ತುಮಕೂರಿನಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿ ನೌಕರ ವೃಂದದವರು ಸೇರಿದಂತೆ ವಿವಿಧ ಇಲಾಖೆಯವರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ. ಪ್ರಭು ದಂಪತಿಯನ್ನು ಅಭಿನಂದಿಸಿದರು. ಗೋಟೂರು ಶಿವಪ್ಪ, ಶಾರದಮ್ಮ, ಸಂಜೀವಪ್ಪ, ಈಶ್ವರಚಂದ್ರ, ನರಸಿಂಹಮೂರ್ತಿ, ನಾರಾಯಣಸ್ವಾಮಿ, ಸಣ್ಣಮಸಿಯಪ್ಪ, ಡಾ.ಚಂದ್ರಶೇಖರ್ ಮತ್ತಿತರರು ಇದ್ದರು.
- ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ಪದನ್ನೋತಿ ಪಡೆದ ಜಿ.ಪ್ರಭು
- ಜಿಪಂ ಅಧಿಕಾರಿ ವೃಂದದವರಿಂದ ಬೀಳ್ಕೊಡುಗೆ
- ತುಮಕೂರು ದಸರಾ ರೂವಾರಿ
ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯ ಸೇವಾವಧಿಯಲ್ಲಿ ದೊರೆತ ಪ್ರೀತಿ, ಕಷ್ಟದಲ್ಲಿದ್ದವರ ಸೇವೆಗೆ ಸಿಕ್ಕ ಅವಕಾಶಗಳು ನನ್ನ ಜೀವನದ ಅವಿಸ್ಮರಣೀಯ ಳಿಗೆಗಳಾಗಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು ಭಾವುಕರಾದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಸಂಜೆ ಜಿಲ್ಲೆಯ ಅಧಿಕಾರಿ ವೃಂದದವರಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅವರು, ಸಿಇಒ ಆಗಿ ನನ್ನ ಅಧಿಕಾರದ ಪಯಣದಲ್ಲಿ ಸಮಯವನ್ನು ಲೆಕ್ಕಿಸದೆ ಇಲಾಖೆಗಳ ಗುರಿ ಯೋಜನೆ ತಲುಪಿಸಲು ಜತೆಯಾಗಿ ಹೆಜ್ಜೆ ಹಾಕಿದ ಪಂಚಾಯತ್ ರಾಜ್ ಸಿಬ್ಬಂದಿ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರ ವರ್ಗ, ನೌಕರರು ವಿಶೇಷವಾಗಿ ಸಚಿವರು, ಶಾಸಕರು, ಸಂಸದರು, ಇತರೆ ಎಲ್ಲಾ ಜನಪ್ರತಿನಿಧಿಗಳು, ಮಾಧ್ಯಮದವರು, ಸಾರ್ವಜನಿಕರು, ಸಂಘಟನೆಗಳ ಮುಖಂಡರು ಎಲ್ಲರಿಗೂ ಹೃದಯಂತಾರಳದಿಂದ ವಂದಿಸುತ್ತೇನೆ ಎಂದು ಹೇಳಿದರು.
ಆರ್ಡಿಪಿಆರ್ ಇಲಾಖೆಯಲ್ಲಿ ಸುಮಾರು 5 ವರ್ಷಗಳ ಕಾಲ ಚಿಕ್ಕಮಗಳೂರು ಹಾಗೂ ತುಮಕೂರು ಜಿಪಂ ಸಿಇಒ ಆಗಿ ಸೇವೆ ಸಲ್ಲಿಸಿದ ಅವಧಿ ನನ್ನ ಜೀವನದ ದೊಡ್ಡ ಸೌಭಾಗ್ಯವೇ ಸರಿ. ನಾನು ಸಿಇಒ ಆಗಿ ಮುಂದವರಿಯದಿದ್ದರೆ ಹಳ್ಳಿಗಾಡಿನ ಜನರು ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ದೊಡ್ಡ ಸಮೂಹಕ್ಕೆ ಸಲ್ಲಿಸಬಹುದಾದ ಅವಕಾಶವನ್ನೇ ಕಳೆದುಕೊಳ್ಳುತ್ತಿದ್ದೆ. ಈ ಸೇವೆಯಲ್ಲಿ ಬದ್ಧತೆ ತೋರಿ ನನ್ನ ಜತೆ ಕೈಜೋಡಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದರು.
ಶಿಕ್ಷಣ ಸಾಮಾಜಿಕ ಹಾಗೂ ವೈಯಕ್ತಿಕ ಪ್ರಗತಿಗೂ ಸಿಕ್ಕಿರುವ ಪ್ರಮುಖ ಅಸ್ತ್ರ. ಈ ಶಿಕ್ಷಣದ ಪ್ರತಿಫಲವಾಗಿ ದೊರೆತಿರುವ ಸರ್ಕಾರಿ ನೌಕರಿಯನ್ನು ದೇಶ ಸೇವೆಗೆ ಸಿಕ್ಕಿರುವ ಮಹತ್ವದ ಅವಕಾಶವೆಂದು ಭಾವಿಸಿ ಅದನ್ನು ಸಾರ್ಥಕಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಲಾಖೆ ಯೋಜನೆಗಳನ್ನು ಶೇ. 100 ರಷ್ಟು ಕಾರ್ಯಗತಗೊಳಿಸೋಣ ಎಂದು ಹೇಳಿದರು.
ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಶಾರದಮ್ಮ, ಜಿಪಂ ಉಪಕಾರ್ಯದರ್ಶಿಗಳಾದ ಸಂಜೀವಪ್ಪ, ಈಶ್ವರಚಂದ್ರ, ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಯೋಜನಾ ನಿರ್ದೇಶಕ ನಾರಾಯಣಸ್ವಾಮಿ, ಮುಖ್ಯಯೋಜನಾಧಿಕಾರಿ ಸಣ್ಣಮಸಿಯಪ್ಪ, ಡಿಎಚ್ಒ ಡಾ.ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಶಿರಾ ಇಇ ಹರೀಶ್, ಜಿಪಂ ನೌಕರ ವೃಂದದಿಂದ ಲಕ್ಷಿ$್ಮ, ಸೋಷಿಯಲ್ ಆಡಿಟ್ನಿಂದ ಚಂದ್ರಣ್ಣ, ಜಿಪಂ ಅಭಿವೃದ್ಧಿ ಶಾಖೆಯ ಮಂಜುನಾಥ್, ಡಿಸಿಎಫ್ ದೇವರಾಜ್ ಉಪಸ್ಥಿತರಿದ್ದರು.
ಸರ್ಕಾರದ ಯೋಜನೆಯ ಅಂತ:ಸತ್ವವನ್ನು ಮೊದಲು ಅರ್ಥ ಮಾಡಿಕೊಂಡು ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಇದಕ್ಕೆ ಶಕ್ತಿ ತುಂಬಬೇಕಾಗಿರುವುದು ಒಳ್ಳೆಯ ಅಧಿಕಾರಿಯ ಲಕ್ಷಣ. ಸೇವೆಯಲ್ಲಿರುವವರು ಯಾವತ್ತೂ ಸಕಾರಾತ್ಮಕ ಅಭಿಪ್ರಾಯ ಇಟ್ಟುಕೊಳ್ಳಬೇಕು. ನಾನು ಏನು ಹೇಳುತ್ತೇನೆ ಅದನ್ನು ನಾನು ಮೊದಲು ಮಾಡಬೇಕು ಎನ್ನುವ ಆಯಾಮದಲ್ಲಿ ಕೆಲಸ ಮಾಡಬೇಕು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ
ನರೇಗಾ, ಜೆಜೆಎಂ ಅನುಷ್ಠಾನದಲ್ಲಿ ರಾಷ್ಟ್ರಮಟ್ಟದಲ್ಲಿ ತುಮಕೂರಿನ ಗರಿ ಮೂಡಿಸುವುದರ ಜತೆಗೆ ತುಮಕೂರು ದಸರಾ, ಕ್ರೀಡಾಕೂಟ ಹೀಗೆ ಜಿಲ್ಲೆಯ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಪ್ರಭು ಹೆಗ್ಗುರುತನ್ನು ಕಾಣಬಹುದು. ಇಂತಹ ಕ್ರಿಯಾಶೀಲ ಅಧಿಕಾರಿಯನ್ನು ಜಿಲ್ಲೆಯಿಂದ ಬೀಳ್ಕೊಡಲು ಮನಸು ಭಾರವಾದರೂ ಡಿಸಿಯಾಗಿ ಉನ್ನತ ಅವಕಾಶ ಅವರಿಗೆ ದೊರೆತಿದೆ. ನಾಯಕತ್ವ ಗುಣ ಅವರಲ್ಲಿದೆ. ಮುಂದೆ ತುಮಕೂರಿಗೆ ಡಿಸಿಯಾಗಿಯೇ ಬರಬೇಕೆಂಬ ಅಭಿಲಾಷೆಯನ್ನು ಬೀಳ್ಕೋಡುಗೆ ಸಂದರ್ಭದಲ್ಲಿ ಮಾತನಾಡಿದವರು ವ್ಯಕ್ತಪಡಿಸಿದರು.