾಗಿ ಶಶಿಧರ್​ ಅವರಿಗೆ ಚಿಕ್ಕನಾಯಕನಹಳ್ಳಿ ಮಂಡಲ ಅಧ್ಯಕ್ಷ ಸ್ಥಾನ ನೀಡಲಾಗಿರುವುದು ತಾಲೂಕು ಬಿಜೆಪಿಯಲ್ಲಿ ಮತ್ತೊಂದು ಸಂರ್ಷಕ್ಕೆ ಎಡೆಮಾಡಿಕೊಟ್ಟಿದೆ.
ಚಿಕ್ಕನಾಯಕಹಳ್ಳಿ ತಾಲೂಕಿನಲ್ಲಿ ಪಕ್ಷ ಸಂಘಟನೆಯೇ ಇಲ್ಲದಂತಾಗಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದ, ಕೇಂದ್ರ ಸಚಿವ ವಿ.ಸೋಮಣ್ಣ ಜತೆ ಗುರುತಿಸಿಕೊಂಡಿರುವ ಶಶಿಧರ್​ ಅವರನ್ನು ಅನ್ಯ ಪಕ್ಷದಿಂದ ಕರೆತಂದು ಬಿಜೆಪಿಗೆ ಅಧ್ಯಕ್ಷರನ್ನಾಗಿ ಮಾಡಿರುವುದು ಕುತೂಹಲ ಮೂಡಿಸಿದೆ.
ತುಮಕೂರು ಜಿಲ್ಲಾ ಬಿಜೆಪಿ ಸಂಘಟನೆಗೆ ಇತ್ತೀಚೆಗಷ್ಟೇ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದರೂ ಚಿಕ್ಕನಾಯಕನಹಳ್ಳಿ ತಾಲೂಕಿನ ಯಾರೊಬ್ಬ ಕಾರ್ಯಕರ್ತರೂ ಪಕ್ಷ ಸಂಟನೆಯಲ್ಲಿ ನೇಮಕವಾಗಿರಲಿಲ್ಲ. ಜೆಸಿಎಂ ಬಿಟ್ಟು ಪಕ್ಷದಲ್ಲಿ ಗುರುತಿಸಿಕೊಳ್ಳಲು ಹಿಂದೇಟು ಹಾಕಿದ್ದರಿಂದ ಯಾರೊಬ್ಬರನ್ನೂ ನೇಮಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಜೆ.ಸಿ.ಮಾಧುಸ್ವಾಮಿ ಸೂಚನೆ ನೀಡದೆ ಯಾರೊಬ್ಬ ಕಾರ್ಯಕರ್ತರನೂ ಪಕ್ಷ ಸಂಟನೆಗೆ ಬರುವುದಿಲ್ಲ ಎಂಬುದರನ್ನು ಅರಿತ ಬಿಜೆಪಿ ಜಿಲ್ಲಾ ಘಟಕ ರಾಜಕೀಯವಾಗಿ ಹೊಸ ದಾಳ ಉರುಳಿಸಿದೆ, ಜೆಡಿಎಸ್​ನಿಂದ ಲಿಂಗಾಯತ ಸಮುದಾಯದ ಮುಖಂಡನನ್ನು ಕರೆತಂದು ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನ ನೀಡಿದೆ.
ತಾಲೂಕಿನಲ್ಲಿ ಬಿಜೆಪಿ ಕಟ್ಟಿ ಬೆಳಸಿದ್ದ ಮಾಜಿ ಶಾಸಕ ಕೆ.ಎಸ್​.ಕಿರಣ್​ಕುಮಾರ್​ 2023ರಲ್ಲಿ ಕಾಂಗ್ರೆಸ್​ ಪಾಳಯಕ್ಕೆ ಜಿಗಿದಿದ್ದಾರೆ, ಬಿಜೆಪಿಯಲ್ಲಿ ಗೆದ್ದು ಮಂತ್ರಿಯೂ ಆಗಿದ್ದ ಜೆ.ಸಿ.ಮಾಧುಸ್ವಾಮಿ ಕೂಡ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಕಾರಣದಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಂಡಲ ಅಧ್ಯಕ್ಷರಾಗಲು ಕಾರ್ಯಕರ್ತರು ಸಿಗದೆ ಬಿಜೆಪಿಗೆ ಪರದಾಡುವಂತಾಗಿತ್ತು.
ಪ್ರಸ್ತುತ ಮಿತ್ರ ಪಕ್ಷ ಜೆಡಿಎಸ್​ನಿಂದಲೇ ಒಬ್ಬ ಮುಖಂಡನನ್ನು ಪಕ್ಷಕ್ಕೆ ಕರೆತಂದು ಮಂಡಲ ಅಧ್ಯಕ್ಷನನ್ನಾಗಿ ನೇಮಿಸುವ ಮೂಲಕ ಜಿಲ್ಲಾ ಬಿಜೆಪಿ ಮುಜುಗರದಿಂದ ತಾತ್ಕಾಲಿಕವಾಗಿ ತಪ್ಪಿಸಿಕೊಂಡಿದೆ.